ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕರುಣಾನಿಧಿ v/s ಜಯಾ; ಬಹಿರಂಗ ಪ್ರಚಾರಕ್ಕೆ ತೆರೆ (Tamil Nadu Assembly | M Karunanidhi | Jayalalithaa | Campaign end)
ಏಪ್ರಿಲ್ 13ರಂದು 234 ಸಂಖ್ಯಾಬಲದ ತಮಿಳುನಾಡು ವಿಧಾನಸಭೆಗೆ ನಡೆಯಲಿರುವ ಚುನಾವಣೆ ಹಿನ್ನಲೆಯಲ್ಲಿ ಅಭ್ಯರ್ಥಿಗಳ ಬಿರುಸಿನ ಪ್ರಚಾರ ಕಾರ್ಯಕ್ಕೆ ಆಡಳಿತ ಹಾಗೂ ಪ್ರತಿಪಕ್ಷಗಳ ವೈಯಕ್ತಿಕ ಆರೋಪ ಪ್ರತ್ಯಾರೋಪಗಳ ನಡುವೆ ಸೋಮವಾರ ಸಂಜೆ ವಿಧ್ಯುಕ್ತವಾಗಿ ತೆರೆ ಬಿದ್ದಿದ್ದು, ಇದೀಗ ಮತದಾರನ ಮನವೊಲಿಕೆಗಾಗಿ ಮನೆ, ಮನೆ ಸುತ್ತುವ ಕಾರ್ಯದಲ್ಲಿ ತೊಡಗಲಿದ್ದಾರೆ.

ಮುಖ್ಯಮಂತ್ರಿ ಹಾಗೂ ಡಿಎಂಕೆ ಮುಖಂಡ ಎಂ. ಕರುಣಾನಿಧಿ (ತಿರುವರೂರ್), ಸಾಂಪ್ರದಾಯಿಕ ಬದ್ಧ ವೈರಿ ಎಐಎಡಿಎಮ್‌ಕೆ ಮುಖ್ಯಸ್ಥೆ ಜಯಲಲಿತಾ (ಶ್ರೀರಂಗಂ), ಉಪ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ (ಕೊಳತ್ತೂರ್) ಮತ್ತು ಡಿಎಂಡಿಕೆ ಸ್ಥಾಪಕ, ನಟ ಎ.ವಿಜಯಕಾಂತ್ (ರಿಶಿವಂದ್ಯಮ್) ಸೇರಿದಂತೆ 2,773 ಅಭ್ಯರ್ಥಿಗಳ ಭವಿಷ್ಯ ಬುಧವಾರ ನಿರ್ಧಾರವಾಗಲಿದೆ.

ಪ್ರಚಾರ ಸಂದರ್ಭದಲ್ಲಿ ಆಡಳಿತ ಹಾಗೂ ಪ್ರತಿಪಕ್ಷಗಳು ವೈಯಕ್ತಿಕ ನಿಂದನೆ, ಟೀಕೆಗಳನ್ನು ಮಾಡುವ ಮೂಲಕ ಚುನಾವಣಾ ಕಾವೇರಿಸಿದರು. ಕರುಣಾನಿಧಿ ಹಾಗೂ ಅವರ ಕುಟುಂಬದ ಮೇಲೆ ಪ್ರತಿಪಕ್ಷ ನಾಯಕಿ ಜಯಲಲಿತಾ ಮತ್ತು ವಿಯಜಕಾಂತ್ ವೈಯಕ್ತಿಕ ವಾಗ್ದಾಳಿ ನಡೆಸಿದ್ದರೆ ಇದಕ್ಕೆ ಪ್ರತಿಯಾಗಿ ಸಿಎಂ ಪುತ್ರ ಸ್ಟಾಲಿನ್ ಪ್ರತ್ಯಾರೋಪ ಮಾಡಿದರು. ಏತನ್ಮಧ್ಯೆ ಉಭಯ ಪಕ್ಷಗಳ ಮುಖಂಡರು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ. ಆ ನಿಟ್ಟಿನಲ್ಲಿ ಚುನಾವಣಾ ಆಯೋಗ ವಿವರಣೆ ನೀಡುವಂತೆ ಕೋರಿ ನೋಟಿಸ್ ಜಾರಿ ಮಾಡಿದೆ.

