ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರ ಹೊಗಳಿಕೆ ಹಾಗೂ ಇತರ ಆರೋಪಗಳಿಂದಾಗಿ ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ, ಒಡಕು ಸೃಷ್ಟಿಸಲು ದುಷ್ಟಶಕ್ತಿಗಳು ಪ್ರಯತ್ನಿಸುತ್ತಿರುವುದರಿಂದ ಜನತೆ ಎಚ್ಚರವಾಗಿರಬೇಕು ಎಂದು ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆ ಕರೆ ನೀಡಿದ್ದಾರೆ.
73 ವರ್ಷ ವಯಸ್ಸಿನ ಅಣ್ಣಾ ಹಜಾರೆ ಮಾತನಾಡಿ, ಭ್ರಷ್ಟಾಚಾರದ ವಿರುದ್ಧದ ಹೋರಾಟದ ಒಗ್ಗಟ್ಟನ್ನು ಕೆಲ ದುಷ್ಟಶಕ್ತಿಗಳು ಒಡೆಯುವ ಸಂಚಿನಲ್ಲಿ ತೊಡಗಿವೆ. ಅಭಿವೃದ್ಧಿ ಪರ ಕಾರ್ಯಗಳಿಗಾಗಿ ಮೋದಿಯವರನ್ನು ಬೆಂಬಲಿಸಿದ್ದೇನೆ. ಬಿಜೆಪಿ ಪಕ್ಷದ ಪರ ಹೇಳಿಕೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಲೋಕಪಾಲ್ ಮಸೂದೆ ಜಾರಿಗೆ ಬಂದಲ್ಲಿ ತಮ್ಮ ಹಿತಾಸಕ್ತಿಗಳಿಗೆ ತೊಂದರೆಯಾಗುತ್ತದೆ ಎನ್ನುವ ಆತಂಕದಲ್ಲಿ ವಿವಾದ ಸೃಷ್ಟಿಸಲು ಹರಸಾಹಸ ನಡೆಸುತ್ತಿದ್ದಾರೆ. ಭ್ರಷ್ಟಾಚಾರ ವಿರೋಧ ಹೋರಾಟದಲ್ಲಿ ತೊಡಗಿದವರು ಇಂತಹ ವ್ಯಕ್ತಿಗಳ ವಿರುದ್ಧ ಇನಗತ್ಯ ವಾದ ವಿವಾದದಲ್ಲಿ ತೊಡಗುವುದು ಬೇಡ ಎಂದು ಬಹಿರಂಗವಾಗಿ ಪತ್ರ ಬರೆದಿದ್ದಾರೆ.
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಹಾಗೂ ಬಿಹಾರ್ ಮುಖ್ಯಮಂತ್ರಿ ನಿತಿಷ್ ಕುಮಾರ್ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದರಿಂದ, ಅಣ್ಣಾ ಹಜಾರೆ ಮುಖ್ಯಮಂತ್ರಿಗಳ ಕಾರ್ಯಶೈಲಿಯನ್ನು ಶ್ಲಾಘಿಸಿದ್ದರಿಂದ ವಿವಾದಕ್ಕೆ ಕಾರಣವಾಗಿದೆ.
ಅದೇ ಸಮಯದಲ್ಲಿ ಗುಜರಾತ್‌ನಲ್ಲಿ 2002ರಲ್ಲಿ ನಡೆದ ಕೋಮವಾದ ಹಾಗೂ ದಂಗೆಯನ್ನು ವಿರೋಧಿಸಿರುವುದಾಗಿ ಅಣ್ಣಾ ಹಜಾರೆ ಸ್ಪಷ್ಟಪಡಿಸಿದ್ದಾರೆ.