ಆಗಾಗ್ಗೆ ತಮ್ಮ ನಾಲಿಗೆಯಿಂದಾಗಿಯೇ ಪ್ರಸಿದ್ಧರಾಗಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್, ಲೋಕಪಾಲ ಕಾಯ್ದೆಗೂ ಅಪಸ್ವರವೆತ್ತಿದ್ದು, ಪ್ರಧಾನಿಯನ್ನೂ ಪ್ರಶ್ನಿಸುವ ಅಧಿಕಾರವುಳ್ಳ "ಪೂರ್ಣಾಧಿಕಾರವುಳ್ಳ" ಲೋಕಪಾಲ ಕಾಯ್ದೆಯು ದೇಶದ ಹಿತಕ್ಕೆ ವಿರುದ್ಧವಾದುದು ಎಂದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಚುನಾವಣಾ ಪ್ರಕ್ರಿಯೆಯ ಮೂಲಕ ಆಯ್ಕೆಯಾಗಿರುವ ಪ್ರಧಾನ ಮಂತ್ರಿಯ ವಿರುದ್ಧವೂ ಕ್ರಮ ಕೈಗೊಳ್ಳುವ ಅಪರಿಮಿತ ಅಥವಾ ಪರಮೋಚ್ಚ ಅಧಿಕಾರವನ್ನು ಲೋಕಪಾಲರ ಕೈಯಲ್ಲಿ ನೀಡಲಾಗದು. ಲೋಕಪಾಲ ಮಸೂದೆ ಕರಡು ಸಿದ್ಧಪಡಿಸುವ ವೇಳೆ ಸಮತೋಲನ ಕಾಯ್ದುಕೊಳ್ಳಬೇಕು. ಸಂಸತ್ತಿನ 544 ಮಂದಿ ಚುನಾಯಿತ ಪ್ರತಿನಿಧಿಗಳ ಹಕ್ಕುಗಳನ್ನು ನಿರ್ಲಕ್ಷಿಸಲಾಗದು. ಆದರೂ ಕಾಂಗ್ರೆಸ್ ಪಕ್ಷವು ಭ್ರಷ್ಟಾಚಾರ ವಿರುದ್ಧದ ಅಣ್ಣಾ ಹಜಾರೆಯವರ ಹೋರಾಟವನ್ನು ಬೆಂಬಲಿಸುತ್ತದೆ ಎಂದಿದ್ದಾರೆ.
ಆದರೆ, ಲೋಕಪಾಲರಿಂದ ಮಾತ್ರವೇ ಭ್ರಷ್ಟಾಚಾರಕ್ಕೆ ಅಂತ್ಯ ಹಾಡುವುದು ಸಾಧ್ಯವಿಲ್ಲ. ಈ ಪಿಡುಗು ನಿವಾರಿಸಲು ಕೆಲವೊಂದು ಕಠಿಣ ಕ್ರಮಗಳ ಅಗತ್ಯವೂ ಇದೆ ಎಂದೂ ಸೇರಿಸಿದ್ದಾರೆ ದಿಗ್ವಿಜಯ್ ಸಿಂಗ್.
ಅಣ್ಣಾ ಹಜಾರೆಯವರು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯನ್ನು ಶ್ಲಾಘಿಸಿದ್ದಾರಲ್ಲಾ ಎಂದು ಕೇಳಿದಾಗ ದಿಗ್ವಿಜಯ್, ಕಳೆದ ಏಳು ವರ್ಷಗಳಲ್ಲಿ ಮೋದಿ ಸರಕಾರ ಯಾವುದೇ ಲೋಕಾಯುಕ್ತರನ್ನು ನೇಮಿಸಿಲ್ಲ ಎಂದರಲ್ಲದೆ, ಕರಡು ಸಮಿತಿಯ ಸದಸ್ಯರಾಗಿರುವ ಶಾಂತಿಭೂಷಣ್ ಮತ್ತು ಪ್ರಶಾಂತ್ ಭೂಷಣ್ ಅವರ ಹೆಸರು ಕೂಡ ಛಾಪಾ ಶುಲ್ಕ ಪ್ರಕರಣದಲ್ಲಿ ಕೇಳಿ ಬಂದಿದೆ ಎಂದು ಹೇಳಿದರು.
ಹಜಾರೆ ಹಿಂದೆ ಆರೆಸ್ಸೆಸ್ ಮಂದಿ... ಕರಡು ಸಮಿತಿಯ ಸದಸ್ಯರನ್ನು ಆರಿಸುವಾಗ ಅಣ್ಣಾ ಹಜಾರೆ ಅವರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದ ದಿಗ್ವಿಜಯ್, ಹಜಾರ್ ಪ್ರಾಮಾಣಿಕ ಮತ್ತು ಸರಳ ವ್ಯಕ್ತಿಯಾದರೂ, ಆರೆಸ್ಸೆಸ್‌ನಂತಹಾ ಬಲಪಂಥೀಯ ಶಕ್ತಿಗಳ ಬೆಂಬಲ ಹೊಂದಿದ್ದಾರೆ ಎಂಬ ಊಹಾಪೋಹಗಳೂ ಇವೆ ಎಂದು ಹೇಳಿದರು.