ಆಡಳಿತಾರೂಢ ಕರುಣಾನಿಧಿ ಪಕ್ಷವು ಸರಕಾರದ ಅಭಿವೃದ್ಧಿ ಕಾರ್ಯಗಳ ಮೂಲಮಂತ್ರವನ್ನು ಮತ್ತೆ ಮತ್ತೆ ಒತ್ತಿ ಹೇಳುತ್ತಿದ್ದರೆ. ಮತ್ತೊಂದೆಡೆ ಆಡಳಿತ ಪಕ್ಷವು ಪೂರ್ಣ ವೈಫಲ್ಯ ಕಂಡಿರುವುದಾಗಿ ವಿರೋಧ ಪಕ್ಷದ ನಾಯಕಿ ಜಯಲಲಿತಾ ಆರೋಪಿಸಿದರು. ಅಗತ್ಯ ಸಾಮಾಗ್ರಿಗಳ ಬೆಲೆ ಏರಿಕೆಯೂ ಸಹ ಡಿಎಂಕೆ ಸರಕಾರದ ವಿರುದ್ಧ ಪ್ರತಿಪಕ್ಷಗಳು ಪ್ರಮುಖ ಆಯುಧವಾಗಿ ಬಳಸಿಕೊಂಡಿವೆ.

2ಜಿ ತರಂಗಾಂತರ ಹಗರಣ ಆರೋಪದಿಂದಾಗಿ ತಿಹಾರ್ ಸೆರೆಮನೆವಾಸದಲ್ಲಿರುವ ಮಾಜಿ ಟೆಲಿಕಾಂ ಸಚಿವ ಎ.ರಾಜಾ ಅನುಪಸ್ಥಿತಿಯಿಂದಾಗಿ ಚುನಾವಣಾ ಪ್ರಚಾರದಲ್ಲಿ ಡಿಎಂಕೆ ಹಿನ್ನಡೆ ಅನುಭವಿಸಿತ್ತು.

ಐದು ವರ್ಷಗಳ ಡಿಎಂಕೆ ಅಧಿಕಾರಾವಧಿಯಲ್ಲಿ ರಾಜ್ಯದ ಸಂಪತ್ತನ್ನು ಲೂಟಿ ಮಾಡಲಾಗಿದೆ ಎಂದು ಕರುಣಾನಿಧಿ ಕುಟುಂಬ ರಾಜಕಾರಣದ ಮೇಲೆ ಜಯಲಲಿತಾ ನೇರ ವಾಗ್ದಾಳಿ ಮಾಡಿದರು. ಇದಕ್ಕೆ ಪ್ರತಿಯಾಗಿ ಕರುಣಾನಿಧಿ ಪುತ್ರ ಸ್ಟಾಲಿನ್, ಜಲಿಲಲಿತಾ ಅವರಿಗೆ ಸಂಸಾರವೇ ಇಲ್ಲ. ಇದರಿಂದಾಗಿ ಕುಟುಂಬದ ಮಹತ್ವದ ಬಗ್ಗೆ ಅರಿವಿಲ್ಲ. ಇಡೀ ರಾಜ್ಯದ ಜನತೆಯನ್ನು 'ಕಲೈಗ್ನಾರ್' ತಮ್ಮ ಕುಟುಂಬದಂತೆ ನೋಡಿಕೊಳ್ಳುತ್ತಿದ್ದು, ಪ್ರತಿಯೊಂದು ಮನೆತನವು ಒಂದಲ್ಲ ಒಂದು ರೀತಿಯಲ್ಲಿ ಪ್ರಯೋಜನ ಪಡೆದಿದೆ ಎಂದರು.

ಚುನಾವಣಾ ಹಿನ್ನಲೆಯಲ್ಲಿ ಪ್ರಧಾನಿ ಮನಮೋಹನ್ ಸಿಂಗ್, ಎಐಸಿಸಿ ಅಧ್ಯಕ್ಷೆ ಸೊನಿಯಾ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ, ಬಿಜೆಪಿ ನಾಯಕ ಎಲ್. ಕೆ. ಅಡ್ವಾಣಿ, ನಿತಿನ್ ಗಡ್ಕರಿ, ಸುಷ್ಮಾ ಸ್ಮರಾಜ್, ಅರುಣ್ ಜೇಟ್ಲಿ, ನರೇಂದ್ರ ಮೋದಿ, ಎಡಪಕ್ಷದ ನಾಯಕರಾದ ಪ್ರಕಾಶ್ ಕಾರಟ್ ಮತ್ತು ಎ.ಬಿ. ಬರ್ಧನ್‌ರಂತಹ ರಾಷ್ಟ್ರೀಯ ನೇತಾರರು ತಮ್ಮ ಪಕ್ಷಗಳ ಅಭ್ಯರ್ಥಿ ಪರ ಪ್ರಚಾರ ನಡೆಸಿದ್ದರು.
ಇವನ್ನೂ ಓದಿ