ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಉಲ್ಟಾ ಹೊಡೆದ ಬಾಬಾ;ಸಮಿತಿಯಲ್ಲಿ ಬೇಡಿಗೂ ಸ್ಥಾನ ನೀಡ್ಬೇಕಿತ್ತು (Baba Ramdev | Lokpal panel | Shanti Bhushan | Kiran Bedi | Anna Hazare)
ಬಹು ನಿರೀಕ್ಷೆಯ ಜನಲೋಕಪಾಲ್ ಮಸೂದೆ ಕರಡು ಸಮಿತಿಯಲ್ಲಿ ಮಾಜಿ ಕಾನೂನು ಸಚಿವ ಶಾಂತಿ ಭೂಷಣ್ ಹಾಗೂ ಅವರ ಪುತ್ರ ಪ್ರಶಾಂತ್ ಭೂಷಣ್ ಅವರಿಗೆ ಸ್ಥಾನ ನೀಡಿರುವ ಸ್ವಜನಪಕ್ಷಪಾತದ ಬಗ್ಗೆ ಆಕ್ಷೇಪಿಸಿಲ್ಲ ಎಂದು ಸ್ಪಷ್ಟನೆ ನೀಡಿರುವ ಯೋಗ ಗುರು ಬಾಬಾರಾಮ್ ದೇವ್, ಸಮಿತಿಯಲ್ಲಿ ಕಿರಣ್ ಬೇಡಿಗೆ ಅವಕಾಶ ನೀಡಬೇಕಿತ್ತು ಎಂದು ತಿಳಿಸಿದ್ದಾರೆ.

ಸಾಮಾಜಿಕ ಹೋರಾಟಗಾರ, ಹಿರಿಯ ಗಾಂಧಿವಾಜಿ ಅಣ್ಣಾ ಹಜಾರೆ ಅವರ ಭ್ರಷ್ಟಾಚಾರ ವಿರುದ್ಧದ ಹೋರಾಟಕ್ಕೆ ದೇಶವ್ಯಾಪಿ ಬೆಂಬಲ ದೊರೆಯುವ ಮೂಲಕ ಕೇಂದ್ರ ಸರಕಾರ ಮಣಿದಿದ್ದು, ಕೊನೆಗೂ ಜನಲೋಕಪಾಲ್ ಮಸೂದೆ ಮಂಡನೆಗೆ ಅಸ್ತು ಎಂದಿತ್ತು. ಅಲ್ಲದೇ ಮಸೂದೆ ಕರಡು ಸಮಿತಿ ರಚಿಸಿತ್ತು. ಆದರೆ ಸಮಿತಿಯಲ್ಲಿ ಅಪ್ಪ-ಮಗ(ಶಾಂತಿಭೂಷಣ್ ಮತ್ತು ಪ್ರಶಾಂತ್ ಭೂಷಣ್)ನಿಗೆ ಸ್ಥಾನ ನೀಡುವ ಮೂಲಕ ಸ್ವಜನಪಕ್ಷಪಾತ ಮಾಡಲಾಗಿದೆ ಎಂದು ಬಾಬಾ ರಾಮ್ ದೇವ್ ಅಸಮಾಧಾನ ವ್ಯಕ್ತಪಡಿಸಿದ್ದರು.

