ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮೋದಿ ಕಾರ್ಯಕ್ಕೆ ಸ್ಪಷ್ಟನೆ ನೀಡಬೇಕಿರುವುದು ದುರಂತ: ಹಜಾರೆ (Social activist, Anna Hazare, Gujarat Chief Minister, Narendra Modi, Lokpal Bill)
PTI
ಅಭಿವೃದ್ಧಿ ಕಾರ್ಯಗಳಿಗಾಗಿ ತಾನು ಶ್ಲಾಘಿಸಿದ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರ ವಿಷಯದಲ್ಲಿ ಮತ್ತೆ ಮತ್ತೆ ತಾನು ಸ್ಪಷ್ಟೀಕರಣ ನೀಡಬೇಕಾಗಿರುವುದು ತೀರಾ ನೋವು ತರುವ ವಿಚಾರ ಎಂದು ಸಾಮಾಜಿಕ ಕಾರ್ಯಕರ್ತ, ಗಾಂಧಿವಾದಿ ಅಣ್ಣಾ ಹಜಾರೆ ವಿಷಾದದಿಂದ ನುಡಿದಿದ್ದಾರೆ.

"ನಾನು ಸಂಪೂರ್ಣವಾಗಿ ರಾಜಕೀಯೇತರ ವ್ಯಕ್ತಿ ಮತ್ತು ನಾನು ಕೋಮುವಾದದ ಬದ್ಧ ವಿರೋಧಿ ಎಂಬುದನ್ನು ಮತ್ತೆ ಮತ್ತೆ ಹೇಳುತ್ತಿದ್ದೇನೆ" ಎಂದು ಹೋರಾಟಗಾರ್ತಿ ಮಲ್ಲಿಕಾ ಸಾರಾಭಾಯಿ ಅವರಿಗೆ ಉತ್ತರವಾಗಿ ಬರೆದ ಪತ್ರದಲ್ಲಿ ಹಜಾರೆ ಉಲ್ಲೇಖಿಸಿದ್ದಾರೆ.

ಮೋದಿಯವರ ಕೆಲಸಗಳನ್ನು ಶ್ಲಾಘಿಸಿರುವುದಕ್ಕೆ ನೃತ್ಯಪಟುವೂ ಆಗಿರುವ ಮತ್ತು ಕಳೆದ ಲೋಕಸಭೆ ಚುನಾವಣೆಗಳಲ್ಲಿ ಬಿಜೆಪಿ ನಾಯಕ ಎಲ್.ಕೆ.ಆಡ್ವಾಣಿ ವಿರುದ್ಧ ಕಾಂಗ್ರೆಸ್‌ನಿಂದ ಕಣಕ್ಕಿಳಿದು ಸೋತಿದ್ದ ಮಲ್ಲಿಕಾ ಸಾರಾಭಾಯಿ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಇ-ಮೇಲ್ ರವಾನಿಸಿದ್ದರು.

"ಮೋದಿ ಕುರಿತಾಗಿ ನಾನು ನನ್ನ ಬಗ್ಗೆಯೇ ಸ್ಪಷ್ಟನೆ ನೀಡಬೇಕಾಗಿ ಬಂದಿರುವುದಕ್ಕೆ ನೋವಾಗಿದೆ. ದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಗುಜರಾತ್ ಮತ್ತು ಬಿಹಾರ ಮುಖ್ಯಮಂತ್ರಿಗಳ ಅಭಿವೃದ್ಧಿ ಕಾರ್ಯದ ಕುರಿತು ನನ್ನಲ್ಲಿ ಪ್ರಶ್ನೆ ಕೇಳಲಾಗಿತ್ತು. ಗ್ರಾಮೀಣಾಭಿವೃದ್ಧಿಯಲ್ಲಿ ಎರಡೂ ರಾಜ್ಯಗಳು ಒಳ್ಳೆಯ ಪ್ರಗತಿ ಸಾಧಿಸಿವೆ ಎಂದು ನಾನು ಹೇಳಿದ್ದೆ" ಎಂದು ತಮ್ಮ ತವರೂರಾಗಿರುವ ಮಹಾರಾಷ್ಟ್ರ ಅಹಮದ್‌ನಗರ ಜಿಲ್ಲೆಯ ರಾಲೆಗಣ ಸಿದ್ಧಿಯಿಂದ ಪತ್ರ ಬರೆದಿರುವ ಹಜಾರೆ ಹೇಳಿದ್ದಾರೆ.

ಅದೇ ಸಂದರ್ಭದಲ್ಲಿ ನಾನು 2002ರ ದಂಗೆಗಳು ಮತ್ತು ಕೋಮು ಹಿಂಸಾಚಾರವನ್ನೂ ಖಂಡಿಸಿದ್ದೇನೆ ಎಂದಿದ್ದಾರೆ ಹಜಾರೆ.

ನಾನು ಜೀವನಪೂರ್ತಿಯಾಗಿ ಭ್ರಷ್ಟಾಚಾರ ನಿರ್ಮೂಲನೆಗಾಗಿಯೇ ಶ್ರಮಿಸುತ್ತಿದ್ದೇನೆ. ಇದೊಂದು ಸುದೀರ್ಘ ಹೋರಾಟವಾಗಿದ್ದು, ಜನರ ಹಕ್ಕುಗಳಿಗಾಗಿ ಹೋರಾಟ ನಡೆಸಿರುವ ನಿಮ್ಮಂಥವರು (ಸಾರಾಭಾಯಿ) ಈ ಆಂದೋಲನದ ಉದ್ದೇಶವನ್ನು ಅರ್ಥ ಮಾಡಿಕೊಳ್ಳುತ್ತೀರೆಂದು ನಂಬುವುದಾಗಿ ಹಜಾರೆ ಹೇಳಿದ್ದಾರೆ.
ಇವನ್ನೂ ಓದಿ