ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಹಜಾರೆ ಆಸ್ತಿ ಕಡಿಮೆ, ಶಾಂತಿ ಭೂಷಣ್ 100 ಕೋಟಿಗೂ ಹೆಚ್ಚು (Anna Hazare | Shanti Bhushan | income tax returns | declaration of assets | lokpal bill)
ಹಜಾರೆ ಆಸ್ತಿ ಕಡಿಮೆ, ಶಾಂತಿ ಭೂಷಣ್ 100 ಕೋಟಿಗೂ ಹೆಚ್ಚು
ನವದೆಹಲಿ, ಭಾನುವಾರ, 17 ಏಪ್ರಿಲ್ 2011( 09:09 IST )
ಭ್ರಷ್ಟಾಚಾರ ವಿರುದ್ಧ ಹೋರಾಡುವವರು ತಾವು ಶುದ್ಧ ಹಸ್ತರಾಗಿರಬೇಕು ಎಂಬ ಸಾಮಾನ್ಯ ಅಭಿಪ್ರಾಯದಂತೆ ಲೋಕಪಾಲ ಮಸೂದೆ ರಚನೆಯ ಕರಡು ಸಮಿತಿಗೆ ಜನರ ನಿಜ ಪ್ರತಿನಿಧಿಗಳಾಗಿ ನೇಮಕಗೊಂಡಿರುವ ಐವರು ತಮ್ಮ ಆಸ್ತಿ ವಿವರ ಘೋಷಿಸಿದ್ದಾರೆ. ಹಜಾರೆ ಮತ್ತು ಇತರ ನಾಲ್ವರು ಸದಸ್ಯರ ಆಸ್ತಿಯ ವಿವರಗಳನ್ನು ಮಾಧ್ಯಮಗಳಿಗೆ ಬಹಿರಂಗಪಡಿಸಲಾಗಿದೆ. ಲೋಕಪಾಲ ಮಸೂದೆ ಕರಡು ರಚನಾ ಸಮಿತಿಯ ಅಧ್ಯಕ್ಷ, ಕೇಂದ್ರ ವಿತ್ತ ಸಚಿವರೂ ಆಗಿರುವ ಸರಕಾರದ ಪ್ರತಿನಿಧಿಗಳಲ್ಲಿ ಒಬ್ಬರಾದ ಪ್ರಣಬ್ ಮುಖರ್ಜಿಯವರಿಗೆ ಈ ವಿವರಗಳನ್ನು ಕಳುಹಿಸಲಾಗಿದೆ.
ಹಜಾರೆಗೆ ಒಂದಿಷ್ಟು ಸಾವಿರ ರೂಪಾಯಿ, ತುಂಡು ಭೂಮಿ ಅದರ ಪ್ರಕಾರ, ಭ್ರಷ್ಟಾಚಾರದ ವಿರುದ್ಧದ ಸಮರದ ಮುಂದಾಳುತ್ವ ವಹಿಸಿರುವ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅವರ ಬಳಿ 68,688.36 ರೂಪಾಯಿ ನಗದು ಹಣ, ರಾಲೆಗಣ ಸಿದ್ಧಿಯಲ್ಲಿ ಅವರ ಕುಟುಂಬಿಕರು ಉಪಯೋಗಿಸುತ್ತಿರುವ 0.07 ಹೆಕ್ಟೇರ್ ಕೌಟುಂಬಿಕ ಜಮೀನು ಮಾತ್ರ ಇದೆ. ಸೇನೆ ಮತ್ತು ಗ್ರಾಮಸ್ಥರೊಬ್ಬರು ತಮಗೆ ದಾನ ನೀಡಿದ್ದ ಎರಡು ತುಂಡು ಜಮೀನುಗಳನ್ನು ಅವರು ಗ್ರಾಮದ ಬಳಕೆಗಾಗಿಯೇ ಮರು-ದಾನ ಮಾಡಿದ್ದಾರೆ.
