ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ಗೋಧ್ರಾ ಹಿಂಸಾಚಾರದ ದೆವ್ವ ಮತ್ತೆ ಕಾಡತೊಡಗಿದೆ. ಗುಪ್ತಚರ ಇಲಾಖೆಯಲ್ಲಿ ಕೆಲಸ ಮಾಡಿದ್ದ ಹಿರಿಯ ಐಪಿಎಸ್ ಅಧಿಕಾರಿಯೊಬ್ಬರು ಸುಪ್ರೀಂ ಕೋರ್ಟಿಗೆ ಶುಕ್ರವಾರ ಅಫಿದವಿತ್ ಸಲ್ಲಿಸಿ, 2002ರ ಗೋಧ್ರಾ ರೈಲು ದಹನ ಬಳಿಕದ ಹಿಂಸಾಚಾರದಲ್ಲಿ ಮೋದಿ ಕೈವಾಡವಿದೆ ಎಂದು ಹೇಳಿದ್ದಾರೆ.
2002ರ ಫೆಬ್ರವರಿ 27ರಂದು ಮುಖ್ಯಮಂತ್ರಿ ನಿವಾಸದಲ್ಲಿ ನಡೆದ ಸಭೆಯಲ್ಲಿ ತಾನು ಹಾಜರಿದ್ದೆ, ತನ್ನ ಮೇಲಧಿಕಾರಿಗಳು ಮೋದಿ ಸೂಚನೆಗಳನ್ನು ಕಣ್ಣು ಮುಚ್ಚಿ ಪಾಲಿಸಿದರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕೆಡಲು ಇದೇ ಕಾರಣವಾಯಿತು ಎಂದು ಈ ಅಧಿಕಾರಿ ಸಂಜಯ್ ಭಟ್ ಎಂಬವರು ಅಫಿದವಿತ್‌ನಲ್ಲಿ ತಿಳಿಸಿದ್ದಾರೆ. ಆದರೆ, ಹೇಳಿಕೆ ದಾಖಲಿಸಲು ತನಗೆಂದಿಗೂ ಅವಕಾಶವನ್ನೇ ಕೊಟ್ಟಿರಲಿಲ್ಲ ಎಂದೂ ಅವರು ತಿಳಿಸಿದ್ದಾರೆ.
ಈ ಕೇಸಿನ ವಿಚಾರಣೆಗೆ ಸುಪ್ರೀಂ ಕೋರ್ಟೇ ರಚಿಸಿರುವ ವಿಶೇಷ ತನಿಖಾ ದಳ (ಎಸ್ಐಟಿ) ಮೇಲೆ ತನಗೆ ನಂಬಿಕೆಯಿಲ್ಲ. ಹೀಗಾಗಿ ನಾನಾಗಿಯೇ ಸುಪ್ರೀಂ ಕೋರ್ಟಿಗೆ ಅಫಿದವಿತ್ ಸಲ್ಲಿಸಿರುವುದಾಗಿ ಸಂಜಯ್ ಹೇಳಿದ್ದಾರಲ್ಲದೆ, ತನ್ನ ಹಾಗೂ ಕುಟುಂಬಕ್ಕೆ ಸೂಕ್ತ ಭದ್ರತೆ ಒದಗಿಸಬೇಕೆಂದು ಕೋರಿದ್ದಾರೆ.
2002ರಲ್ಲಿ ಗೋಧ್ರಾದಲ್ಲಿ ರೈಲಿಗೆ ಬೆಂಕಿ ಹಚ್ಚಿ ಐವತ್ತಕ್ಕೂ ಹೆಚ್ಚು ಕರಸೇವಕರ ಜೀವಂತ ಕೊಲೆ ಮಾಡಿದ್ದ ಆರೋಪದಲ್ಲಿ, ಅಹಮದಾಬಾದ್ ವಿಶೇಷ ನ್ಯಾಯಾಲಯವು ಮಾರ್ಚ್ 1ರಂದು 11 ಮಂದಿಗೆ ಮರಣ ದಂಡನೆಯನ್ನೂ, ಇತರ 20 ಮಂದಿಗೆ ಜೀವಾವಧಿ ಶಿಕ್ಷೆಯನ್ನೂ ವಿಧಿಸಿ ಆದೇಶ ನೀಡಿತ್ತು.
