ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಭ್ರಷ್ಟಾಚಾರ: ಸೋನಿಯಾ ಮೇಲೆ ಕ್ರಮಕ್ಕೆ ಅನುಮತಿ ಕೋರಿದ ಸ್ವಾಮಿ
(Corruption | Sonia Gandhi | Subrahmaniam Swamy | Prosecution | Manmohan Singh)
ಭ್ರಷ್ಟಾಚಾರ: ಸೋನಿಯಾ ಮೇಲೆ ಕ್ರಮಕ್ಕೆ ಅನುಮತಿ ಕೋರಿದ ಸ್ವಾಮಿ
ಚೆನ್ನೈ, ಬುಧವಾರ, 20 ಏಪ್ರಿಲ್ 2011( 14:47 IST )
PTI
ಭ್ರಷ್ಟಾಚಾರದ ವಿರುದ್ಧ ಒಂದೆಡೆ ಅಣ್ಣಾ ಹಜಾರೆಯ ಜನಾಂದೋಲನದ ಭಾರೀ ಸುದ್ದಿಯಾಗುತ್ತಿದ್ದಂತೆಯೇ, 2ಜಿ ಹಗರಣ ಹೊರಗೆಳೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಜನತಾ ಪಕ್ಷ ಅಧ್ಯಕ್ಷ ಡಾ.ಸುಬ್ರಹ್ಮಣ್ಯಂ ಸ್ವಾಮಿ, ಭಾರತ ಸರಕಾರದ ಪರಮೋಚ್ಚ ಅಧಿಕಾರ ಕೇಂದ್ರ ಎಂದೇ ಹೇಳಲಾಗುತ್ತಿರುವ ಸೋನಿಯಾ ಗಾಂಧಿಯನ್ನೇ ಕಾನೂನಿನ ಚೌಕಟ್ಟಿನೊಳಗೆ ಸಿಲುಕಿಸಲು ಮುಂದಾಗಿದ್ದಾರೆ. ಭ್ರಷ್ಟಾಚಾರ ನಿಯಂತ್ರಣ ಕಾಯಿದೆಯಡಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಅನುಮತಿ ಕೊಡುವಂತೆ ಅವರು ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಪತ್ರ ಬರೆದಿದ್ದಾರೆ.
ಪ್ರಧಾನಿಗೆ ಈ ಕುರಿತು ಪತ್ರ ಬರೆದಿರುವುದಾಗಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ ಸುಬ್ರಹ್ಮಣ್ಯಂ ಸ್ವಾಮಿ, ಸೋನಿಯಾ ಗಾಂಧಿಯನ್ನು ಕಾನೂನಿನ ಬಾಹುಗಳಲ್ಲಿ ಸಿಲುಕಿಸಬಹುದಾದ ಹಲವಾರು ಪ್ರಕರಣಗಳುಳ್ಳ 206 ಪುಟಗಳ ಈ ಅರ್ಜಿಯನ್ನು ಕಳೆದ ಶುಕ್ರವಾರವೇ ಪ್ರಧಾನಿ ಸಿಂಗ್ ಅವರಿಗೆ ಸಲ್ಲಿಸಲಾಗಿದೆ ಎಂದಿದ್ದಾರೆ. ಸೋನಿಯಾ ಗಾಂಧಿ ಅವರು ಸಂಪುಟ ದರ್ಜೆಯ ಸ್ಥಾನಮಾನವುಳ್ಳ, ರಾಷ್ಟ್ರೀಯ ಸಲಹಾ ಮಂಡಳಿಯ ಅಧ್ಯಕ್ಷೆಯಾಗಿರುವುದರಿಂದ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಸರಕಾರದ ಅನುಮತಿ ಅಗತ್ಯ.
ಪ್ರಧಾನಿ ಅವರು ಕ್ರಮ ಕೈಗೊಳ್ಳಲು ಅನುಮತಿ ಕೊಡದೇ ಹೋದರೆ ಸುಪ್ರೀಂ ಕೋರ್ಟಿನ ಮೊರೆ ಹೋಗುವುದಾಗಿ ಸ್ವಾಮಿ ತಿಳಿಸಿದ್ದಾರೆ. ದಾಖಲೆಗಳ ಆಧಾರದಲ್ಲಿ, ಸೋನಿಯಾ ಗಾಂಧಿ ಮೇಲ್ನೋಟಕ್ಕೆ ತಪ್ಪಿತಸ್ಥರು ಎಂಬುದು ತಿಳಿದುಬರುತ್ತದೆ ಎಂದು ಕೂಡ ಸ್ವಾಮಿ ಹೇಳಿದ್ದಾರೆ.
