ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬಳ್ಳಾರಿಯಲ್ಲಿ ಅಕ್ರಮ ಗಣಿಗಾರಿಕೆ: ಸು.ಕೋರ್ಟಿಗೆ ಸಿಇಸಿ ವರದಿ
(Karnataka | Illegal mining | Supreme Court | CEC | Bellary)
ಬಳ್ಳಾರಿಯಲ್ಲಿ ಅಕ್ರಮ ಗಣಿಗಾರಿಕೆ: ಸು.ಕೋರ್ಟಿಗೆ ಸಿಇಸಿ ವರದಿ
ನವದೆಹಲಿ, ಶುಕ್ರವಾರ, 15 ಏಪ್ರಿಲ್ 2011( 18:40 IST )
ಕರ್ನಾಟಕದಲ್ಲಿ, ವಿಶೇಷವಾಗಿ ಬಳ್ಳಾರಿ ಜಿಲ್ಲೆಯಲ್ಲಿ ಜನಪ್ರತಿನಿಧಿಗಳು ಹಾಗೂ ಸರಕಾರಿ ಅಧಿಕಾರಿಗಳ ಕುಮ್ಮಕ್ಕಿನೊಂದಿಗೆ ಭಾರೀ ಪ್ರಮಾಣದ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂದು ಕೇಂದ್ರೀಯ ಉನ್ನತಾಧಿಕಾರ ಸಮಿತಿ (ಸಿಇಸಿ) ಶುಕ್ರವಾರ ಸುಪ್ರೀಂ ಕೋರ್ಟಿಗೆ ಸಲ್ಲಿಸಿರುವ ವರದಿಯಲ್ಲಿ ತಿಳಿಸಿರುವುದರೊಂದಿಗೆ ಅಕ್ರಮ ಗಣಿಗಾರಿಕೆ ಇಲ್ಲ ಎಂದೆಲ್ಲಾ ಹೇಳಿಕೊಳ್ಳುತ್ತಿರುವವರು ಇಕ್ಕಟ್ಟಿಗೆ ಸಿಲುಕಿದ್ದಾರೆ.
ಈ ಉನ್ನತಾಧಿಕಾರ ಸಮಿತಿಯನ್ನು ಸುಪ್ರೀಂ ಕೋರ್ಟು ಕಳೆದ ಫೆಬ್ರವರಿಯಲ್ಲಿ ನೇಮಿಸಿ, ಆರು ವಾರಗಳೊಳಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ, ಕಳೆದ ಕೆಲವು ವಾರಗಳಿಂದ ಸಮಿತಿ ಸದಸ್ಯರು ಕರ್ನಾಟಕಕ್ಕೆ ಬಂದು ಸಾಕಷ್ಟು ತನಿಖೆ ನಡೆಸಿ ಹೋಗಿದ್ದರು. ಮುಖ್ಯ ನ್ಯಾಯಮೂರ್ತಿ ಎಸ್.ಎಚ್.ಕಪಾಡಿಯಾ ನೇತೃತ್ವದ ವಿಶೇಷ ಅರಣ್ಯ ಪೀಠವು ಈ ಕುರಿತಾಗಿ ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿದ್ದು, ಸೂಕ್ತ ಪರವಾನಗಿಯಿಲ್ಲದೆಯೇ 2003 ಹಾಗೂ 2009-10ರ ನಜುವಿನ ಅವಧಿಯಲ್ಲಿ 304.91 ಲಕ್ಷ ಮೆಟ್ರಿಕ್ ಟನ್ ಅದಿರು ರಫ್ತು ಸೇರಿದಂತೆ ಸಮಿತಿಯ ವರದಿಗೆ ಸಂಬಂಧಿಸಿ ಉತ್ತರ ನೀಡುವಂತೆ ತೀಳಿಸಿದೆ.
ಕರ್ನಾಟಕ ಲೋಕಾಯುಕ್ತ ವರದಿ ಪ್ರಕಾರ, ಗಣಿಗಾರಿಕೆಯು ಅಕ್ರಮವಾಗಿ ಮಾತ್ರವೇ ಅಲ್ಲದೆ, ಅರಣ್ಯ ಭೂಮಿ ಎಂದು ಗುರುತಿಸಲಾದ ನಿಷೇಧಿತ ಪ್ರದೇಶದಲ್ಲಿಯೂ ನಡೆಯುತ್ತಿದೆ. ಈ ಆಧಾರದಲ್ಲಿ ಎನ್‌ಜಿಒ ಒಂದು ಸಲ್ಲಿಸಿದ್ದ ಅರ್ಜಿಯನ್ವಯ ಸುಪ್ರೀಂ ಕೋರ್ಟು ತನಿಖಾ ಸಮಿತಿಯನ್ನು ನೇಮಿಸಿತ್ತು.
ಇದಕ್ಕೆ ಮೊದಲು, ಬಳ್ಳಾರಿ ಪ್ರದೇಶದ ಆಂಧ್ರಪ್ರದೇಶಕ್ಕೆ ಸೇರಿದ ಭಾಗದ ಕಡೆಯಿಂದಲೂ ತನಿಖೆ ಕೈಗೊಳ್ಳುವಂತೆ ಸಿಇಸಿಗೆ ಸುಪ್ರೀಂ ಕೋರ್ಟು ಪೀಠವು ಆದೇಶಿಸಿತು.
ಕರ್ನಾಟಕ ಮತ್ತು ಆಂಧ್ರ ರಾಜ್ಯ ಸರಕಾರಗಳು ಭಾರೀ ಪ್ರಮಾಣದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯನ್ನು ತಡೆಯಲು ವಿಫಲವಾಗಿವೆ. ಗಣಿಗಾರಿಕೆಯು ಸ್ಥಳೀಯ ಜನಜೀವನದ ಮೇಲೆ, ವಿಶೇಷವಾಗಿ ಗ್ರಾಮೀಣ ಬಡವರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ಸರಕಾರೇತರ ಸಂಸ್ಥೆಯಾಗಿರುವ 'ಸಮಾಜ ಪರಿವರ್ತನೆ ಸಮುದಾಯ'ವು ಆರೋಪಿಸಿತ್ತು. ಅಕ್ರಮ ಗಣಿಗಾರಿಕೆಯಿಂದ ಕರ್ನಾಟಕದ 1114.8 ಹೆಕ್ಟೇರ್ ಅರಣ್ಯ ಭೂಮಿಯು ಅತಿಕ್ರಮಣಕ್ಕೀಡಾಗಿದೆ ಎಂದೂ ಅದು ಹೇಳಿತ್ತು.