ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ದಿಗ್ವಿಜಯ್ ಸಿಂಗ್ ವಿರುದ್ಧ ಚಾರ್ಜ್ ಶೀಟ್‌ಗೆ ಹೈಕೋರ್ಟ್ ಸೂಚನೆ (Digvijay Singh | High Court | Economics Offences Wing | Indore mall)
ದಿಗ್ವಿಜಯ್ ಸಿಂಗ್ ವಿರುದ್ಧ ಚಾರ್ಜ್ ಶೀಟ್‌ಗೆ ಹೈಕೋರ್ಟ್ ಸೂಚನೆ
ಭೋಪಾಲ್, ಶುಕ್ರವಾರ, 22 ಏಪ್ರಿಲ್ 2011( 17:54 IST )
ಲೋಕಪಾಲ್ ಮಸೂದೆ ಕರಡು ರಚನಾ ಸಮಿತಿ ಸದಸ್ಯರ ವಿರುದ್ಧ ಅಪಪ್ರಚಾರ ಆಂದೋಲನದ ನೇತೃತ್ವ ವಹಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಮಾಜಿ ಮುಖ್ಯಮಂತ್ರಿ ದಿಗ್ವಿಜಯ ಸಿಂಗ್ ಹಾಗೂ ಇತರೆ 11 ಮಂದಿ ವಿರುದ್ಧ ಆರೋಪ ಪಟ್ಟಿ ಸಲ್ಲಿಸುವಂತೆ ಮಧ್ಯಪ್ರದೇಶ ಹೈಕೋರ್ಟ್ ಆರ್ಥಿಕ ಅಪರಾಧ ವಿಭಾಗಕ್ಕೆ ನಿರ್ದೇಶಿಸಿದೆ.
ಇಂದೋರ್ ಮಾಲ್‌ನಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂನ್ 30ರ ಒಳಗಾಗಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಬೇಕು ಹಾಗೂ ಜುಲೈ 4 ರ ಒಳಗಾಗಿ ಈ ಕುರಿತ ವಿಸ್ತೃತ ವರದಿಯನ್ನು ನೀಡುವಂತೆ ನ್ಯಾಯ ಮೂರ್ತಿಗಳಾದ ಪ್ರಕಾಶ್ ಶ್ರೀವಾಸ್ತವ ಹಾಗೂ ಸಂಜಯ್ ಸೆತ್ ನೇತೃತ್ವದ ನ್ಯಾಯಪೀಠ ಆರ್ಥಿಕ ಅಪರಾಧ ವಿಭಾಗಕ್ಕೆ ಸೂಚಿಸಿದೆ.
ಇಂದೋರ್‌ನ ಹೃದಯ ಭಾಗದಲ್ಲಿರುವ ಮಹಾತ್ಮ ಗಾಂಧಿ ರಸ್ತೆ ಬಳಿ ವಸತಿ ಪ್ರದೇಶಕ್ಕಾಗಿ 1991 ರಲ್ಲಿ ಮಾಡಿದ ಮಾಸ್ಟರ್ ಪ್ಲಾನ್‌ನಲ್ಲಿ ಮೀಸಲಿಟ್ಟಿದ್ದ 25 ಸಾವಿರ ಚದರಡಿ ಪ್ರದೇಶವನ್ನು ಟ್ರೆಷರ್ ಐಲ್ಯಾಂಡ್ ಮಾಲ್ ನಿರ್ಮಾಣಕ್ಕಾಗಿ ಅಂದಿನ ಮುಖ್ಯಮಂತ್ರಿ ದಿಗ್ವಿಜಯ್‌ಸಿಂಗ್ ನೇತೃತ್ವದ ಸರಕಾರ ವಿಶೇಷ ಅನುಮತಿ ನೀಡಿತ್ತು.
