ನಾಗರಿಕ ಸಮಿತಿ ವಿರುದ್ಧ ಭ್ರಷ್ಟರ ಹುನ್ನಾರ: ಸೋನಿಯಾಗೆ ಹಜಾರೆ
ನವದೆಹಲಿ, ಸೋಮವಾರ, 18 ಏಪ್ರಿಲ್ 2011( 17:14 IST )
ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿರುವ ನಾಗರಿಕ ಸಮಾಜದ ಸದಸ್ಯರ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡುವ ಮೂಲಕ ತಮ್ಮ ಹೋರಾಟದ ಬಲ ಕುಂದಿಸಲು ಮತ್ತು ಲೋಕಪಾಲ್ ಮಸೂದೆ ಜಾರಿಗೆ ತಡೆಯೊಡ್ಡಲು ಭ್ರಷ್ಟರ ಗುಂಪು ಯತ್ನಿಸುತ್ತಿದೆ ಎಂದು ಭ್ರಷ್ಟಾಚಾರದ ವಿರುದ್ಧ ಸಮರ ಸಾರಿರುವ ಅಣ್ಣಾ ಹಜಾರೆ ಆತಂಕ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿರುವ ಹಜಾರೆ, ಕಾಂಗ್ರೆಸ್ ಮುಖಂಡರಾದ ದಿಗ್ವಿಜಯ ಸಿಂಗ್ ಹಾಗೂ ಕಪಿಲ್ ಸಿಬಾಲ್ ಅವರು ಭ್ರಷ್ಟಾಚಾರ ವಿರುದ್ಧದ ಹೋರಾಟದ ಹಾದಿ ತಪ್ಪಿಸಲು ಯತ್ನಿಸುತ್ತಿದ್ದಾರೆ. ಹೀಗೆ ಮಾಡದಂತೆ ಅವರಿಗೆ ನಿರ್ದೇಶನ ನೀಡುವಂತೆ ಕೋರಿದ್ದಾರೆ.
ಜನ ಲೋಕಪಾಲ ಸಮಿತಿಯ ಸದಸ್ಯ ಶಾಂತಿ ಭೂಷಣ್ ಅವರ ಕುರಿತು ಸಮಾಜವಾದಿ ಪಕ್ಷದ ಮುಖಂಡ ಮುಲಾಯಂಸಿಂಗ್ ಯಾದವ್ ಅವರೊಂದಿಗೆ ಮಾತನಾಡುತ್ತಿರುವ ಸಿಡಿ ಬಿಡುಗಡೆ ಮಾಡಿ ತೇಜೋವಧೆ ಮಾಡುತ್ತಿರುವುದನ್ನು ಪತ್ರದಲ್ಲಿ ಉಲ್ಲೇಖಿಸಿ, ಸಮಿತಿ ಸದಸ್ಯರ ವಿರುದ್ಧ ಉದ್ದೇಶ ಪೂರ್ವಕವಾಗಿ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಆಪಾದಿಸಿದ್ದಾರೆ.
ಸಿಡಿಯಲ್ಲಿ ಏನಿತ್ತು? : ಮುಲಾಯಂ ಸಿಂಗ್ ಯಾದವ್ ಅವರ ವಿರುದ್ಧದ ಪ್ರಕರಣವೊಂದರಲ್ಲಿ ಸಿಂಗ್ ಪರ ತೀರ್ಪು ನೀಡಲು ನ್ಯಾಯಾಧೀಶರಿಗೆ 4 ಕೋಟಿ ರೂ. ನೀಡುವ ಬಗ್ಗೆ ಶಾಂತಿ ಭೂಷಣ್ ಮತ್ತು ಸಮಾಜವಾದಿ ಪಕ್ಷದ ವಕ್ತಾರ ಅಮರ್ ಸಿಂಗ್ ಅವರ ನಡುವೆ ನಡೆದ ಮಾತುಕತೆ ವಿವರಗಳು ಈ ಸಿಡಿಯಲ್ಲಿದ್ದವು. ಈ ಕುರಿತು ಪ್ರತಿಕ್ರಿಯಿಸಿರುವ ಶಾಂತಿಭೂಷಣ್, ತಮ್ಮ ಹೆಸರಿಗೆ ಮಸಿ ಬಳಿಯುವ ಉದ್ದೇಶದಿಂದ ಈ ನಕಲಿ ಸಿಡಿಯನ್ನು ತಯಾರಿಸಲಾಗಿದೆ. ಅಮರ್ ಸಿಂಗ್ ಯಾರೆಂಬುದೇ ಗೊತ್ತಿಲ್ಲ ಎಂದು ಹೇಳಿದ್ದಾರೆ.
ಈ ಕುರಿತು ಆಜ್‌ತಕ್ ಚಾನಲ್‌ನ ಸೀಧೀ ಬಾತ್ ಕಾರ್ಯಕ್ರಮದಲ್ಲಿ ಪ್ರತಿಕ್ರಿಯಿಸಿರುವ ಅಮರ್ ಸಿಂಗ್, ಶಾಂತಿಭೂಷಣ್ ಹಾಗೂ ಪ್ರಶಾಂತಿಭೂಷಣ್ ಇಬ್ಬರೂ ನನಗೆ ಗೊತ್ತು. ಅವರೊಂದಿಗೆ ಹಲವಾರು ಬಾರಿ ಮಾತುಕತೆ ನಡೆಸಿದ್ದೇನೆ ಎಂದು ತಿಳಿಸಿದ್ದಾರೆ.
ಇದೇ ವೇಳೆ, ಸಿಡಿ ಪ್ರಕರಣಕ್ಕೆ ಸಂಬಂಧಿಸಿ ಅಮರ್ ಸಿಂಗ್ ವಿರುದ್ಧ ಸೋಮವಾರ ಶಾಂತಿ ಭೂಷಣ್ ಅವರ ಪುತ್ರ ಪ್ರಶಾಂತ್ ಭೂಷಣ್ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿಯನ್ನು ಸೋಮವಾರ ದಾಖಲಿಸಿದ್ದಾರೆ.