ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಕ್ರಮ ಗಣಿಗಾರಿಕೆ ಸಿಇಸಿ ವರದಿ: ರೆಡ್ಡಿಗಳ ಹೆಸರಿಲ್ಲ, ಸಿಎಂಗೆ ಶ್ಲಾಘನೆ (Illegal Mining | Bellary | CEC Report | Reddy Brothers | Yeddyurappa)
ಅಕ್ರಮ ಗಣಿಗಾರಿಕೆ ಸಿಇಸಿ ವರದಿ: ರೆಡ್ಡಿಗಳ ಹೆಸರಿಲ್ಲ, ಸಿಎಂಗೆ ಶ್ಲಾಘನೆ
ನವದೆಹಲಿ, ಭಾನುವಾರ, 17 ಏಪ್ರಿಲ್ 2011( 09:48 IST )
ಸುಪ್ರೀಂ ಕೋರ್ಟಿನ ಪರಿಸರ ಸಮಿತಿಯು ಬಳ್ಳಾರಿಯನ್ನು ದೇಶದ ಅಕ್ರಮ ಗಣಿಗಾರಿಕೆಯ ತವರು ಎಂದು ಕರೆದಿದ್ದರೂ, ಸುಪ್ರೀಂ ಕೋರ್ಟಿಗೆ ಅದು ಸಲ್ಲಿಸಿದ ವರದಿಯಲ್ಲಿ ಗಣಿ ದೊರೆಗಳಾದ ಸಚಿವ ಗಾಳಿ ಜನಾರ್ದನ ರೆಡ್ಡಿ ಮತ್ತು ಗಾಳಿ ಕರುಣಾಕರ ರೆಡ್ಡಿಯ ಹೆಸರೇ ಇಲ್ಲ.
ಅಕ್ರಮ ಗಣಿಗಾರಿಕೆಯಲ್ಲಿ ರೆಡ್ಡಿ ಸಹೋದರರು ಭಾಗಿಯಾಗಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕೂಡ ಘೋಷಿಸಿದ್ದು ಇಲ್ಲಿ ಗಮನಾರ್ಹ. ಅಂದರೆ ಪರವಾನಗಿಯಿದ್ದೇ ಗಣಿಗಾರಿಕೆ ನಡೆಸುತ್ತಿದ್ದಾರೆ ಎಂದರ್ಥವಿದ್ದಿರಬಹುದು.
ಸಿಎಂ ಯಡಿಯೂರಪ್ಪ ಕ್ರಮಕ್ಕೆ ಶ್ಲಾಘನೆ... ಆದರೆ, ಬಳ್ಳಾರಿ ಜಿಲ್ಲೆಯ ಪ್ರತಿಯೊಬ್ಬ ಅಧಿಕಾರಿಯೂ ಜನ ಪ್ರತಿನಿಧಿಗಳೊಂದಿಗೆ ಸೇರಿಕೊಂಡು ಅಕ್ರಮ ಗಣಿಗಾರಿಕೆಗೆ ಬೆಂಬಲವಾಗಿದ್ದಾರೆ ಎಂದು ಈ ವರದಿ ತಿಳಿಸಿರುವುದು ತೀರಾ ಆತಂಕಕ್ಕೆ ಕಾರಣವಾಗಿದೆ. ಆದರೂ, ಕೊನೆಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಈ ಅಧಿಕಾರಿಗಳನ್ನು ವರ್ಗಾಯಿಸಿ ಒಳ್ಳೆಯ ಕೆಲಸ ಮಾಡಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿರುವುದು ಪ್ರತಿಪಕ್ಷಗಳ ಬಾಯಿ ಮುಚ್ಚಿಸಿದೆ.
ಅಂತೆಯೇ, ಬಳ್ಳಾರಿಯಲ್ಲಿ ಅಕ್ರಮ ಗಣಿಗಾರಿಕೆ ತಡೆಯುವ ನಿಟ್ಟಿನಲ್ಲಿ ಮುಖ್ಯಮಂತ್ರಿಯವರು ಬಳ್ಳಾರಿ ಜಿಲ್ಲಾಧಿಕಾರಿ, ಉಪ ಅರಣ್ಯ ಸಂರಕ್ಷಣಾಧಿಕಾರಿ, ಎಸ್ಪಿ, ಗಣಿ ನಿರ್ದೇಶಕರೇ ಮುಂತಾದ ಅಧಿಕಾರಿಗಳನ್ನು ವರ್ಗಾಯಿಸುವಲ್ಲಿ ತೋರಿಸಿದ ಧೈರ್ಯವನ್ನು ಕೇಂದ್ರೀಯ ಉನ್ನತಾಧಿಕಾರ ಸಮಿತಿ (ಸಿಇಸಿ) ವರದಿಯು ಶ್ಲಾಘಿಸಿದೆ. "ಮೊದಲು ಅವರನ್ನು ವರ್ಗಾಯಿಸುವ ಪ್ರಯತ್ನ ಮಾಡಿದಾಗ ರಾಜ್ಯದಲ್ಲಿ ದೊಡ್ಡ ರಾಜಕೀಯ ಬಿಕ್ಕಟ್ಟೇ ಉದ್ಭವವಾಗಿ, ಸರಕಾರವೇ ಪತನವಾಗುವ ಹಂತಕ್ಕೂ ತಲುಪಿತ್ತು" ಎಂಬುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ವರ್ಗಾವಣೆಗೊಂಡಿದ್ದ ಅಧಿಕಾರಿಗಳ ಕೈಕೆಳಗಿದ್ದವರನ್ನೂ ವರ್ಗಾಯಿಸಬೇಕಾಗಿದೆ ಎಂದು ಸಿಇಸಿ ಶಿಫಾರಸು ಮಾಡಿದೆ. ಅದು ಇನ್ನೂ ಆಗದಿರುವುದು ದುರದೃಷ್ಟಕರ ಎಂದೂ ವರದಿಯಲ್ಲಿ ತಿಳಿಸಲಾಗಿದೆ.
ಅಕ್ರಮ ಗಣಿದಾರರಿಂದ 5 ಪಟ್ಟು ವಸೂಲಿ ಮಾಡಿ... ಲೀಸುದಾರರು ಮಾಡಿರುವ ಅಕ್ರಮ ಗಣಿಗಾರಿಕೆಯಿಂದ ಬಂದ ಲಾಭಾಂಶವನ್ನು ಅವರಿಂದಲೇ ಕಕ್ಕಿಸಬೇಕು ಎಂದೂ ಸಿಇಸಿ ವರದಿಯು ಶಿಫಾರಸು ಮಾಡಿದೆ. ಪರವಾನಗಿ ಇಲ್ಲದ ಪ್ರದೇಶದಲ್ಲಿ ಮಾಡಿದ ಗಣಿಗಾರಿಕೆಯಲ್ಲಿ ಎಷ್ಟು ಪ್ರಮಾಣದಲ್ಲಿ ಅದಿರು ಹೊರತೆಗೆಯಲಾಗಿದೆ, ಅದರ ಮಾರುಕಟ್ಟೆ ದರದ ಐದು ಪಟ್ಟು ಹಣವನ್ನು ಗಣಿ ಮಾಲೀಕರಿಂದ ಪರಿಹಾರ ಕೇಳಬೇಕು ಎಂದೂ ಶಿಫಾರಸು ಮಾಡಲಾಗಿದೆ.