1972ರಿಂದಲೂ ಸೋನಿಯಾ ಗಾಂಧಿ ಭ್ರಷ್ಟಾಚಾರ ಕೃತ್ಯಗಳನ್ನು ನಡೆಸುತ್ತಲೇ ಬಂದಿದ್ದಾರೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಪ್ರಮುಖವಾಗಿ ಬೋಫೋರ್ಸ್ ಹಗರಣ, ಭಾರದದಲ್ಲಿ ತೆರಿಗೆ ವಂಚಿಸಿ ವಿದೇಶದಲ್ಲಿ ಕಪ್ಪು ಹಣ ಇರಿರುವುದು, ಹಾಗೂ ಇನ್ನೂ ಅನೇಕ ಪ್ರಕರಣಗಳಲ್ಲಿ ಸೋನಿಯಾ ಗಾಂಧಿ ಮೇಲೆ ಕ್ರಮ ಕೈಗೊಳ್ಳಬಹುದಾಗಿದೆ ಎಂದು ವಕೀಲರೂ ಆಗಿರುವ ಡಾ.ಸ್ವಾಮಿ ವಾದಿಸಿದ್ದಾರೆ.
ಇಷ್ಟು ಮಾತ್ರವಲ್ಲದೆ, ಸೋನಿಯಾ ಗಾಂಧಿಗೆ ಭಾರತೀಯ ಪೌರತ್ವ ನೀಡಿದ ಪರಿಸ್ಥಿತಿಗಳನ್ನು ಕೂಡ ಅವರು ಪ್ರಶ್ನಿಸಿದ್ದಾರೆ. ಇಟಲಿ ಉದ್ಯಮಿ, ಬೋಫೋರ್ಸ್ ಹಗರಣದ ಆರೋಪಿ ಒಟ್ಟಾವಿಯೋ ಕ್ವಟ್ರೋಚಿ ಹಾಗೂ ದಿವಂಗತ ರಾಜೀವ್ ಗಾಂಧಿ ಮತ್ತು ಸೋನಿಯಾಗೆ ಇರುವ ಸಂಬಂಧಗಳ ಕುರಿತಾಗಿಯೂ ಸಾಕ್ಷ್ಯಾಧಾರಗಳ ಸಹಿತ ಈ ಸುದೀರ್ಘ ಪತ್ರದಲ್ಲಿ ವಿವರಿಸಲಾಗಿದೆ.
ಸ್ವೀಡನ್‌ನ ರಾಷ್ಟ್ರೀಯ ತನಿಖಾ ಸಂಸ್ಥೆಯ ಮುಖ್ಯಸ್ಥ ಸ್ಟೆನ್ ಲಿಂಡ್‌ಸ್ಟಾರ್ಮ್ ಅವರ ಹೇಳಿಕೆಯನ್ನೂ ಈ ಪತ್ರದಲ್ಲಿ ಅಳವಡಿಸಲಾಗಿದೆ. ಬೋಫೋರ್ಸ್‌ನ ವಿಶೇಷ ಪ್ರಾಸಿಕ್ಯೂಟರ್ ಕೂಡ ಆಗಿರುವ ಸ್ವೀಡಿಶ್ ತನಿಖಾ ಸಂಸ್ಥೆ ಮುಖ್ಯಸ್ಥರು ಹೇಳಿದ ಪ್ರಕಾರ, ಬೋಫೋರ್ಸ್ ಪ್ರಕರಣದೊಂದಿಗೆ ಅಂಟಿಕೊಂಡಿರುವ ಲಂಚವು ಸೋನಿಯಾ ಗಾಂಧಿಯ ಹೆಳೆಯನಿಂದಲೇ ಬಂದಿರುವುದು ಕಾಕತಾಳೀಯವೇನಲ್ಲ.
ಈ ಮೊದಲು, ಕರ್ನಾಟಕ ಮುಖ್ಯಮಂತ್ರಿ ಯಡಿಯೂರಪ್ಪ, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಪ್ರಾಸಿಕ್ಯೂಶನ್‌ಗೆ ಅನುಮತಿ ಕೇಳಲಾದ ಪ್ರಕರಣಗಳು ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದು, ದೇಶದ ಸರಕಾರದ ಮುಖ್ಯಸ್ಥರ ಪ್ರಾಸಿಕ್ಯೂಶನ್‌ಗೆ ಸುಬ್ರಹ್ಮಣ್ಯಂ ಸ್ವಾಮಿ ಅನುಮತಿ ಕೇಳಿರುವುದು ಅಷ್ಟೇನೂ ಬಿರುಗಾಳಿ ಎಬ್ಬಿಸಿಲ್ಲ. ಇದೀಗ ಪ್ರಧಾನಿಯವರು ಅನುಮತಿ ಕೊಡುತ್ತಾರೆಯೇ, ಇಲ್ಲವೇ ಎಂಬುದು ಕಾದು ನೋಡಬೇಕಾದ ಅಂಶ.