ಲೋಕಪಾಲ ಮಸೂದೆ ಕರಡು ರಚನಾ ಸಮಿತಿ ಸದಸ್ಯ, ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶ ಸಂತೋಷ್ ಹೆಗ್ಡೆ ವಿರುದ್ಧ ವಾಗ್ದಾಳಿ ಮಾಡಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ ಸಿಂಗ್ ಶುಕ್ರವಾರ ತಮ್ಮ ಮಾತು ಬದಲಿಸಿದ್ದು, "ನಾನು ಹೆಗ್ಡೆ ಅವರಿಗೆ ಯಾವುದೇ ರೀತಿಯ ಅಪಮಾನ ಮಾಡಿಲ್ಲ ಮತ್ತು ಆ ರೀತಿ ಹೇಳಿಯೂ ಇಲ್ಲ. ನನಗೆ ಅವರ ಬಗ್ಗೆ ಅಭಿಮಾನವಿದೆ" ಎಂದು ಹೇಳಿದ್ದಾರೆ.
ಈ ಕುರಿತು ಸ್ಪಷ್ಟನೆ ನೀಡಿದ ದಿಗ್ವಿಜಯ್, ಲೋಕಪಾಲ್ ಮಸೂದೆಯೊಂದರಿಂದಲೇ ರಾಷ್ಟ್ರದಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಮಾಡುವುದು ಸಾಧ್ಯವಿಲ್ಲ ಎಂದಿದ್ದೆ. ಕರ್ನಾಟಕ ಲೋಕಾಯುಕ್ತ ಕಾಯಿದೆ ರಾಷ್ಟ್ರದಲ್ಲೇ ಅತ್ಯಂತ ಪರಿಣಾಮಕಾರಿಯಾಗಿದ್ದರೂ ರಾಜ್ಯದಲ್ಲಿ ರೆಡ್ಡಿ ಸಹೋದರರು ಮತ್ತು ಯಡಿಯೂರಪ್ಪ ನೇತೃತ್ವದ ಸರಕಾರದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಅನಿಯಂತ್ರಿತವಾಗಿ ಮುಂದುವರಿಯುತ್ತಿದೆ ಎಂದಷ್ಟೇ ಹೇಳಿದ್ದಾಗಿ ತಿಳಿಸಿದರು.
ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪ ಭೂ ಹಗರಣದಲ್ಲಿ ಶಾಮೀಲಾಗಿದ್ದಾರೆ. ಸಚಿವರಾದ ಬಳ್ಳಾರಿಯ ರೆಡ್ಡಿ ಸಹೋದರರು ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದಾರೆ ಎಂದು ಆಪಾದಿಸಿದರು.
ಕರ್ನಾಟಕದಲ್ಲಿ ಭ್ರಷ್ಟಾಚಾರ ನಿಯಂತ್ರಿಸಲು ಹೆಗ್ಡೆ ವಿಫಲರಾಗಿದ್ದರು ಎಂದು ದಿಗ್ವಿಜಯ್ ಗುರುವಾರ ಹೇಳಿಕೆ ನೀಡಿದ್ದರು.