ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಕ್ರಮ ಗಣಿ: ಪರವಾನಗಿ ರದ್ದತಿಗೆ ನೋಟಿಸ್- ಸುಪ್ರೀಂಗೆ ರಾಜ್ಯ
(Illegal Mining | CEC Report | Supreme Court | Karnataka Government)
ಅಕ್ರಮ ಗಣಿ: ಪರವಾನಗಿ ರದ್ದತಿಗೆ ನೋಟಿಸ್- ಸುಪ್ರೀಂಗೆ ರಾಜ್ಯ
ನವದೆಹಲಿ, ಗುರುವಾರ, 21 ಏಪ್ರಿಲ್ 2011( 16:20 IST )
ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ಕುರಿತಾಗಿ ಕೇಂದ್ರೀಯ ಉನ್ನತಾಧಿಕಾರ ಸಮಿತಿ (ಸಿಇಸಿ) ಸುಪ್ರೀಂ ಕೋರ್ಟಿಗೆ ವರದಿ ಸಲ್ಲಿಸಿದ ಹಿನ್ನೆಲೆಯಲ್ಲಿ, ಕ್ರಮ ಕೈಗೊಳ್ಳಲಾದ ವರದಿಯನ್ನು ಗುರುವಾರ ಕರ್ನಾಟಕ ಸರಕಾರವು ನ್ಯಾಯಾಲಯದ ಮುಂದಿಟ್ಟಿದ್ದು, ಅಕ್ರಮ ಗಣಿಗಾರಿಕೆ ನಡೆಸುತ್ತಿರುವ ಗಣಿ ಕಂಪನಿಗಳ ಗುತ್ತಿಗೆ ರದ್ದತಿಗೆ ನೋಟೀಸ್ ನೀಡಲಾಗಿದೆ ಎಂದು ತಿಳಿಸಿದೆಯಲ್ಲದೆ, ಈ ಕುರಿತಾದ ಸುಪ್ರೀಂ ಕೋರ್ಟಿನ ತೀರ್ಪಿಗೆ ಬದ್ಧವಾಗಿರುವುದಾಗಿ ಸ್ಪಷ್ಟಪಡಿಸಿದೆ.
ರಾಜ್ಯ ಸರಕಾರ ಮುಖ್ಯ ಕಾರ್ಯದರ್ಶಿ ರಂಗನಾಥ್ ಅವರು ಸುಪ್ರೀಂ ಕೋರ್ಟಿಗೆ ಸಲ್ಲಿಸಿದ ಈ ವರದಿಯಲ್ಲಿ, ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿರುವ ಹಲವು ಗಣಿ ಕಂಪನಿಗಳಿಗೆ ಈಗಾಗಲೇ ನೋಟೀಸ್ ಜಾರಿಯಾಗಿದೆ ಎಂದು ತಿಳಿಸಲಾದೆ. ಕಳೆದ ವಾರ, ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಅಕ್ರಮ ಗಣಿಗಾರಿಕೆಗೆ ಪರವಾನಗಿ ನೀಡಿದ್ದಾರೆ ಎಂಬ ಆರೋಪಕ್ಕೆ ಕಾರಣವಾಗಿದ್ದ ರಾಮರಾವ್ ಪೋಳ್ ಕಂಪನಿ ಸಹಿತ ಹಲವು ಅಕ್ರಮ ಗಣಿ ಕಂಪನಿಗಳ ಗಣಿ ಗುತ್ತಿಗೆಯನ್ನು ಖಾಯಂ ಆಗಿ ರದ್ದುಗೊಳಿಸಲು ನೋಟೀಸ್ ನೀಡಲಾಗಿದೆ ಎಂದು ತಿಳಿಸಲಾಗಿದೆ. ಹಾಗೂ ಈ ಗಣಿ ಕಂಪನಿಗಳಿಗೆ ಉತ್ತರಿಸಲು 60 ದಿನಗಳ ಕಾಲಾವಕಾಶ ನೀಡಲಾಗಿದೆ.
ಗಣಿ ಲೂಟಿಗೆ ಪೂರಕವಾಗಿ ನಿರಾಕ್ಷೇಪಣಾ ಪತ್ರ ನೀಡಿ, ಅಕ್ರಮದಲ್ಲಿ ಭಾಗಿಯಾಗಿರುವ ಅರಣ್ಯ ಇಲಾಖಾ ಅಧಿಕಾರಿಗಳ ಮೇಲೆ ಇಲಾಖಾ ಕ್ರಮಕ್ಕೆ ಅನುಮತಿ ನೀಡಲಾಗಿದೆ. ಅಕ್ರಮ ಗಣಿಗಾರಿಕೆಯ ನಿಟ್ಟಿನಲ್ಲಿ ಲೋಕಾಯುಕ್ತರು ಸಲ್ಲಿಸಿದ ವರದಿಯ ಹಿನ್ನೆಲೆಯಲ್ಲಿ ಈಗಾಗಲೇ ಜಂಟಿ ಗಡಿ ಸಮೀಕ್ಷೆ ಕಾರ್ಯ ನಡೆಯುತ್ತಿದೆ ಎಂದು ಸರಕಾರವು ಸುಪ್ರೀಂ ಕೋರ್ಟ್ ಮುಂದೆ ಹೇಳಿಕೊಂಡಿದೆ.
ಸಿಇಸಿ ವರದಿಯಲ್ಲಿ ಉಲ್ಲೇಖಿಸಿರುವಂತೆ, ಅಕ್ರಮ ಗಣಿಗಾರಿಕೆಗಾಗಿ ನಾಲ್ಕು ಗಣಿ ಕಂಪನಿಗಳಾದ, ಟ್ರೈಡೆಂಟ್ ಮಿನರಲ್, ಎಸ್.ಬಿ.ಮಿನರಲ್ಸ್, ಮುನೀರ್ ಮಿನರಲ್ಸ್, ಯುಎನ್ ಮಿನರಲ್ಸ್‌ಗಳ ಗುತ್ತಿಗೆ ರದ್ದತಿ ವಿಚಾರಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟು ನೀಡುವ ತೀರ್ಪಿಗೆ ತಾನು ಬದ್ಧವಾಗಿರುವುದಾಗಿಯೂ ಸರಕಾರವು ಹೇಳಿದೆ.