ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಗೋವಾ ಗೃಹ ಮಂತ್ರಿ ಮಕ್ಕಳಿಗೆ ಸರ್ಕಾರಿ ವೇತನ! (Corruption | Ravi Naik | Goa | Fiona | Scarlett Keeling | Roy Naik | Ritesh)
ಗೋವಾ ಗೃಹ ಮಂತ್ರಿ ಮಕ್ಕಳಿಗೆ ಸರ್ಕಾರಿ ವೇತನ!
ಪಣಜಿ, ಶನಿವಾರ, 9 ಏಪ್ರಿಲ್ 2011( 09:58 IST )
ಅತ್ತ ಕಡೆ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಾ, ಕಟ್ಟು ನಿಟ್ಟಿನ ಜನ ಲೋಕಪಾಲ ಮಸೂದೆಗಾಗಿ ಗಾಂಧಿವಾದಿ ಅಣ್ಣಾ ಹಜಾರೆ ಮಾಡುತ್ತಿರುವ ಉಪವಾಸದ ಪರವಾಗಿ ಇಡೀ ದೇಶಕ್ಕೆ ದೇಶವೇ ಸೆಟೆದು ನಿಂತಿದ್ದರೆ, ಗೋವಾದ ಕಾಂಗ್ರೆಸ್ ಮಂತ್ರಿಯೊಬ್ಬರ ಮಕ್ಕಳು ಸರಕಾರದಿಂದ ಬಿಟ್ಟಿ ವೇತನ ಪಡೆಯುತ್ತಿರುವ ಘಟನೆಯೊಂದು ಬೆಳಕಿಗೆ ಬಂದಿದೆ.
ಗೋವಾ ಗೃಹ ಸಚಿವ ರವಿ ನಾಯ್ಕ್ ಅವರ ಮಕ್ಕಳಿಬ್ಬರು, ಗೃಹ ಸಚಿವರ ಆಪ್ತ ಕಾರ್ಯದರ್ಶಿಗಳ ಹೆಸರಿನಲ್ಲಿ ಮನೆಯಲ್ಲಿ ಕುಳಿತೇ ಸರಕಾರದಿಂದ ಸಂಬಳ ಪಡೆಯುತ್ತಿದ್ದಾರೆ.
ಗೋವಾ ವಿಧಾನಸಭೆಯಲ್ಲಿ ಸ್ವತಃ ಮುಖ್ಯಮಂತ್ರಿ ದಿಗಂಬರ್ ಕಾಮತ್ ಅವರು ಮಂಡಿಸಿದ ಲಿಖಿತ ಉತ್ತರದಲ್ಲಿ, ಮಂತ್ರಿಯ ಪುತ್ರರಾದ ರಿತೇಶ್ ಮತ್ತು ರಾಯ್ ನಾಯ್ಕ್ ಅವರು ರವಿ ನಾಯ್ಕ್ ಆಪ್ತ ಸಹಾಯಕರ ರೂಪದಲ್ಲಿ ಮಾಸಿಕವಾಗಿ ಅನುಕ್ರಮವಾಗಿ 29,441 ರೂ. ಹಾಗೂ 19,904 ರೂ. ವೇತನ ಪಡೆಯುತ್ತಿದ್ದಾರೆ ಎಂದರು.
ರಿತೇಶ್ ನಾಯ್ಕ್ ಅವರನ್ನು ತಂದೆ ರವಿ ನಾಯ್ಕ್ ಅವರ "ಆಪ್ತ ಕಾರ್ಯದರ್ಶಿ" ಎಂದು ತೋರಿಸಿದ್ದರೆ, ಕಿರಿಯ ಪುತ್ರ ರಾಯ್ ಅವರನ್ನು "ಆಪ್ತ ಸಹಾಯಕ" ಎಂದು ದಾಖಲೆಗಳಲ್ಲಿ ತೋರಿಸಲಾಗಿದೆ.
ಇವರ ನೇಮಕಾತಿಯು ತಾತ್ಕಾಲಿಕ ಮತ್ತು ಇದಕ್ಕೆ ಸರಕಾರದ ಸಾಮಾನ್ಯ ಆಡಳಿತ ಇಲಾಖೆಯ ಅನುಮತಿಯೂ ಇದೆ ಎಂದು ಲಿಖಿತ ಉತ್ತರದಲ್ಲಿ ತಿಳಿಸಲಾಗಿದೆ.
ವಿಶೇಷವೆಂದರೆ, ಗೋವಾದ ಮಹಾನ್ ಗೃಹ ಸಚಿವರ "ಆಪ್ತ ಸಹಾಯಕ" ರಾಯ್‌ಗೆ ಇಸ್ರೇಲಿ ಮಾಫಿಯಾ ಜತೆ ಸಂಬಂಧ ಇದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ಮತ್ತು ಪ್ರತಿಪಕ್ಷವಾದ ಬಿಜೆಪಿ ಈಗಾಗಲೇ ಆರೋಪ ಮಾಡಿವೆ.
ಬ್ರಿಟಿಷ್ ತರುಣಿ ಸ್ಕಾರ್ಲೆಟ್ ಕೀಲಿಂಗ್ ಹತ್ಯೆಯ ಪ್ರಕರಣ ನೆನಪಿರಬಹುದು. ಲೈಂಗಿಕ ಪೀಡನೆಗೊಳಗಾಗಿ, ಹಂತಕರಿಗೆ ಬಲಿಯಾದ ಈಕೆಯ ಕೇಸಿನ ವಿಚಾರಣೆ ಸಂದರ್ಭದಲ್ಲಿ ಕಳೆದ ವರ್ಷ, ಅವಳ ತಾಯಿ ಫಿಯೋನಾ ಮ್ಯಾಕಿಯೊನ್ ಕೂಡ, ರಾಯ್ ನಾಯ್ಕ್‌ಗೆ ಮಾದಕ ದ್ರವ್ಯ ಮಾಫಿಯಾದ ಸಂಪರ್ಕವಿದೆ ಎಂದು ಆರೋಪಿಸಿದ್ದರು.
"ರವಿ ನಾಯ್ಕ್ ಅವರು ತಮ್ಮ ಮಗನೊಂದಿಗೆ ಈ ಮಾದಕ ದ್ರವ್ಯ ಸಂಪರ್ಕದ ಕೊಂಡಿಯಾಗಿದ್ದು, ಪೊಲೀಸರೂ ಇದರಲ್ಲಿ ಭಾಗಿ ಎಂದು ನನಗೆ ತಿಳಿದಿದೆ. ನನ್ನ ಮಗಳ ಹತ್ಯೆಯಾದ ತಕ್ಷಣದಿಂದಲೇ ನನಗೆ ರವಿ ನಾಯ್ಕ್ ಬಗ್ಗೆ ಸಂದೇಹ ಹುಟ್ಟಿಕೊಂಡಿತ್ತು" ಎಂದು ವಿಚಾರಣೆ ಸಂದರ್ಭದಲ್ಲಿ ಫಿಯೋನಾ ಅವರು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದರು.
ಆದರೆ, ರಾಯ್ ಮತ್ತು ರವಿ ಇಬ್ಬರೂ ಕೂಡ ತಮ್ಮ ಮೇಲಿನ ಆರೋಪಗಳನ್ನು ಅಲ್ಲಗಳೆದಿದ್ದಾರೆ.