ಈ ಕುರಿತು ಆರ್ಥಿಕ ಅಪರಾಧ ವಿಭಾಗಕ್ಕೆ ಕಳೆದ 3 ವರ್ಷಗಳ ಹಿಂದೆ ಅರ್ಜಿ ಸಲ್ಲಿಸಿದ್ದ ಮಹೇಶ್ ಗರ್ಗ್, ದಿಗ್ವಿಜಯ್ ನೇತೃತ್ವದ ಸರಕಾರವು ಮಾಲ್ ನಿರ್ಮಾಣಕ್ಕಾಗಿ ನಿಯಮಾವಳಿಗಳನ್ನು ತಿದ್ದುಪಡಿ ಮಾಡಿ, ಅಕ್ರಮ ನಡೆಸಿದೆ ಎಂದು ಆಪಾದಿಸಿದ ಹಿನ್ನೆಲೆಯಲ್ಲಿ ಆರ್ಥಿಕ ಅಪರಾಧ ವಿಭಾಗ (ಇಒಡಬ್ಲೂ) ಮಾಲ್ ನಿರ್ಮಾಣ ಕುರಿತು ದಾಖಲೆಗಳನ್ನು 2009 ರ ಫೆಬ್ರವರಿ 12 ರಂದು ವಶಪಡಿಸಿಕೊಂಡಿತ್ತು.
ಮಾಲ್‌ಗೆ ಅನುಮತಿ ನೀಡಿರುವ ಕುರಿತು ತನಿಖೆ ನಡೆಸುತ್ತಿದ್ದ ಇಒಡಬ್ಲೂ ಮೇಲೆ ರಾಜಕೀಯ ಒತ್ತಡವಿದ್ದು, ವಿಚಾರಣಾಧಿಕಾರಿಗಳನ್ನು 5 ಬಾರಿ ಬದಲಾಯಿಸಲಾಗಿತ್ತು . ಈ ಹಿನ್ನೆಲೆಯಲ್ಲಿ ಸಮರ್ಪಕ ತನಿಖೆಗಾಗಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲು ನಿರ್ಧರಿಸಿದ್ದೆವು ಎಂದು ಗರ್ಗ್ ಪರ ವಕೀಲರು ತಿಳಿಸಿದ್ದಾರೆ.
ಮಾಲ್ ನಿರ್ಮಾಣಕ್ಕಾಗಿ 25 ಸಾವಿರ ಚದರಡಿ ಜಾಗವನ್ನು ನೀಡಿದ್ದ ಸರಕಾರ, ಗೆಜೆಟ್ ನಿಯಮಾವಳಿಯಲ್ಲಿ ತಿದ್ದುಪಡಿ ಮಾಡಿ 1 ಲಕ್ಷ ಚದರಡಿ ಪ್ರದೇಶವನ್ನು ಮಾಲ್ ನಿರ್ಮಾಣಕ್ಕೆ ಅನುಮತಿ ನೀಡಿತ್ತು.
ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್, ಗೃಹ ನಿರ್ಮಾಣ ಖಾತೆಯ ಮಾಜಿ ಸಚಿವ ಚೌಧರಿ ರಾಕೇಶ್ ಸಿಂಗ್ ಚತುರ್ವೇದಿ, ಮಾಜಿ ಮುಖ್ಯ ಕಾರ್ಯದರ್ಶಿ ಎ.ವಿ.ಸಿಂಗ್, ಗೃಹ ನಿರ್ಮಾಣ ಮಂಡಳಿ ಮಾಜಿ ಚಂದ್ರ ಪ್ರಭಾಶ್ ಶೇಖರ್ ಹಾಗೂ ಮಾಲ್ ಮಾಲೀಕರಾದ ಪ್ರೇಂ ಕಲಾನಿ ಹಾಗೂ ಮಹೇಶ್ ಕಲಾನಿ ಮತ್ತು ನಾಲ್ವರು ಹಿರಿಯ ಐಎಎಸ್ ಅಧಿಕಾರಿಗಳ ವಿರುದ್ಧ ನ್ಯಾಯ ಪೀಠ ನೋಟಿಸ್ ಜಾರಿಗೊಳಿಸಿದೆ.