ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮಸೂದೆಗೆ ಸಂಸತ್ತಿನಲ್ಲಿ ಅಡ್ಡಿಪಡಿಸಿದ್ರೆ ಮತ್ತೆ ಹೋರಾಟ: ಹಜಾರೆ (Jan Lokpal Bill | Anna Hazare | Fast | Corruption | Monsoon Session)
WD
ಭ್ರಷ್ಟಾಚಾರ ವಿರುದ್ಧ ಸಮರ ಸಾರಿರುವ ಅಣ್ಣಾ ಹಜಾರೆಯವರ ಉಪವಾಸ ಸತ್ಯಾಗ್ರಹವು ದೇಶಾದ್ಯಂತ ಜನಾಂದೋಲನದ ಕಿಚ್ಚು ಹಚ್ಚಿರುವುದರಿಂದ ಬೆಚ್ಚಿರುವ ಕೇಂದ್ರ ಸರಕಾರವು, ಬೇಡಿಕೆಗಳಿಗೆ ಸ್ಪಂದಿಸುವ ಮೂಲಕ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡಿದೆಯಾದರೂ, ಮುಂಗಾರು ಅಧಿವೇಶನದಲ್ಲಿ ಕೇಂದ್ರ ಸರಕಾರವೇನಾದರೂ ಲೋಕಪಾಲ ಮಸೂದೆ ಜಾರಿಗೊಳಿಸದೇ ಹೋದರೆ, ಆಗಸ್ಟ್ 15ರಂದು ಕೆಂಪುಕೋಟೆಯಲ್ಲಿ ಮತ್ತೆ ಸತ್ಯಾಗ್ರಹ ಆರಂಭಿಸುವುದಾಗಿ ಹಜಾರೆ ಎಚ್ಚರಿಸಿದ್ದಾರೆ.

ಬಾಲಕಿಯೊಬ್ಬಳು ಕುಡಿಸಿದ ನಿಂಬೆ ಹಣ್ಣಿನ ಪಾನೀಯ ಸೇವಿಸುವ ಮೂಲಕ ನಾಲ್ಕು ದಿನಗಳ (ಅವಿರತ 97 ಗಂಟೆಗಳ) ಉಪವಾಸ ಸತ್ಯಾಗ್ರಹ ಕೊನೆಗೊಳಿಸಿ, ಹೋರಾಟದಲ್ಲಿ ಕೈಜೋಡಿಸಿ ನೆರೆದಿದ್ದ ಅಪಾರ ನಾಗರಿಕ ಸಮೂಹವನ್ನು ಉದ್ದೇಶಿಸಿ ಶನಿವಾರ ಮಾತನಾಡಿದ ಅವರು, ಜನ ಬೆಂಬಲಕ್ಕೆ ಸರಕಾರ ಮಣಿದಿದೆ. ಇದು ದೇಶದ ಜನತೆಗೆ ದೊರೆತ ವಿಜಯವೇ ಹೊರತು ತನ್ನದಲ್ಲ. ಈ ಬಗ್ಗೆ ಬೆಂಬಲ ನೀಡಿದ ಎಲ್ಲರಿಗೂ ಕೃತಜ್ಞತೆಗಳು. ವಿಶೇಷವಾಗಿ ಒಳ್ಳೆಯ ಬೆಂಬಲ ನೀಡಿದ ಪ್ರಜಾಪ್ರಭುತ್ವದ ನಾಲ್ಕನೇ ಆಧಾರ ಸ್ತಂಭವಾಗಿರುವ ಮಾಧ್ಯಮಗಳಿಗೆ ಧನ್ಯವಾದ ಎಂದು ಹೇಳಿದರು.

ಸಂಸತ್ತಿನಲ್ಲಿ ಲೋಕಪಾಲ ಮಸೂದೆ ಮಂಡಿಸುವುದಾಗಿ ಈಗಾಗಲೇ ಸರಕಾರವು ಅಧಿಸೂಚನೆ ಹೊರಡಿಸಿದೆ. ಈ ಮಸೂದೆಗೆ ಯಾವುದೇ ರಾಜಕಾರಣಿಗಳು ಅಡ್ಡಿಪಡಿಸಿದರೆ, ಮಸೂದೆಯು ಅಂಗೀಕಾರವಾಗದಿದ್ದರೆ ಕೂಡ ಮತ್ತೆ ನಿರಶನ ಸತ್ಯಾಗ್ರಹ ನಡೆಸಲಾಗುತ್ತದೆ ಎಂದು ಅಣ್ಣಾ ಹಜಾರೆ ಪುನರುಚ್ಚರಿಸಿದರು.

