ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಹಜಾರೆ ಬಗ್ಗೆ ಪ್ರಧಾನಿ 'ಬೇಜವಾಬ್ದಾರಿ' ಹೇಳಿಕೆ: ಮೋದಿ ಕಿಡಿ
(Anna Hazare | Narendra Modi | Manmohan Singh | Corruption)
ಹಜಾರೆ ಬಗ್ಗೆ ಪ್ರಧಾನಿ 'ಬೇಜವಾಬ್ದಾರಿ' ಹೇಳಿಕೆ: ಮೋದಿ ಕಿಡಿ
ಗೋಲಕ್ಗಂಜ್ (ಅಸ್ಸಾಂ), ಶುಕ್ರವಾರ, 8 ಏಪ್ರಿಲ್ 2011( 15:22 IST )
ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರ ಹೋರಾಟದ ಕುರಿತು ಪ್ರಧಾನಿ ಮನಮೋಹನ್ ಸಿಂಗ್ ನೀಡಿರುವ ಹೇಳಿಕೆಯು 1975ರ ತುರ್ತು ಪರಿಸ್ಥಿತಿಗೆ ಸಮವಾದ ಪರಿಸ್ಥಿತಿಯನ್ನು ಸೃಷ್ಟಿಸಿದೆ ಎಂದು ಟೀಕಿಸಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ, ಹಜಾರೆ ಹೋರಾಟವು ಜನರಿಂದ ಪ್ರೇರಿತವಾಗಿದ್ದು, ಪ್ರಧಾನಿ ಹೊಣೆಗೇಡಿತನದ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿದರು.
"ಭ್ರಷ್ಟಾಚಾರ ವಿರುದ್ಧ ಹಜಾರೆಯವರ ಉಪವಾಸ ಸತ್ಯಾಗ್ರಹಕ್ಕೆ ಸಮಾಜದ ಎಲ್ಲ ವರ್ಗದಿಂದಲೂ ಬೆಂಬಲ ದೊರೆತಿರುವಾಗ, ಪ್ರಧಾನಮಂತ್ರಿ ಈ ಸಮಸ್ಯೆಯನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ ಮತ್ತು ಬೇಜವಾಬ್ದಾರಿಯುತ ಹೇಳಿಕೆಗಳನ್ನು ನೀಡಿ ದೇಶದಲ್ಲಿ ತುರ್ತು ಪರಿಸ್ಥಿತಿಯಂತಹಾ ಪರಿಸ್ಥಿತಿ ಸೃಷ್ಟಿಸುತ್ತಿದ್ದಾರೆ" ಎಂದು ಬಾಂಗ್ಲಾದೇಶ ಗಡಿಯಲ್ಲಿ ಬಿಜೆಪಿ ಚುನಾವಣಾ ರ‌್ಯಾಲಿಯಲ್ಲಿ ಮಾತನಾಡುತ್ತಾ ಮೋದಿ ಹೇಳಿದರು.
ಕೆಲವು ವ್ಯಕ್ತಿಗಳ ಮತ್ತು ಸ್ಥಾಪಿತ ಹಿತಾಸಕ್ತಿಗಳ ಪ್ರಭಾವಕ್ಕೀಡಾಗಿ ಸಾಮಾಜಿಕ ಕಾರ್ಯಕರ್ತ ಹಜಾರೆ ಅವರು ಉಪವಾಸ ಮಾಡುತ್ತಿದ್ದಾರೆ ಎಂಬ ಸಿಂಗ್ ಹೇಳಿಕೆಯು ಹಜಾರೆಯವರನ್ನು ಅವಮಾನಿಸಿದೆ ಮಾತ್ರವೇ ಅಲ್ಲ, ಇಡೀ ದೇಶಕ್ಕೇ ಮಾಡಿದ ಅಪಮಾನ ಎಂದು ಮೋದಿ ನುಡಿದರು.
ಹಜಾರೆಯವರ ಪ್ರಾಮಾಣಿಕ ಉದ್ದೇಶವನ್ನು ಪ್ರಧಾನಿಯವರು ಎಂದಿಗೂ ಶಂಕಿಸುವಂತಿಲ್ಲ. ಕೇಂದ್ರವು ಹಜಾರೆಯನ್ನು ತನ್ನ ಶತ್ರು ಎಂದು ಪರಿಗಣಿಸಬಾರದು ಮತ್ತು ಭ್ರಷ್ಟಾಚಾರವು ಹದ್ದು ಮೀರಿದ ಹಂತಕ್ಕೆ ತಲುಪಿದೆ ಎಂಬ ಸತ್ಯಾಂಶವನ್ನು ಮನಗಾಣಬೇಕು ಎಂದು ಗುಜರಾತ್ ಮುಖ್ಯಮಂತ್ರಿ ಹೇಳಿದರು.
ಜಯಪ್ರಕಾಶ್ ನಾರಾಯಯಣ್ ಅವರು 1975ರಲ್ಲಿ ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್ ಸರಕಾರದ ದಬ್ಬಾಳಿಕೆ ಮತ್ತು ಭ್ರಷ್ಟಾಚಾರದ ವಿರುದ್ಧ ಉಪವಾಸ ಸತ್ಯಾಗ್ರಹ ನಡೆಸಿದ ಸಂದರ್ಭದ ಘಟನೆಗಳಿಗೆ ಇಂದಿನ ಪರಿಸ್ಥಿತಿಯೂ ಸಮವಾಗಿದೆ ಎಂದು ನರೇಂದ್ರ ಮೋದಿ ತಿಳಿಸಿದರು.