ಇದಕ್ಕೂ ಮೊದಲು, ಫೆ.22ರಂದು ನ್ಯಾಯಾಲಯವು 31 ಮಂದಿ ತಪ್ಪಿತಸ್ಥರು ಎಂದು ಘೋಷಿಸಿ, ಪ್ರಧಾನ ಸಂಚುಕೋರ ಮೌಲ್ವಿ ಹುಸೇನ್ ಉಮರ್‌ಜೀ ಸಹಿತ ಇತರ 63 ಮಂದಿಯನ್ನು ಖುಲಾಸೆಗೊಳಿಸಿತ್ತು.
ಸಬರಮತಿ ರೈಲಿಗೆ ಬೆಂಕಿ ಹಚ್ಚಿದಂತಹಾ ಕೆಲಸಗಳು ರಾಜ್ಯದಲ್ಲಿ ಇನ್ನೆಂದೂ ನಡೆಯಬಾರದು, ಹೀಗಾಗಿ ಒಂದು ಸಮುದಾಯ ತಮ್ಮ ಆಕ್ರೋಶ ಹೊರಗೆಡಹಲು ಬಿಡಬೇಕು, ಮತ್ತೊಂದು ಸಮುದಾಯಕ್ಕೊಂದು ಪಾಠ ಕಲಿಸಬೇಕು ಎಂದು ಮೋದಿ ನೇರವಾಗಿ ಸೂಚನೆಗಳನ್ನು ನೀಡಿರುವುದಾಗಿ ಅಫಿದವಿತ್‌ನಲ್ಲಿ ಅವರು ತಿಳಿಸಿದ್ದಾರೆ. ಸದ್ಯ ಅವರು ಜೂನಾಗಢದ ರಾಜ್ಯ ಮೀಸಲು ಪೊಲೀಸ್ ತರಬೇತಿ ಕೇಂದ್ರದ ಪ್ರಿನ್ಸಿಪಾಲ್ ಆಗಿದ್ದಾರೆ.
ಸಂಜಯ್ ಆರೋಪ ಸುಳ್ಳು: ನಿವೃತ್ತ ಡಿಜಿಪಿ ಆದರೆ, ಸಂಜಯ್ ಅವರು ಸಭೆಗೆ ಹಾಜರಾಗಿದ್ದರು ಎಂಬ ಅಂಶವನ್ನು ಅವರ ಮೇಲಧಿಕಾರಿಯಾಗಿದ್ದ ಗುಜರಾತ್‌ನ ನಿವೃತ್ತ ಡಿಜಿಪಿ ಆರ್.ಬಿ.ಶ್ರೀಕುಮಾರ್ ನಿರಾಕರಿಸಿದ್ದಾರೆ. ಮೋದಿ ಸಭೆಗೆ ಹಾಜರಾಗಿರುವ ಸಂಗತಿಯನ್ನು ಸಂಜಯ್ ಅವರು ತನ್ನ ಬಳಿ ಎಂದಿಗೂ ಹೇಳಿರಲೇ ಇಲ್ಲ ಮತ್ತು ಅವರು ಹಾಜರಾಗಿಯೂ ಇಲ್ಲ ಎಂದು ಅವರು ಹೇಳಿದ್ದಾರೆ.
ನ್ಯಾಯಾಲಯವೇ ನೋಡಿಕೊಳ್ಳುತ್ತದೆ: ಬಿಜೆಪಿ ಹೊಸ ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ರಾಜ್ಯಸಭೆಯ ಬಿಜೆಪಿ ನಾಯಕ ಅರುಣ್ ಜೇಟ್ಲಿ, ಪೊಲೀಸ್ ಅಧಿಕಾರಿ ಸಲ್ಲಿಸಿರುವ ಅಫಿದವಿತ್‌ನಲ್ಲಿ ಸತ್ಯಾಂಶವಿಲ್ಲ. ಇದನ್ನೆಲ್ಲಾ ನ್ಯಾಯಾಲಯವು ನೋಡಿಕೊಳ್ಳುತ್ತದೆ. ನಾವು ಎಸ್ಐಟಿ ತನಿಖೆ ಪೂರ್ಣವಾಗುವವರೆಗೂ ಮತ್ತು ಸುಪ್ರೀಂ ಕೋರ್ಟ್ ಅಂತಿಮ ತೀರ್ಪು ಬರುವವರೆಗೂ ಕಾಯೋಣ ಎಂದು ತಿಳಿಸಿದ್ದಾರೆ.