ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಜನಾಂದೋಲನಕ್ಕೆ ಜಯ ಸನ್ನಿಹಿತ;ಹಜಾರೆ ಸಮರಕ್ಕೆ ಮಣಿದ ಕೇಂದ್ರ? (Congress | Abhishek Manu Singhvi | Hazare | Lokpal Bill)
PTI
ಭ್ರಷ್ಟಾಚಾರದ ವಿರುದ್ಧ ಸಮರ ಸಾರಿ ಜನಲೋಕಪಾಲ್ ಮಸೂದೆ ಜಾರಿಗೆ ಆಗ್ರಹಿಸಿ ಕಳೆದ ನಾಲ್ಕು ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಅಣ್ಣಾ ಹಜಾರೆ ಅವರ ಮನವೊಲಿಸುವ ನಿಟ್ಟಿನಲ್ಲಿ ವಿವಿಧ ಕಸರತ್ತು ನಡೆಸುತ್ತಿರುವ ಕೇಂದ್ರ ಸರಕಾರ, ಜನಲೋಕಪಾಲ್ ಮಸೂದೆ ಮಂಡನೆಗೆ ಸಮಿತಿ ರಚಿಸುವುದಾಗಿ ಘೋಷಿಸಿದೆ. ಏತನ್ಮಧ್ಯೆ, ಸರಕಾರದ ಯಾವುದೇ ಒತ್ತಡದ ತಂತ್ರಕ್ಕೆ ಬಗ್ಗಲ್ಲ ಎಂದು ಪ್ರತಿಕ್ರಿಯಿಸಿರುವ ಹಜಾರೆ ಸರಕಾರದ ಪ್ರಸ್ತಾಪನೆ ತನಗೆ ತೃಪ್ತಿ ತಂದಿಲ್ಲ ಎನ್ನುವ ಮೂಲಕ ಬಿಕ್ಕಟ್ಟು ಮುಂದುವರಿದಂತಾಗಿದೆ.

ಹಜಾರೆ ತಿರುಗೇಟು
ಜಂತರ್ ಮಂತರ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹಜಾರೆ, ಸರಕಾರದೊಂದಿಗೆ ಮಾತುಕತೆ ಜಾರಿಯಲ್ಲಿದ್ದು ಸರಕಾರದ ಪ್ರಸ್ತಾವನೆ ಸರಿಯಿಲ್ಲ, ಭ್ರಷ್ಟಾಚಾರದ ವಿರುದ್ಧ ಜನರಲ್ಲಿ ಆಕ್ರೋಶ ಉಂಟಾಗಿ ಅಭಿಯಾನಕ್ಕೆ ಭಾರಿ ಜನಬೆಂಬಲ ವ್ಯಕ್ತವಾಗಿದೆ. ಮೂರು ಸುತ್ತಿನ ಮಾತುಕತೆಗಳಲ್ಲಿ ಫಲ ದೊರೆತಿಲ್ಲ. ಇದುವರೆಗೂ ಸರಕಾರದಿಂದ ಬೇಡಿಕೆಗಳಿಗೆ ಸ್ಪಂದನೆ ದೊರೆತಿಲ್ಲ.

ಕೇಂದ್ರ ಸಚಿವರಿಗೆ ಚುನಾವಣೆ ಹಿನ್ನೆಲೆಯಲ್ಲಿ ಸಮಯವಿಲ್ಲವೆಂದು ಹೇಳಿದ್ದಾರೆ. ಮಸೂದೆ ಜಾರಿ ಬಗ್ಗೆ ಅಧಿಸೂಚನೆ ಹೊರಡಿಸಬೇಕು ಎನ್ನುವುದು ನಮ್ಮ ಬೇಡಿಕೆಯಾಗಿದೆ ಸರಕಾರ 50-50 ಜಂಟಿ ಸಮಿತಿಗೆ ಸಮ್ಮತಿಸಿದೆ. ಸರಕಾರದ ಪ್ರತಿನಿಧಿಗಳು ಸಮಿತಿಯ ಅಧ್ಯಕ್ಷರಾಗಿರಬಾರದು ಎಂಬುದು ನಮ್ಮ ಬೇಡಿಕೆ ಎಂದು ಹೇಳಿದ್ದಾರೆ.

ಜಂಟಿ ಸಮಿತಿಗೆ ಇಬ್ಬರು ಅಧ್ಯಕ್ಷರಿರಲಿ. ಸರಕಾರದ ಕಡೆಯಿಂದ ಒಬ್ಬರು ಅಧ್ಯಕ್ಷರು ಹಾಗೂ ನಮ್ಮ ಕಡೆಯಿಂದ ಮತ್ತೊಬ್ಬ ಅಧ್ಯಕ್ಷರ ನೇಮಕವಾಗಲಿ. ಸರಕಾರದ ಯಾವುದೇ ಒತ್ತಡ ತಂತ್ರಕ್ಕೆ ಮಣಿಯುವುದಿಲ್ಲ ಎಂದು ಹಜಾರೆ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಈ ಮಸೂದೆ ಜಾರಿ ಸಂಬಂಧ ಪ್ರಾಣ ಬಿಟ್ಟೇವು, ಹೋರಾಟ ಕೈ ಬಿಡುವುದಿಲ್ಲ ಎಂದು ಕೇಂದ್ರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಮುಂಗಾರು ಅಧಿವೇಶನಕ್ಕೆ ಮುನ್ನ ಕರಡು ರಚನೆಯಾಗಲಿ. ಲೋಕಪಾಲ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಿ ಜಾರಿಗೆ ತರುವವರೆಗೆ ಹೋರಾಟ ನಿಲ್ಲಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಹಜಾರೆ ತಿಳಿಸಿದ್ದಾರೆ.