ಅಂತ್ಯವಲ್ಲ, ಆರಂಭ
ಇದು ಹೋರಾಟದ ಅಂತ್ಯ ಎಂದು ತಿಳಿದುಕೊಳ್ಳಬೇಕಾಗಿಲ್ಲ. ಹೋರಾಟ ಇಲ್ಲಿಗೇ ಮುಗಿದಿಲ್ಲ. ಇದುಆರಂಭವಷ್ಟೇ ಎಂದು ಹೇಳಿದ ಅಣ್ಣಾ ಹಜಾರೆ, ಲೋಕಪಾಲ ಮಸೂದೆಯು ಜಾರಿಯಾಗಿ ಕಾಯ್ದೆ ರೂಪಕ್ಕೆ ಬಾರದಿದ್ದರೆ ಮತ್ತೆ ಹೋರಾಟ ನಡೆಸುತ್ತೇವೆ. ಈಗ ಹೋರಾಟದಲ್ಲಿ ಪಾಲ್ಗೊಂಡಿರುವ ಹೆಸರು, ವಿಳಾಸ, ದೂರವಾಣಿ ಸಂಖ್ಯೆಗಳನ್ನೆಲ್ಲಾ ತೆಗೆದುಕೊಂಡಿದ್ದು, ಅಗತ್ಯ ಬಿದ್ದಾಗ ಕರೆ ನೀಡಿದರೆ ಸಹಕರಿಸಬೇಕೆಂದು ಕೇಳಿಕೊಂಡರು.

ರಾಜ್ಯಗಳಿಗೆ ಪ್ರವಾಸ...
ನಾನಾ ರಾಜ್ಯಗಳಿಗೆ ಪ್ರವಾಸ ಮಾಡಿ, ಭ್ರಷ್ಟಾಚಾರದ ವಿರುದ್ಧ ಜನರನ್ನು ಹುರಿದುಂಬಿಸುವುದಾಗಿ ಹೇಳಿದ ಹಜಾರೆ, ಭ್ರಷ್ಟಾಚಾರದ ವಿರುದ್ಧ ಯುವ ಜನತೆ ಸಿಡಿದೆದ್ದಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.

ಓಟಿನ ವ್ಯವಸ್ಥೆಯೇ ಬದಲಾಗಬೇಕು...
ಹೋರಾಟದಲ್ಲಿ ಎಲ್ಲರೂ ಕೈಜೋಡಿಸಿದ್ದಾರೆ. ಜಾತಿ, ಪಂಥ, ವರ್ಗ, ವಯಸ್ಸಿನ ಭೇದವಿಲ್ಲದೆ ಈ ಹೋರಾಟ ನಡೆದಿದೆ. ನಾವೆಲ್ಲಾ ಒಂದಾಗಿದ್ದೇವೆ. ಯುವಕರು ಮುಂದೆ ಬಂದಿರುವಾಗ ನಮ್ಮ ಜವಾಬ್ದಾರಿ ಮತ್ತಷ್ಟು ಹೆಚ್ಚಿದೆ. ಹೋರಾಟದ ದಾರಿ ದೀರ್ಘವಾಗಿದೆ ಎಂದ ಹಜಾರೆ, ಮತದಾನದ ವ್ಯವಸ್ಥೆಯೇ ಬದಲಾಗಬೇಕು, ಸ್ವಚ್ಛ ಚಾರಿತ್ರ್ಯವುಳ್ಳವರು ಮಾತ್ರವೇ ಶಾಸನಸಭೆಗಳಿಗೆ ಆಯ್ಕೆಯಾಗುವಂತೆ ಮಾಡಬೇಕು. 10 ರಾಜಕೀಯ ಪಕ್ಷಗಳಿದ್ದರೆ, ಮತದಾನದ ವೇಳೆ 11ನೇ ಆಯ್ಕೆಯಾಗದಿ "ಯಾರಿಗೂ ನನ್ನ ಮತ ಇಲ್ಲ" ಎಂಬ ಗುಂಡಿಯನ್ನೂ ಮತಯಂತ್ರದಲ್ಲಿ ಸೇರಿಸಬೇಕು. 11ನೇ ಆಯ್ಕೆಯ ಮತಗಳೇ ಹೆಚ್ಚಾಗಿದ್ದರೆ, ಇಲ್ಲಿ ಚುನಾವಣೆಯೇ ರದ್ದು ಎಂದು ಘೋಷಿಸಬೇಕು ಎಂದು ಒತ್ತಾಯಿಸಿದರು.

