ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಣ್ಣಾ ಹಜಾರೆ v/s ಆಡ್ವಾಣಿ; ಎಲ್ಲಾ ರಾಜಕಾರಣಿ ಭ್ರಷ್ಟರಲ್ಲ (LK Advani | Anna Hazare | Lokpal Bill | politicians | corrupt | BJP)
ಅಣ್ಣಾ ಹಜಾರೆ v/s ಆಡ್ವಾಣಿ; ಎಲ್ಲಾ ರಾಜಕಾರಣಿ ಭ್ರಷ್ಟರಲ್ಲ
ನವದೆಹಲಿ, ಮಂಗಳವಾರ, 12 ಏಪ್ರಿಲ್ 2011( 18:34 IST )
PTI
ಜನಲೋಕಪಾಲ್ ಮಸೂದೆ ಜಾರಿ ಹೋರಾಟದಲ್ಲಿ ಅಣ್ಣಾ ಹಜಾರೆ ಯಶ ಪಡೆದು ದೇಶಾದ್ಯಂತ ಶಹಬ್ಬಾಸ್‌ಗಿರಿ, ಭಾರೀ ಜನ ಬೆಂಬಲ ಪಡೆದಿದ್ದರೆ, ಮತ್ತೊಂದೆಡೆ ಎಲ್ಲಾ ರಾಜಕಾರಣಿಗಳನ್ನು ಒಂದೇ ತಕ್ಕಡಿಯಲ್ಲಿಟ್ಟು ನೋಡುವ ಅಣ್ಣಾ ಅವರ ಧೋರಣೆ ಬಗ್ಗೆ ಬಿಜೆಪಿ ನಾಯಕ ಎಲ್.ಕೆ.ಆಡ್ವಾಣಿ ತಮ್ಮ ಬ್ಲಾಗ್‌ನಲ್ಲಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಭ್ರಷ್ಟಾಚಾರಕ್ಕೆ ಕಡಿವಾಣ ಹಾಗೂ 2ಜಿ ಸ್ಪೆಕ್ಟ್ರಂ ಹಗರಣಕ್ಕೆ ಸಂಬಂಧಿಸಿದಂತೆ ಜೆಪಿಸಿ ತನಿಖೆಗೆ ಒತ್ತಾಯಿಸಿ ಪ್ರತಿಪಕ್ಷಗಳು ಸತತ ಎರಡು ತಿಂಗಳ ಕಾಲ ಹೋರಾಟ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲವಾಗಿತ್ತು. ಆದರೆ ಅಣ್ಣಾ ಹಜಾರೆ ಅವರು ಕೇವಲ ನಾಲ್ಕು ದಿನಗಳ ಕಾಲ ಉಪವಾಸ ಸತ್ಯಾಗ್ರಹ ಮಾಡಿ ಆ ಸಾಧನೆ ನೆರವೇರಿಸಿಕೊಂಡಿದ್ದಾರೆ ಎಂದು ಅಡ್ವಾಣಿ ತಮ್ಮ ವಿಚಾರ ಲಹರಿಯನ್ನು ಬ್ಲಾಗ್‌ನಲ್ಲಿ ಹರಿಯಬಿಟ್ಟಿದ್ದಾರೆ.
ಅಣ್ಣಾ ಹಜಾರೆ ಅವರ ಹೋರಾಟ ಶ್ಲಾಘನೀಯವಾದದ್ದೇ, ಆದರೆ ಎಲ್ಲಾ ರಾಜಕಾರಣಿಗಳು ಭ್ರಷ್ಟರು ಎಂಬ ಧೋರಣೆ ಸರಿಯಲ್ಲ ಎಂದು ಹಿರಿಯ ಗಾಂಧೀವಾದಿಯ ವರ್ತನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜಕಾರಣಿಗಳ ತಾತ್ಸಾರದ ಬಗ್ಗೆ ಟೀಕೆ ಮಾಡುವ ಮೂಲಕ ಪ್ರಜಾಪ್ರಭುತ್ವಕ್ಕೆ ಅಣ್ಣಾ ಹಜಾರೆ ಅವಮಾನ ಮಾಡಿದ್ದಾರೆ ಎಂದು ಆಡ್ವಾಣಿ ತಿಳಿಸಿದ್ದಾರೆ.
ಅಲ್ಲದೇ ಹಜಾರೆ ಅವರು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ವೇಳೆಯಲ್ಲಿ ಬಿಜೆಪಿ ಮಾಜಿ ನಾಯಕಿ ಉಮಾ ಭಾರತಿ ಅವರು ಜಂತರ್ ಮಂತರ್‌ಗೆ ಭೇಟಿ ನೀಡಿದಾಗ ಆಕೆಯ ಮೇಲೆ ಪ್ರತಿಭಟನಾಕಾರರು ವಿರೋಧ ವ್ಯಕ್ತಪಡಿಸಿ ವಾಪಸ್ ಹೋಗುವಂತೆ ಮಾಡಿರುವ ಬಗ್ಗೆ ಕಿಡಿಕಾರಿರುವ ಆಡ್ವಾಣಿ, ಇದು ಅಣ್ಣಾ ಅವರ ಸ್ವಭಾವತ ಬಂದ ಧೋರಣೆಯನ್ನು ತೋರಿಸುತ್ತದೆ ಎಂದಿದ್ದಾರೆ.
ಭ್ರಷ್ಟಾಚಾರ ವಿರುದ್ಧದ ಸಮರದಲ್ಲಿ ಅಣ್ಣಾ ಅವರು ಅತ್ಯಲ್ಪ ಅವಧಿಯಲ್ಲಿಯೇ ಸಾಧನೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದು ಟಿವಿ ಮತ್ತು ಮಾಹಿತಿ ತಂತ್ರಜ್ಞಾನ ಎಂಬುದಾಗಿ ಅಭಿಪ್ರಾಯವ್ಯಕ್ತಪಡಿಸಿದ್ದಾರೆ. ಆ ನಿಟ್ಟಿನಲ್ಲಿ ಟಿವಿ ಮತ್ತು ಮಾಧ್ಯಮಗಳ ಬೆಂಬಲದಿಂದ ಅವರು ಜನಲೋಕಪಾಲ್ ಮಸೂದೆ ಜಾರಿ ಮಾಡಲು ಕೇಂದ್ರ ಸರಕಾರ ಒಪ್ಪಿಗೆ ನೀಡುವ ಮೂಲಕ ಅಣ್ಣಾ ಅವರ ನಾಲ್ಕೇ ದಿನದ ಹೋರಾಟಕ್ಕೆ ಮಣಿದಿತ್ತು ಎಂದು ವಿಶ್ಲೇಷಿಸಿದ್ದಾರೆ.
ಅಷ್ಟೇ ಅಲ್ಲ ಆಡಳಿತಾರೂಢ ಯುಪಿಎ ಸರಕಾರ ಅಣ್ಣಾ ಹಜಾರೆ ಅವರನ್ನು ಆರ್ಎಸ್ಎಸ್ ಏಜೆಂಟ್ ಎಂದು ಆರೋಪಿಸಿರುವುದಕ್ಕೆ ಆಡ್ವಾಣಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಅವರೊಬ್ಬ ಸಾಮಾಜಿಕ ಕಾರ್ಯಕರ್ತ, ಅವರ ಬಗ್ಗೆ ಆ ರೀತಿ ದೂರಿರುವುದಕ್ಕೆ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಪತ್ರ ಬರೆದಿರುವುದಾಗಿ ಹೇಳಿಕೊಂಡಿದ್ದಾರೆ.