ಇದೀಗ ಉಲ್ಟಾ ಹೊಡೆದ ಅವರು, ಅಪ್ಪ-ಮಗನ ಸದಸ್ಯತ್ವಕ್ಕೆ ಆಕ್ಷೇಪವಿಲ್ಲ. ಅಣ್ಣಾ ಹಜಾರೆ ಅವರೊಂದಿಗೂ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ. ಆದರೆ ಸಮಿತಿಯಲ್ಲಿ ಮಾಜಿ ಐಪಿಎಸ್ ಅಧಿಕಾರಿ ಕಿರಣ್ ಬೇಡಿಗೆ ಸ್ಥಾನ ನೀಡಬೇಕಿತ್ತು ಎಂದು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ಸಮಿತಿಯಲ್ಲಿ ಒಂದೇ ಕುಟುಂಬದ ಇಬ್ಬರಿಗೆ ಸ್ಥಾನ ನೀಡಿದರೆ ಜನರಲ್ಲಿ ತಪ್ಪು ಭಾವನೆ ಮೂಡಬಹುದೆಂದು ನಾನು ಹೇಳಿದ್ದೇನೆ ಎಂದು ತಿಪ್ಪೆಸಾರಿದ್ದಾರೆ. ಅಪ್ಪ-ಮಗನ ಬಗ್ಗೆ ಆಕ್ಷೇಪ ಎತ್ತಿದ್ದ ಬಾಬಾ ಅವರ ಅಸಮಾಧಾನಕ್ಕೆ ತಿರುಗೇಟು ನೀಡಿದ ಹಜಾರೆ, ನಾನು ಆ ಬಗ್ಗೆ ಏನೂ ಹೇಳಲ್ಲ. ಯಾಕೆಂದರೆ ಇದರಲ್ಲಿ ಅಪ್ಪ-ಮಕ್ಕಳ ಪ್ರಶ್ನೆಯಲ್ಲ. ನಮಗೆ ಜನಲೋಕಪಾಲ್ ಮಸೂದೆ ಜಾರಿಯಾಗಬೇಕು. ಅದೇ ರೀತಿ ಅದಕ್ಕೆ ಅರ್ಹರು ಸಮಿತಿಯಲ್ಲಿ ಇದ್ದರೆ ತಪ್ಪೇನಿದೆ ಎಂದು ತಿಳಿಸಿದ್ದಾರೆ.

ಜನಲೋಕಪಾಲ್ ಮಸೂದೆ ಜಾರಿಗೆ ಆಗ್ರಹಿಸಿ ಅಣ್ಣಾ ಹಜಾರೆ ಐದು ದಿನಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸಿದ್ದರು. ಕೇಂದ್ರ ಸರಕಾರ ಮಸೂದೆ ಮಂಡನೆಗೆ ಒಪ್ಪಿದ ಹಿನ್ನೆಲೆಯಲ್ಲಿ ಅಣ್ಣಾ ತಮ್ಮ ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದ್ದರು. ಮಸೂದೆ ಕರಡು ಸಮಿತಿಯಲ್ಲಿ ಐದು ಮಂದಿ ಸಾಮಾಜಿಕ ಕ್ಷೇತ್ರದಿಂದ ಹಾಗೂ ಐದು ಮಂದಿ ರಾಜಕೀಯ ಕ್ಷೇತ್ರದ ವ್ಯಕ್ತಿಗಳನ್ನು ಆಯ್ಕೆ ಮಾಡಲಾಗಿತ್ತು. ಸಮಿತಿಯಲ್ಲಿ ಅಣ್ಣಾ ಹಜಾರೆ, ಶಾಂತಿ ಭೂಷಣ್, ಪ್ರಶಾಂತ್ ಭೂಷಣ್, ಅರವಿಂದ ಕೇಜ್ರಿವಾಲ್ ಹಾಗೂ ನ್ಯಾ.ಸಂತೋಷ್ ಹೆಗಡೆ ಸೇರಿದ್ದಾರೆ.

ವಿತ್ತ ಸಚಿವ ಪ್ರಣಬ್ ಮುಖರ್ಜಿ ಅಧ್ಯಕ್ಷರಾಗಿದ್ದು, ಕೇಂದ್ರ ಕಾನೂನು ಸಚಿವ ವೀರಪ್ಪ ಮೊಯ್ಲಿ, ಕಪಿಲ್ ಸಿಬಲ್, ಪಿ.ಚಿದಂಬರಂ ಹಾಗೂ ಸಲ್ಮಾನ್ ಖುರ್ಷಿದ್ ಸಮಿತಿಯಲ್ಲಿದ್ದಾರೆ.
ಇವನ್ನೂ ಓದಿ