ಈ ದೇಶಕ್ಕೆ ಲೋಕಪಾಲ ಮಸೂದೆ ಮಾತ್ರವೇ ಅಲ್ಲ, ಇನ್ನೂ ಹಲವಾರು ಕಾನೂನು ಬದಲಾವಣೆಗಳ ಅಗತ್ಯವಿದೆ. ಅವುಗಳನ್ನು ಹಂತಹಂತವಾಗಿ ಕೈಗೆತ್ತಿಕೊಳ್ಳಲಾಗುತ್ತದೆ ಎಂದು ಹಜಾರೆ ಹೇಳಿದರು. ಕೆಲವು ಉಪವಾಸ ನಿರತರ ಆರೋಗ್ಯ ಸ್ಥಿತಿ ತೀರಾ ಹದಗೆಟ್ಟಿತ್ತು. ಇದರಿಂದ ಆತಂಕಗೊಂಡ ಸರಕಾರ ಈಗ ನಮ್ಮ ಬೇಡಿಕೆಗಳಿಗೆ ಒಪ್ಪಿದೆ ಎಂದ ಹಜಾರೆ, ದೇಶಾದ್ಯಂತ ಸಂಚರಿಕೆ ಎಲ್ಲರನ್ನೂ ಮತ್ತೆ ಭೇಟಿಯಾಗುವುದಾಗಿ ಹೇಳಿದರು.

ನಮಗಾಗಿಯೇ ಹೋರಾಟ: ಕಿರಣ್ ಬೇಡಿ
ಈ ಸಂದರ್ಭ ಮಾತನಾಡಿದ ದೇಶದ ಮೊದಲ ಮಹಿಳಾ ಐಪಿಎಸ್ ಅಧಿಕಾರಿ ಖ್ಯಾತಿಯ ಕಿರಣ್ ಬೇಡಿ, ನಾವು ಮಾಡಿದ ಈ ತ್ಯಾಗಗಳೆಲ್ಲವೂ ಆತ್ಮ ಗೌರವಕ್ಕೋಸ್ಕರ. ಇದನ್ನು ಯಾರಿಗೋ ಬೇಕಾಗಿ ನಾವು ಮಾಡಿಲ್ಲ. ಇದನ್ನು ಮಾಡಿದ್ದು ನಮ್ಮೆಲ್ಲರ ಒಳಿತಿಗಾಗಿ ಎಂದು ಹೇಳಿದರು.

ಅಣ್ಣಾ ಹಜಾರೆ ಉಪವಾಸ ಅಂತ್ಯಗೊಳಿಸುತ್ತಿರುವಂತೆಯೇ, ದೇಶಾದ್ಯಂತ ಉಪವಾಸ ಹೋರಾಟ ಆರಂಭಿಸಿದ್ದ ಬೆಂಬಲಿಗರು ಕೂಡ ಉಪವಾಸ ಅಂತ್ಯಗೊಳಿಸಿದರು. ಜಂತರ್ ಮಂತರ್‌ನಲ್ಲಿ ತಮ್ಮ ಜತೆ ಕೈಜೋಡಿಸಿದ ಮಹಿಳೆಯರಿಗೆ ಅಣ್ಣಾ ಅವರು ಸ್ವತಃ ಲಿಂಬೆಹಣ್ಣಿನ ಪಾನಕ ನೀಡುತ್ತಾ, ನಿರಶನ ವ್ರತ ಭಂಗ ಮಾಡಿದ ಬಳಿಕವಷ್ಟೇ ತಾವೂ ಉಪವಾಸ ಕೈಬಿಟ್ಟರು. ದೇಶದ ವಿವಿಧೆಡೆ ಅಣ್ಣಾ ಹಜಾರೆ ಕ್ರಮ ಬೆಂಬಲಿಸಿ ಧರಣಿ, ಸತ್ಯಾಗ್ರಹ ನಡೆಸಿದವರು ಅಲ್ಲಲ್ಲಿ ಸಿಹಿ ತಿಂಡಿ ಹಂಚಿ, ಪಟಾಕಿ ಸಿಡಿಸಿ ಸಂತೋಷದಿಂದ ತಮ್ಮ ಹೋರಾಟಕ್ಕೂ ವಿರಾಮ ಹಾಡಿದರು. ದೇಶಕ್ಕೆ ಸ್ವಾತಂತ್ರ್ಯ ದೊರೆತಂತಹಾ ಸಂತಸವು ಎಲ್ಲ ಹೋರಾಟಗಾರರ ಮುಖದಲ್ಲಿ ವ್ಯಕ್ತವಾಗುತ್ತಿತ್ತು.
ಇವನ್ನೂ ಓದಿ