ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಲೋಕಪಾಲ ಮಸೂದೆ ಸಮಿತಿ ಸಭೆ, ಆಡಿಯೋ ದಾಖಲೀಕರಣ (Lokpal Bill draft Committee | First Meeting | Anna Hazare | Audio Recording)
ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಹೊಸ ಲೋಕಪಾಲ ಕಾಯಿದೆಯನ್ನು ಜಾರಿಗೆ ತರುವ ವಿಶ್ವಾಸದೊಂದಿಗೆ ಶನಿವಾರ ನವದೆಹಲಿಯಲ್ಲಿ ಲೋಕಪಾಲ ಮಸೂದೆಯ ಜಂಟಿ ಕರಡು ರಚನಾ ಸಮಿತಿಯು ಸಭೆ ಸೇರಿತು.

ಸಮಿತಿ ಅಧ್ಯಕ್ಷ ಪ್ರಣಬ್ ಮುಖರ್ಜಿ ನೇತೃತ್ವದಲ್ಲಿ ಶನಿವಾರ 90 ನಿಮಿಷ ಕಾಲ ನಡೆದ ಸಭೆಯಲ್ಲಿ ಹಿರಿಯ ವಕೀಲ ಶಾಂತಿ ಭೂಷಣ್ ಸಹ-ಅಧ್ಯಕ್ಷತೆ ವಹಿಸಿದ್ದು, ಸಭೆಯ ಆಡಿಯೋ ದಾಖಲೀಕರಣ ಮಾಡಿಕೊಳ್ಳಲಾಯಿತು. ಆದರೆ ನಾಗರಿಕ ಸಮಾಜದ ಕಾರ್ಯಕರ್ತರ ಬೇಡಿಕೆಯ ಮೇರೆಗೆ ವೀಡಿಯೋ ಚಿತ್ರೀಕರಣ ಮಾಡಿಕೊಂಡಿಲ್ಲ.

ಜುಲೈ ತಿಂಗಳಲ್ಲಿ ಆರಂಭವಾಗುವ ಅಧಿವೇಶನದಲ್ಲಿ ಈ ಮಸೂದೆಯನ್ನು ಮಂಡಿಸುವ ಬಗ್ಗೆ ಎಲ್ಲರೂ ವಿಶ್ವಾಸ ವ್ಯಕ್ತಪಡಿಸಿರುವುದಾಗಿ ಸರಕಾರದ ಐವರು ಪ್ರತಿನಿಧಿಗಳಲ್ಲಿ ಒಬ್ಬರಾದ ಸಚಿವ ಕಪಿಲ್ ಸಿಬಲ್ ಹೇಳಿದರು. ಸಮಿತಿಯ ಮುಂದಿನ ಸಭೆ ಮೇ 2ರಂದು ನಡೆಯಲಿದೆ.

ನಾಗರಿಕ ಸಮಾಜದ ಕಡೆಯಿಂದ ನೇಮಕಗೊಂಡಿರುವ ಐವರು ಪ್ರತಿನಿಧಿಗಳು ಸಲ್ಲಿಸಿದ ಮಸೂದೆಯ ಕರಡು "ಮಹತ್ವದ" ಪ್ರಸ್ತಾಪಗಳನ್ನು ಹೊಂದಿದೆ ಎಂದ ಸಿಬಲ್, ಎಲ್ಲ ಸಭೆಗಳ ಆಡಿಯೋ ರೆಕಾರ್ಡಿಂಗ್ ಮಾಡಲಾಗುತ್ತಿದ್ದು, ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವಾಗ ಅವುಗಳನ್ನು ಬಹಿರಂಗಪಡಿಸಲಾಗುತ್ತದೆ ಮತ್ತು ವೆಬ್‌ಸೈಟಿನಲ್ಲೂ ಪ್ರಕಟಿಸಲಾಗುತ್ತದೆ ಎಂದಿದ್ದಾರೆ.

ನಾಗರಿಕ ಸಮಾಜದಿಂದ ಹೊಸದಾಗಿ ಮಂಡಿಸಲ್ಪಟ್ಟ ಕರಡು ಮಸೂದೆಯಲ್ಲಿ ಕೆಲವು ತಿದ್ದುಪಡಿ ಮಾಡಲಾಗಿದ್ದು, ಅದರಲ್ಲಿ ಪ್ರಮುಖವಾದ ಪ್ರಸ್ತಾಪವೆಂದರೆ, ಲೋಕಪಾಲರು ಮತ್ತು ಲೋಕಪಾಲ ಸಮಿತಿ ಸದಸ್ಯರನ್ನು ಆಯ್ಕೆ ಮಾಡುವ ಅಧಿಕಾರವು ಪ್ರಧಾನ ಮಂತ್ರಿ ಹಾಗೂ ಪ್ರತಿಪಕ್ಷ ನಾಯಕರ ಕೈಯಲ್ಲಿರಬೇಕು ಎಂಬುದು. ಹಿಂದಿನ ಕರಡು ಮಸೂದೆಯಲ್ಲಿ ಈ ಅಧಿಕಾರವನ್ನು ರಾಜ್ಯಸಭಾಧ್ಯಕ್ಷ ಹಾಗೂ ಲೋಕಸಭಾ ಸ್ಪೀಕರ್‌ಗೆ ವಹಿಸಲಾಗಿತ್ತು.
ಇವನ್ನೂ ಓದಿ