ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಹೋರಾಟಗಾರರನ್ನು ಬೆದರಿಸುವ ತಂತ್ರ ನಿಲ್ಲಿಸಿ: ಕಾಂಗ್ರೆಸಿಗೆ ಬಿಜೆಪಿ (Corruption | Shanti Bhushan | Prashant Bhushan | Arun Jaitly | Lok Pal Bill)
ಹೋರಾಟಗಾರರನ್ನು ಬೆದರಿಸುವ ತಂತ್ರ ನಿಲ್ಲಿಸಿ: ಕಾಂಗ್ರೆಸಿಗೆ ಬಿಜೆಪಿ
ಕೋಲ್ಕತಾ, ಶನಿವಾರ, 23 ಏಪ್ರಿಲ್ 2011( 08:48 IST )
ಭ್ರಷ್ಟಾಚಾರ ವಿರುದ್ಧ ಹೋರಾಡುತ್ತಿರುವವರನ್ನು ಬೆದರಿಸುವ ಕೆಲಸವನ್ನು ನಿಲ್ಲಿಸುವಂತೆ ಕಾಂಗ್ರೆಸ್ ಮತ್ತು ಯುಪಿಎ ಸರಕಾರಕ್ಕೆ ಬಿಜೆಪಿ ಹಿತವಚನ ನೀಡಿದೆ.
"ಭ್ರಷ್ಟಾಚಾರದ ವಿರುದ್ಧ ಲೋಕಪಾಲರಂತಹಾ ಓಂಬುಡ್ಸ್‌ಮನ್ ಅಗತ್ಯವಿದೆ. ಈ ಲೋಕಪಾಲರನ್ನು ಸ್ವತಂತ್ರ ವ್ಯವಸ್ಥೆಯ ಮೂಲಕವೇ ನೇಮಿಸಬೇಕು" ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಬಿಜೆಪಿ ನೇತಾರ ಅರುಣ್ ಜೇಟ್ಲಿ ಹೇಳಿದ್ದಾರೆ.
ಭ್ರಷ್ಟಾಚಾರದ ವಿರುದ್ಧ ಹೇಗೆ ಹೋರಾಡಬೇಕು ಎಂಬ ಮಾರ್ಗೋಪಾಯಗಳನ್ನು ಸರಕಾರವು ಹುಡುಕಬೇಕೇ ಹೊರತು, ಭ್ರಷ್ಟಾಚಾರವನ್ನು ಮುಚ್ಚಿ ಹಾಕಲು ಅಲ್ಲ ಎಂದು ಜೇಟ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವನ್ನು ತಿವಿದಿದ್ದಾರೆ.
ಭ್ರಷ್ಟಾಚಾರದ ವಿರುದ್ಧ ಸಮರ ಸಾರಿರುವ ಹೋರಾಟಗಾರರನ್ನು ಹೆದರಿಸುವುದು ಮತ್ತು ಇದರಲ್ಲಿ ಆಡಳಿತಾರೂಢ ಪಕ್ಷದ ರಾಜಕಾರಣಿಗಳು ಭಾಗಿಯಾಗಿರುವುದು ಯುಪಿಎಗೆ ಶೋಭೆ ತರುವಂಥದ್ದಲ್ಲ. ಮಾಜಿ ನ್ಯಾಯಾಧೀಶ ಅಥವಾ ಹೋರಾಟಗಾರರನ್ನು ಮುಜುಗರದಲ್ಲಿ ಸಿಲುಕಿಸುವ ಈ ಬೆದರಿಕೆ ತಂತ್ರಗಳು ತೀರಾ ದುರದೃಷ್ಟಕರ ಎಂದು ಜೇಟ್ಲಿ ಹೇಳಿದರು.
ಲೋಕಪಾಲ ಮಸೂದೆ ಕರಡು ರಚನಾ ಸಮಿತಿಯ ಸಹ-ಅಧ್ಯಕ್ಷ ಶಾಂತಿಭೂ,ಣ್ ಮತ್ತು ಅವರ ವಕೀಲ ಪುತ್ರ, ಸಮಿತಿ ಸದಸ್ಯ ಪ್ರಶಾಂತ್ ಭೂಷಣ್ ಅವರು ನೋಯಿಡಾ ಮತ್ತು ಅಲಹಾಬಾದ್‌ನಲ್ಲಿ ಜಮೀನು ಅವ್ಯವಹಾರದಲ್ಲಿ ತೊಡಗಿದ್ದರು ಎಂಬ ಕುರಿತು ಕಾಂಗ್ರೆಸಿಗರು ಆಪಾದಿಸಿದ್ದರು. ಇದನ್ನು ಭೂಷಣ್ ನಿರಾಕರಿಸಿದ್ದರು.
"ನಾವು ಅಪಪ್ರಚಾರ ಆಂದೋಲನಕ್ಕೆ ವಿರುದ್ಧ ಇದ್ದೇವೆ" ಎಂಬ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮಾತನ್ನೂ ಅವರು ಕುಟುಕಿದ್ದಾರೆ. "ಸರಕಾರವು ಭ್ರಷ್ಟಾಚಾರದ ಬಗ್ಗೆ ಹೆಚ್ಚು ಹೊಣೆಗಾರಿಕೆ ಪ್ರದರ್ಶಿಸಬೇಕು. ಅಪಪ್ರಚಾರ ಆಂದೋಲನದ ವಿರುದ್ಧ ಇದ್ದೇವೆ ಎಂದು ಹೇಳಿದರೆ ಏನೂ ಪ್ರಯೋಜನವಿಲ್ಲ. ಆದರೆ ನಿಮ್ಮ ಪಕ್ಷದ ಸದಸ್ಯರೇ ಹೋರಾಟಗಾರರನ್ನು ಬೆದರಿಸುವ ತಂತ್ರ ಅನುಸರಿಸುತ್ತಿದ್ದಾರೆ" ಎಂದು ಅವರು ಟೀಕಿಸಿದರು.