ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ತಲೆ ಉಪಯೋಗಿಸದ ಸೋನಿಯಾ, ರಾಹುಲ್: ಸುಷ್ಮಾ
(Election Campaign | Assembly Elections 2011 | Rahul Gandhi | Sonia Gandhi | Sushma Swaraj)
ತಲೆ ಉಪಯೋಗಿಸದ ಸೋನಿಯಾ, ರಾಹುಲ್: ಸುಷ್ಮಾ
ನವದೆಹಲಿ, ಬುಧವಾರ, 13 ಏಪ್ರಿಲ್ 2011( 19:28 IST )
ಕೇರಳ ಮತ್ತು ತಮಿಳುನಾಡು ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಪುತ್ರ ರಾಹುಲ್ ಗಾಂಧಿ ಇಬ್ಬರೂ ತಲೆ ಉಪಯೋಗಿಸದೆಯೇ ಏನೇನೋ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿರುವ ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್, ತಮ್ಮ ವಾದ ಸಮರ್ಥಿಸಿಕೊಳ್ಳಲು ಅವರು ಹಲವು ಉದಾಹರಣೆಗಳನ್ನೂ ನೀಡಿದ್ದಾರೆ.
"ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಒಂದಲ್ಲ, ಎರಡು ಬಾರಿ ಬದ್ಧ ವಿರೋಧಿಯಾಗಿರುವ ಎಡರಂಗದ ಪರವಾಗಿ ಮತ ಯಾಚಿಸಿದರು. ಕೆಲವರು ಹೇಳುವ ಪ್ರಕಾರ ಮೂರು ಬಾರಿ ಕೇಳಿದ್ದಾರೆ. ಇದು ತಪ್ಪು ಎಂದು ತಿಳಿದುಕೊಂಡ ಬಳಿಕವೂ ಆಕೆ ಇದನ್ನು ಸರಿಪಡಿಸುವ ಗೋಜಿಗೆ ಹೋಗಲಿಲ್ಲ" ಎಂದು ಸುದ್ದಿಗೋಷ್ಠಿಯಲ್ಲಿ ಸುಷ್ಮಾ ಹೇಳಿದರು.
ಬಹುಶಃ ಆಕೆಗೆ ಬರೆದುಕೊಟ್ಟ ಭಾಷಣಗಳಲ್ಲಿ ಅಕ್ಷರ ದೋಷಗಳು ನುಸುಳಿರಬಹುದು. ಇದು ಸರ್ವೇ ಸಾಮಾನ್ಯ. ಆದರೆ, ಮಾತನಾಡುವಾಗಲಾದರೂ ತಾನು ಯಾವ ರಂಗದ ಪರವಾಗಿದ್ದೇನೆ ಎಂಬುದನ್ನು ಆಕೆ ಯೋಚಿಸಬೇಕಿತ್ತು. ಒಮ್ಮೆ ತಪ್ಪಾದರೆ, ಎರಡನೇ ಬಾರಿಯಾದರೂ ಸರಿಪಡಿಸಿಕೊಳ್ಳಬಹುದಿತ್ತು. ಆದರೂ ಅದರ ಬಗ್ಗೆ ಸೋನಿಯಾ ತಲೆಕೆಡಿಸಿಕೊಳ್ಳಲಿಲ್ಲ ಎಂದರು ಸುಷ್ಮಾ.
ಅದೇ ರೀತಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿಯಂತೂ ಕೇರಳ ಮುಖ್ಯಮಂತ್ರಿ ವಿ.ಎಸ್.ಅಚ್ಯುತಾನಂದನ್ ಅವರ ವಯಸ್ಸಿನ ಮೇಲೆಯೇ ವಾಗ್ದಾಳಿ ನಡೆಸಿದರು. ಆದರೆ, ಅವರೇ ಬೆಂಬಲಿಸುತ್ತಿರುವ ಅದೇ ವಯಸ್ಸಿನ ತಮಿಳುನಾಡು ಮುಖ್ಯಮಂತ್ರಿಯ ವಯಸ್ಸನ್ನು ಮರೆತೇಬಿಟ್ಟರು ಎಂದ ಸುಷ್ಮಾ, "ಎಡರಂಗವೇನಾದರೂ ಅಧಿಕಾರಕ್ಕೇರಿದರೆ ತಮ್ಮ ಅವಧಿಯನ್ನು ಪೂರ್ಣಗೊಳಿಸುವಾಗ ಅವರಿಗೆ 93 ವರ್ಷವಾಗಿರುತ್ತದೆ" ಎಂಬ ರಾಹುಲ್ ಹೇಳಿಕೆಯನ್ನು ನೆನಪಿಸಿಕೊಂಡರು.
