ಪುಡಾರಿಗಳು ಜಗ್ಗಲ್ಲ, ದೊಡ್ಡ ಹೋರಾಟಕ್ಕೆ ಸಜ್ಜಾಗಿ: ಅಣ್ಣಾ ಹಜಾರೆ
ನವದೆಹಲಿ, ಭಾನುವಾರ, 10 ಏಪ್ರಿಲ್ 2011( 09:20 IST )
ಈ ದಪ್ಪ ಚರ್ಮದ "ಅಧಿಕಾರ ದಾಹಿ" ರಾಜಕಾರಣಿಗಳು ಭ್ರಷ್ಟಾಚಾರವನ್ನು ತಡೆಯಬಲ್ಲ ಅಥವಾ ಅವರು ಅನುಭವಿಸುತ್ತಿರುವ ಅಧಿಕಾರದ ಮೇಲೆ 'ಬೆಳಕು ಚೆಲ್ಲುವ' ಅತ್ಯಂತ ಕಠಿಣ ಕಾಯಿದೆಯನ್ನು ಅಷ್ಟು ಸುಲಭವಾಗಿ ಒಪ್ಪಲಾರರು. ಹೀಗಾಗಿ ಎಲ್ಲ ನಾಗರಿಕರು "ದೊಡ್ಡ ಹೋರಾಟ"ಕ್ಕೆ ಸಜ್ಜಾಗಿರಬೇಕಾಗುತ್ತದೆ ಎಂದು ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಎಚ್ಚರಿಸಿದ್ದಾರೆ.
97 ಗಂಟೆಗಳ ಉಪವಾಸ ಸತ್ಯಾಗ್ರಹ ಕೊನೆಗೊಳಿಸಿದ ಬಳಿಕ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ 72ರ ಹರೆಯದ ಅಣ್ಣಾ ಹಜಾರೆ, ಸಂಸದರು ಈ ಕಟ್ಟು ನಿಟ್ಟಿನ ಕಾಯ್ದೆ ಜಾರಿಗೊಳಿಸಲು ಬಿಡುವುದರ ಬಗ್ಗೆ ಸಂದೇಹ ವ್ಯಕ್ತಪಡಿಸಿದರಲ್ಲಗದೆ, ಈ ವಿಷಯದಲ್ಲಿ ಜನರು ಖಂಡಿತಾ ಒಗ್ಗಟ್ಟಾಗುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಸಂಸದರು ಮತ್ತು ಶಾಸಕರನ್ನು ಜನರ ಸೇವಕರಾಗಿರಲು ನಾವು ಆರಿಸುತ್ತೇವೆಯೇ ಹೊರತು, ಜನರ ಒಡೆಯರಾಗಲು ಅಲ್ಲ. ಆದರೆ ಈ ಚುನಾಯಿತ ಪ್ರತಿನಿಧಿಗಳು ಇದನ್ನು ಮರೆತುಬಿಟ್ಟಿದ್ದಾರೆ ಎಂದು ವಿಷಾದಿಸಿದ ಅವರು, ಸಂಸತ್ತಿನಲ್ಲಿ ಈ ಮಸೂದೆ ಅಂಗೀಕಾರವಾಗಬೇಕಿದ್ದರೆ ದೊಡ್ಡ ಹೋರಾಟದ ಅಗತ್ಯ ಬೀಳಬಹುದು, ಯಾಕೆಂದರೆ ಇದು ತಮ್ಮ ಅಧಿಕಾರಗಳನ್ನೆಲ್ಲಾ ಕಸಿದುಕೊಳ್ಳುತ್ತದೆ ಎಂಬ ಆತಂಕ ಅವರಿಗೆ ಎಂದು ಶಂಕೆ ವ್ಯಕ್ತಪಡಿಸಿದರು.
ಸಿಬಿಐ, ಸಿವಿಸಿ ಮತ್ತಿತರ ಏಜೆನ್ಸಿಗಳು ಸರಕಾರದ ನಿಯಂತ್ರಣದಲ್ಲೇ ಇವೆ. ಹೀಗಾಗಿ ಅವುಗಳಿಗೆ ಪರಿಣಾಮಕಾರಿಯಾಗಿ ಭ್ರಷ್ಟಾಚಾರ ನಿಗ್ರಹಿಸುವುದು ಸಾಧ್ಯವಿಲ್ಲ. ಲೋಕಪಾಲ ಕಾಯಿದೆ ಜಾರಿಗೆ ಬಂದರೆ, ಅದಕ್ಕೆ ಚುನಾವಣಾ ಆಯೋಗದಂತೆಯೇ ಸ್ವಾಯತ್ತತೆ ಇರುತ್ತದೆ ಎಂದ ಅವರು, ಜನತೆ ಭ್ರಷ್ಟಾಚಾರದಿಂದ ರೋಸಿ ಹೋಗಿರುವ ಕಾರಣದಿಂದಾಗಿಯೇ ತನ್ನ ಪ್ರತಿಭಟನೆಗೆ ಈ ರೀತಿಯ ಅಭೂತಪೂರ್ವ ಬೆಂಬಲ ದೊರೆಯಿತು ಎಂದು ಅಭಿಪ್ರಾಯಪಟ್ಟರು.
ನೀವು ಆಧುನಿಕ ಗಾಂಧೀಯಂತೆ ರಾಷ್ಟ್ರೀಯ ಹೀರೋ ಆಗಿದ್ದೀರೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ತಾನು ಮಹಾತ್ಮ ಗಾಂಧೀಜಿಯ ಪಾದದ ಬಳಿ ಕೂರಲೂ ಅರ್ಹತೆಯಿಲ್ಲದವನು ಎಂದರು. ಆದರೆ ಅವರ ವಿಚಾರ ಸರಣಿಗಳು ತನ್ನ ಮೇಲೆ ಪ್ರಭಾವ ಬೀರಿವೆ ಎಂದರು.