ಶಾಂತಿ ಭೂಷಣ್‌ಗೆ 100 ಕೋಟಿಗೂ ಮಿಕ್ಕ ಆಸ್ತಿ ಹತ್ತು ಮಂದಿ ಸದಸ್ಯರುಳ್ಳ ಕರಡು ರಚನಾ ಸಮಿತಿಯಲ್ಲಿ ಜನರ ಪರವಾಗಿ ಸಹ-ಅಧ್ಯಕ್ಷರಾಗಿರುವ ಹಿರಿಯ ವಕೀಲ, ಮಾಜಿ ಕಾನೂನು ಸಚಿವ ಶಾಂತಿ ಭೂಷಣ್ ತಮ್ಮ ಆದಾಯವನ್ನು 18 ಕೋಟಿ ಎಂದು ಘೋಷಿಸಿದ್ದಾರೆ. ನೋಯಿಡಾ ನಿವಾಸಿಯಾಗಿರುವ ಅವರು, ನೋಯಿಡಾದಲ್ಲಿ 3 ಮನೆಗಳು, ಸುಪ್ರೀಂ ಕೋರ್ಟ್ ಸಹಕಾರಿ ಸಮೂಹ ಹೌಸಿಂಗ್ ಸೊಸೈಟಿಯಲ್ಲಿ ಒಂದು ಫ್ಲ್ಯಾಟ್, ಬೆಂಗಳೂರಿನಲ್ಲಿ ಒಂದು ಪ್ಲಾಟ್, ರೂರ್ಕೀಯಲ್ಲಿ ಐದೆಕರೆ ಕೃಷಿ ಭೂಮಿ, ನೋಯಿಡಾದಲ್ಲಿ ಒಂದು ಕೃಷಿ ಭೂಮಿ ಹಾಗೂ ಅಲಹಾಬಾದ್‌ನ ಮನೆಯ ನಾಲ್ಕನೇ ಒಂದು ಭಾಗದ ಒಡೆತನ ಹೊಂದಿದ್ದಾರೆ. ಅಷ್ಟು ಮಾತ್ರವೇ ಅಲ್ಲ, 102.60 ಕೋಟಿ ರೂಪಾಯಿ ಮೊತ್ತದ ಸಾರ್ವಜನಿಕ ಭವಿಷ್ಯ ನಿಧಿ, ಬಾಂಡುಗಳು, ಶೇರುಗಳು, ನಿರಖು ಠೇವಣಿಗಳನ್ನು ಹೊಂದಿದ್ದಾರಲ್ಲದೆ, 2.75 ಕೋಟಿ ರೂಪಾಯಿ ಮೊತ್ತದ ಬ್ಯಾಂಕ್ ಬ್ಯಾಲೆನ್ಸ್ ಕೂಡಾ ಹೊಂದಿದ್ದಾರೆ.
ಸಂತೋಷ್ ಹೆಗ್ಡೆಗೆ ಫ್ಲ್ಯಾಟ್, ಠೇವಣಿ ನಮ್ಮ ಕರ್ನಾಟಕದವರೇ ಆದ ನ್ಯಾಯಮೂರ್ತಿ ಸಂತೋಷ್ ಹೆಗಡೆ ಬಳಿ ಸುಮಾರು 31.5 ಲಕ್ಷದ ಬ್ಯಾಂಕ್ ಠೇವಣಿಗಳಿವೆ ಹಾಗೂ ಬೆಂಗಳೂರಿನಲ್ಲಿ 1.5 ಕೋಟಿ ಮೊತ್ತದ ಒಂದು ಫ್ಲ್ಯಾಟ್ ಇದೆ.
ಪ್ರಶಾಂತ್ ಭೂಷಣ್ ಕೂಡ ಕೋಟ್ಯಧಿಪತಿ ಶಾಂತಿಭೂಷಣ್ ಅವರ ಪುತ್ರರೂ ಆಗಿರುವ ಸುಪ್ರೀಂ ಕೋರ್ಟು ವಕೀಲ ಪ್ರಶಾಂತ್ ಭೂಷಣ್ ಅವರು ಘೋಷಿಸಿದ ಆಸ್ತಿಯ ವಿವರದ ಪ್ರಕಾರ, ಜಾಂಗ್‌ಪುರದಲ್ಲಿ ಒಂದು ಮನೆ, ಸುಪ್ರೀಂ ಕೋರ್ಟ್ ಸಹಕರಿ ಸಮೂಹ ಹೌಸಿಂಗ್ ಸೊಸೈಟಿಯಲ್ಲಿ ಒಂದು ಫ್ಲ್ಯಾಟ್, ಹಿಮಾಚಲ ಪ್ರದೇಶದಲ್ಲಿ ಕೃಷಿ ಭೂಮಿ, ಅಲಹಾಬಾದ್ ಮನೆಯೊಂದರ ನಾಲ್ಕನೇ ಒಂದು ಭಾಗ ಇದೆ. ಪಿಪಿಎಫ್, ಬಾಂಡುಗಳು, ಮ್ಯೂಚುವಲ್ ಫಂಡ್‌ಗಳು, ಶೇರುಗಳು, ನಿರಖು ಠೇವಣಿಗಳೆಲ್ಲಾ ಸೇರಿ 1.45 ಕೋಟಿ ರೂಪಾಯಿ ಇದ್ದು, 7.5 ಲಕ್ಷ ರೂಪಾಯಿ ಬ್ಯಾಂಕ್ ಬ್ಯಾಲೆನ್ಸ್ ಇದೆ.
ಅರವಿಂದ ಕೇಜರಿವಾಲ್ ಸಾಮಾಜಿಕ ಹೋರಾಟಗಾರ ಅರವಿಂದ ಕೇಜರಿವಾಲ್ ಅವರಿಗೆ ಇಂದಿರಾಪುರ ಐಆರ್ಎಸ್ ಗ್ರೂಪ್ ಹೌಸಿಂಗ್ ಸೊಸೈಟಿಯಲ್ಲಿ ಒಂದು ಪ್ಲಾಟ್, 28,640 ರೂಪಾಯಿ ಬ್ಯಾಂಕ್ ಬ್ಯಾಲೆನ್ಸ್ ಮತ್ತು ಕೈಯಲ್ಲಿ 5300 ರೂ. ನಗದು ಹಣ ಇದೆ.