"ತಮಿಳುನಾಡಿನಲ್ಲಿ 87 ವಯಸ್ಸು ಒಳ್ಳೆಯದು, ಆದರೆ ಕೇರಳದಲ್ಲೇಕೆ ಒಳ್ಳೆಯದಲ್ಲ? ಒಟ್ಟಿನಲ್ಲಿ ತಲೆ ಉಪಯೋಗಿಸದೇ ಅವರು ಮಾತನಾಡುತ್ತಿದ್ದಾರೆ. ಯಾಕೆಂದರೆ ಕೇರಳದಲ್ಲಿ ಹೇಳಿದ್ದು, ತಮಿಳುನಾಡಿನಲ್ಲಿ ವ್ಯತಿರಿಕ್ತ ಪರಿಣಾಮ ಬೀರುತ್ತದಲ್ಲವೇ?" ಎಂದು ಪ್ರಶ್ನಿಸಿದರು ಸುಷ್ಮಾ.
ಅಂತೆಯೇ, ಕೇಂದ್ರ ಸಚಿವ ವಿ.ನಾರಾಯಣಸ್ವಾಮಿ ಹೇಳಿಕೆಯನ್ನೂ ಸುಷ್ಮಾ ಆಕ್ಷೇಪಿಸಿದರು. ಮಹಿಳೆಯರ ಸಮಾವೇಶವೊಂದರಲ್ಲಿ ಮಾತನಾಡುತ್ತಿದ್ದ ಈ ಸಚಿವರು, "ನಾವು ನಿಮಗೆ ಎಲ್ಲವನ್ನೂ ಉಚಿತವಾಗಿ ಕೊಡುತ್ತಿದ್ದೇವೆ, ಆದರೆ ಮಕ್ಕಳನ್ನು ಹೊರತುಪಡಿಸಿ" ಎಂದಿದ್ದರು. ಇಂಥಹಾ ಅಸಭ್ಯ ಹೇಳಿಕೆ ನೀಡಿದ ಸಚಿವರ ಮೇಲೆ ಕ್ರಮ ಕೈಗೊಳ್ಳುವಂತೆ ನಾವು ಕಾಂಗ್ರೆಸ್ ಅಧ್ಯಕ್ಷೆ ಮತ್ತು ಪ್ರಧಾನ ಮಂತ್ರಿಗೆ ಆಗ್ರಹಿಸಿದ್ದೇವೆ ಎಂದರು.
ಅದೇ ರೀತಿ, ಇನ್ನೊಬ್ಬ ಕಾಂಗ್ರೆಸ್ ಸಚಿವರು ಮಹಿಳೆಯರ ಸಮಾವೇಶವೊಂದರಲ್ಲಿ ಮಾತನಾಡುತ್ತಾ, "ನಾವು ನಿಮಗೆ ಮೊಬೈಲ್ ಫೋನುಗಳನ್ನು ಉಚಿತವಾಗಿ ಕೊಡುತ್ತಿದ್ದೇವೆ. ಈ ಮೂಲಕ ನೀವು ನಿಮ್ಮ ಗಂಡಂದಿರೊಂದಿಗೆ ಜಗಳ ಮಾಡಬಹುದು. ಮತ್ತಷ್ಟು ಸೆಲ್ ಫೋನ್‌ಗಳನ್ನು ಕೊಡುತ್ತೇವೆ, ಮತ್ತಷ್ಟು ಜೋರಾಗಿ ಜಗಳ ಮಾಡಬಹುದು" ಎಂದು ಹೇಳಿದ್ದರು. ಅದನ್ನೂ ಸುಷ್ಮಾ ತೀವ್ರವಾಗಿ ಟೀಕಿಸಿದರು.