ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ರಜನೀಕಾಂತ್ ಓಟು ಹಾಕಿದ್ದು ಯಾರಿಗೆಂದು ಬಯಲಾಯ್ತೇ?
(Rajinikanth | Vote | Tamil Super Star | Assembly Election 2011 | Tamil Nadu)
ರಜನೀಕಾಂತ್ ಓಟು ಹಾಕಿದ್ದು ಯಾರಿಗೆಂದು ಬಯಲಾಯ್ತೇ?
ಚೆನ್ನೈ, ಶುಕ್ರವಾರ, 15 ಏಪ್ರಿಲ್ 2011( 13:08 IST )
ಸೂಪರ್ ಸ್ಟಾರ್ ರಜನೀಕಾಂತ್ ಬಗೆಗೆ ಎಷ್ಟೋ ಜೋಕುಗಳಿವೆ. ಜಪಾನಿನಲ್ಲಿ ಸುನಾಮಿ ಬಂದದ್ದೇ ಅಲ್ಲಿನ ಸಮುದ್ರದಲ್ಲಿ ಬಿದ್ದ ಮತ್ತು ವೈಬ್ರೇಷನ್ ಮೋಡ್‌ನಲ್ಲಿದ್ದ ರಜನೀಕಾಂತ್ ಅವರ ಮೊಬೈಲ್‌ಗೆ ಯಾರೋ ಕರೆ ಮಾಡಿದ್ದರಿಂದಲೇ ಎಂಬಂತಹಾ ಜೋಕುಗಳೂ ಹರಿದಾಡಿದ್ದವು. ಈಗ ರಜನೀಕಾಂತ್ ನಿಜವಾಗಿಯೂ ಒಂದೇ ದಿನ ಹಲವಾರು ಬಾರಿ ಓಟು ಹಾಕಿ ಸುದ್ದಿ ಮಾಡಿದ್ದಾರೆ. ಮತ್ತು ಅವರ ಓಟು ಯಾರಿಗೆ ಎಂಬುದು ಕೂಡ ಗೊತ್ತಾಗಿದೆ!
ತಮಿಳುನಾಡಿನಲ್ಲಿ ಬುಧವಾರ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ನಡೆದ ಘಟನೆಯಿದು. ಮಾಧ್ಯಮಗಳ ಆವಾಂತರವೂ ಹೌದು. ಇತರ ಮತದಾರರಂತೆಯೇ ಕ್ಯೂನಲ್ಲಿ ನಿಂತು ಓಟು ಹಾಕಿದ್ದ ರಜನೀಕಾಂತ್ ಹಿಂದೆಯೇ ಮಾಧ್ಯಮಗಳು ಬಿದ್ದಿದ್ದವು. ಕ್ಯಾಮರಾಗಳ ಎದುರೇ ಓಟು ಹಾಕಿದ ರಜನೀಕಾಂತ್, ಎಲೆಕ್ಟ್ರಾನಿಕ್ ಮತ ಯಂತ್ರದಲ್ಲಿದ್ದ ಎರಡು ಎಲೆಗಳ ಚಿಹ್ನೆಗೆ ತಮ್ಮ ಓಟು ಹಾಕಿದ್ದನ್ನೂ ತೋರಿಸಿಬಿಟ್ಟರು!
ಸ್ಟೆಲ್ಲಾ ಮೇರೀಸ್ ಕಾಲೇಜಿನಲ್ಲಿ ಕಿಕ್ಕಿರಿದು ನೆರೆದಿದ್ದ ಮಾಧ್ಯಮ ಪ್ರತಿನಿಧಿಗಳೆದುರು ಓಟು ಹಾಕುವುದೇ ಕಷ್ಟವಾಗಿತ್ತು. ಇದ್ಯಾವುದರ ಪರಿವೆಯಿಲ್ಲದೆಯೇ, ಓಟು ಹಾಕಿ, "ಬೆಲೆ ಏರಿಕೆ ಮುಖ್ಯ ವಿಷಯ, ನಮಗೆ ಸ್ಥಿರ ಸರಕಾರ ಬೇಕು, ಈ ಚುನಾವಣೆ ಮಹತ್ವದ್ದು ಮತ್ತು ಕಾಡಾಕಾಡಿ ಸ್ಪರ್ಧೆಯೂ ಇದೆ" ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು. ಆದರೆ, ಅವರು ಓಟು ಹಾಕಿದ ದೃಶ್ಯಾವಳಿಗಳು ಸುದ್ದಿ ಚಾನೆಲ್‌ಗಳಲ್ಲಿ ಪ್ರಸಾರವಾಗತೊಡಗಿತ್ತು! ಚುನಾವಣಾಧಿಕಾರಿ ತಕ್ಷಣವೇ ಈ ಚಾನೆಲ್‌ಗಳಿಗೆ ಎಚ್ಚರಿಕೆ ನೀಡಿದ ಬಳಿಕ, ಈ ದೃಶ್ಯಾವಳಿಗಳ ಪ್ರಸಾರ ನಿಲ್ಲಿಸಲಾಯಿತು.