ಏತನ್ಮಧ್ಯೆ, ಕಾಂಗ್ರಸ್ ಪಕ್ಷದ ವಕ್ತಾರ ಸಿಂಘ್ವಿ ಮಾತನಾಡಿ, ಹಜಾರೆಯವರ ಸಂಪೂರ್ಣ ಬೇಡಿಕೆಗಳನ್ನು ಜಾರಿಗೆ ತರಲು ಸಾಧ್ಯವಿಲ್ಲ. ಪ್ರಸಕ್ತ ಸಂದರ್ಭದಲ್ಲಿ ಜನಲೋಕಪಾಲ ಮಸೂದೆ ಜಾರಿಗಾಗಿ ಅಧಿಸೂಚನೆ ಹೊರಡಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಅಣ್ಣಾ ಹಜಾರೆ ಸಮರಕ್ಕೆ ಮಣಿದ ಕೇಂದ್ರ?:
ಭ್ರಷ್ಟಾಚಾರದ ವಿರುದ್ಧ ಸಮರ ನಡೆಸಿ ಜನಲೋಕಪಾಲ್ ವರದಿ ಜಾರಿಗೆ ಆಗ್ರಹಿಸಿ ಕಳೆದ ನಾಲ್ಕು ದಿನಗಳಿಂದ ಹೋರಾಟ ನಡೆಸುತ್ತಿದ್ದ ಅಣ್ಣಾ ಹಜಾರೆ ಹಾಗೂ ಲಕ್ಷಾಂತರ ಜನರ ಒತ್ತಡಕ್ಕೆ ಕೇಂದ್ರ ಸರಕಾರ ಕೊನೆಗೂ ಮಣಿದಿದೆ ಎನ್ನಲಾಗಿದೆ. ಶನಿವಾರ ರಾತ್ರಿಯ ಬೆಳವಣಿಗೆಯಲ್ಲಿ ಕೇಂದ್ರ ಸಚಿವ ಕಪಿಲ್ ಸಿಬಲ್ ನಿವಾಸದಲ್ಲಿ ಅಣ್ಣಾ ಬೆಂಬಲಿಗರಾದ ಸ್ವಾಮಿ ಅಗ್ನಿವೇಶ್, ಕಿರಣ್ ಬೇಡಿ ಹಾಗೂ ಕೇಜ್ರಿವಾಲ್ ಮಾತುಕತೆ ನಡೆಸಿದ್ದರು.

ಮಾತುಕತೆ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಕಪಿಲ್ ಸಿಬಲ್ ಜತೆಗಿನ ಮಾತುಕತೆಯ ವಿವರವನ್ನು ಅಣ್ಣಾ ಹಜಾರೆ ಅವರಿಗೆ ತಿಳಿಸುತ್ತೇವೆ. ಅವರು ಅಂತಿಮ ನಿರ್ಧಾರ ಪ್ರಕಟಿಸುತ್ತಾರೆ ಎಂದು ತಿಳಿಸಿದರು.

ಏತನ್ಮಧ್ಯೆ, ಜನಲೋಕಪಾಲ್ ಸಮಿತಿಯಲ್ಲಿ ಸಹ ಅಧ್ಯಕ್ಷರು ಇರಬೇಕೆಂಬ ಅಣ್ಣಾ ಅವರ ಬೇಡಿಕೆಗೆ ಕೇಂದ್ರ ಒಪ್ಪಿದ್ದು, ಸಮಿತಿ ರಚನೆ ಅಧಿಸೂಚನೆಗೂ ಅಸ್ತು ಎಂದು ಹೇಳಿರುವುದಾಗಿ ದೆಹಲಿ ಮೂಲಗಳು ತಿಳಿಸಿವೆ. ಅಂತೂ ಭ್ರಷ್ಟಾಚಾರ ವಿರುದ್ಧದ ಅಣ್ಣಾ ಹೋರಾಟಕ್ಕೆ ದೇಶಾದ್ಯಂತ ಅಭೂತಪೂರ್ವ ಬೆಂಬಲ ದೊರಕಿದ್ದು, ಜನಶಕ್ತಿಗೆ ಕೇಂದ್ರ ಸರಕಾರ ಮಣಿಯುವ ಲಕ್ಷಣಗಳು ಗೋಚರಿಸತೊಡಗಿವೆ. ಸಮಿತಿಯಲ್ಲಿ ಕೇಂದ್ರ ಸಚಿವ ಪ್ರಣಬ್ ಮುಖರ್ಜಿ ಹಾಗೂ ಸಹ ಅಧ್ಯಕ್ಷರಾಗಿ ಮಾಜಿ ಸಚಿವ ಶಾಂತಿಭೂಷಣ್ ಅವರನ್ನು ನೇಮಕ ಮಾಡಲು ಕೇಂದ್ರ ಒಲವು ತೋರಿದೆ ಎನ್ನಲಾಗಿದೆ.
ಇವನ್ನೂ ಓದಿ