ಯಾರು ಯಾರಿಗೆ ಓಟು ಹಾಕಿದರು ಎಂದು ತೋರಿಸುವುದು ಅಪರಾಧ. ವೀಡಿಯೋಗ್ರಾಫರ್ ಮತ್ತು ಪ್ರಸಾರಕ ಇಬ್ಬರಿಗೂ ಶಿಕ್ಷೆ ವಿಧಿಸಲಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದೀಗ ಜಯಲಲಿತಾ ಅವರ ಎಐಎಡಿಎಂಕೆಯ "ಎರಡು ಎಲೆಗಳ" ಚಿಹ್ನೆಗೆ ಓಟು ಹಾಕಿದ್ದೆಂದು ಚಾನೆಲ್‌ಗಳು ಪ್ರಸಾರ ಮಾಡಿರುವುದು ಸ್ವತಃ ರಜನೀಕಾಂತ್ ಅವರನ್ನು ಮುಜುಗರಕ್ಕೆ ಸಿಲುಕಿಸಿದೆ. ಸಾಯಂಕಾಲ ರಜನೀಕಾಂತ್ ಅವರು ಡಿಎಂಕೆ ಅಧ್ಯಕ್ಷ, ಮುಖ್ಯಮಂತ್ರಿ ಕರುಣಾನಿಧಿ (ಜಯಲಲಿತಾ ಬದ್ಧ ಪ್ರತಿಸ್ಪರ್ಧಿ) ಜತೆ ಚಲನಚಿತ್ರ ವೀಕ್ಷಿಸುವ ಕಾರ್ಯಕ್ರಮವೂ ಇತ್ತು. ತಾವು ಓಟು ಹಾಕಿದ ಕಾರ್ಯವನ್ನು ಪುನರಾವರ್ತಿಸುವಂತೆಯೂ, ಈ ಮೂಲಕ ನಾವು ವೀಡಿಯೊ ಚಿತ್ರೀಕರಣ ಮಾಡಿಕೊಳ್ಳುತ್ತೇವೆ ಎಂದೂ ಕೆಲವು ಟಿವಿ ಚಾನೆಲ್ ಪ್ರತಿನಿಧಿಗಳು ಒತ್ತಾಯಿಸಿದರು. ಹೀಗಾಗಿ ಅವರಿಗೋಸ್ಕರ ಓಟು ಹಾಕುವ ಪೋಸ್ ನೀಡಬೇಕಾಯಿತು. ಈ ಸಂದರ್ಭ ಯಾವ ಬಟನ್ ಬಳಿ ತನ್ನ ಬೆರಳಿತ್ತೆಂದು ಗಮನಿಸಲಿಲ್ಲ ಎಂಬ ರಜನೀಕಾಂತ್ ವಿವರಣೆಯಿಂದ ಕರುಣಾನಿಧಿಯ ಆಪ್ತರು ಸಂತೃಪ್ತರಾಗಿದ್ದಾರೆ ಎಂದು ಮೂಲಗಳು ಹೇಳಿವೆ.
ಚುನಾವಣೆಗಳಿಗೆ ಮುನ್ನ ಹಲವಾರು ರಾಜಕಾರಣಿಗಳು ಬೆಂಬಲ ಕೋರಿ ರಜನಿಕಾಂತ್ ಮನೆ ಬಾಗಿಲು ತಟ್ಟಿದ್ದರು. ಅವರ ಪ್ರಭಾವ ಸಾಕಷ್ಟಿರುವುದೂ ಎಲ್ಲರಿಗೂ ತಿಳಿದ ಸಂಗತಿಯೇ. ಅವರು ರಾಜಕೀಯಕ್ಕೆ ಬರುವ ಊಹಾಪೋಹಗಳೂ ಆಗಾಗ್ಗೆ ಕೇಳಿಬರುತ್ತಿದ್ದವು. ಆದರೆ, ರಾಜಕೀಯಕ್ಕೆ ಒಲ್ಲೆ ಎಂದು ಹೇಳುತ್ತಲೇ ಬಂದಿದ್ದಾರೆ ಮರಾಠೀ ಮೂಲದ, ಕರ್ನಾಟಕದಲ್ಲಿ ಚಿತ್ರರಂಗದ ಅಭಿಯಾನ ಆರಂಭಿಸಿ ತಮಿಳಿನಲ್ಲಿ ಸೂಪರ್ ಸ್ಟಾರ್.ಆಗಿ ಮೆರೆಯುತ್ತಿರುವ ರಜನೀಕಾಂತ್.