ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮೋದಿ ಹೊಗಳುವವರಿಗೆ ಪಾಠ: ಹಜಾರೆಗೆ ಕುಟುಕಿದ ಕಾಂಗ್ರೆಸ್
(Narendra Modi | Anna Hazare | Gujarat Riots | Congress | Manish Tiwari)
ಮೋದಿ ಹೊಗಳುವವರಿಗೆ ಪಾಠ: ಹಜಾರೆಗೆ ಕುಟುಕಿದ ಕಾಂಗ್ರೆಸ್
ನವದೆಹಲಿ, ಶನಿವಾರ, 23 ಏಪ್ರಿಲ್ 2011( 11:31 IST )
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಗುಜರಾತ್‌ನಲ್ಲಿ 2002ರಲ್ಲಿ ನಡೆದ ಗೋಧ್ರೋತ್ತರ ಗಲಭೆಯಲ್ಲಿ ಪ್ರಚೋದನೆ ನೀಡಿದ್ದಾರೆ ಎಂಬ ಕುರಿತು ಐಪಿಎಸ್ ಅಧಿಕಾರಿಯೊಬ್ಬರು ಸುಪ್ರೀಂ ಕೋರ್ಟಿಗೆ ಸಲ್ಲಿಸಿದ ಅಫಿದವಿತ್ ವಿಷಯವನ್ನು ಎತ್ತಿಕೊಂಡಿರುವ ಕಾಂಗ್ರೆಸ್, ಮೋದಿಯನ್ನು ಹೊಗಳುತ್ತಿರುವವರು ಈಗ ಆತ್ಮವಿಮರ್ಶೆ ಮಾಡಿಕೊಳ್ಳಬೇಕು ಎಂದು ಭ್ರಷ್ಟಾಚಾರ ವಿರುದ್ಧ ಆಂದೋಲನ ನಡೆಸುತ್ತಿರುವ ಅಣ್ಣಾ ಹಜಾರೆ ಅವರಿಗೆ ಕುಟುಕಿದ್ದಾರೆ.
"ಗುಜರಾತ್‌ನಲ್ಲಿ ನಡೆದಿರುವುದು ದಂಗೆ ಅಲ್ಲ ಎಂಬುದು ಎಲ್ಲರಿಗೂ ತಿಳಿದ ಸತ್ಯ ವಿಷಯ. ಅದೊಂದು ಸರಕಾರಿ ಪ್ರಾಯೋಜಿತ ಭಯೋತ್ಪಾದನೆಯಾಗಿತ್ತು. ಗುಜರಾತ್ ಮುಖ್ಯಮಂತ್ರಿಯನ್ನು ಶ್ಲಾಘಿಸುತ್ತಿರುವವರೆಲ್ಲರಿಗೂ ನಮ್ಮ ಮನವಿ ಏನೆಂದರೆ, ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಎಲ್ಲರೂ ಓದಬೇಕು ಮತ್ತು ಹಿಂಸಾಚಾರದಲ್ಲಿ ಮಡಿದವರ ಪರಿಸ್ಥಿತಿ ನೆನಪಿಸಿಕೊಳ್ಳಬೇಕು" ಎಂದು ಕಾಂಗ್ರೆಸ್ ವಕ್ತಾರ ಮನೀಷ್ ತಿವಾರಿ ಅವರು ಅಣ್ಣಾ ಹಜಾರೆ ಹೆಸರು ಉಲ್ಲೇಖಿಸದೆ ಪ್ರತಿಕ್ರಿಯೆ ನೀಡುತ್ತಾ ಹೇಳಿದರು.
ಗ್ರಾಮೀಣಾಭಿವೃದ್ಧಿ ಕಾರ್ಯಗಳಿಗಾಗಿ ಮೋದಿ ಅವರ ಆಡಳಿತವನ್ನು ಹೊಗಳಿದ್ದ ಅಣ್ಣಾ ಹಜಾರೆಯವರನ್ನೇ ಉಲ್ಲೇಖಿಸುತ್ತಿದ್ದೀರಾ ಎಂಬ ಪತ್ರಕರ್ತರ ಪ್ರಶ್ನೆಗೆ ಅವರು ಗಲಿಬಿಲಿಗೊಂಡು, "ನಾನೇನೂ ಒಬ್ಬ ನಿರ್ದಿಷ್ಟ ವ್ಯಕ್ತಿಯನ್ನು ಬೆಟ್ಟು ಮಾಡಿ ತೋರಿಸುತ್ತಿಲ್ಲ. ಆದರೆ, ಕಳೆದಲ ಒಂಬತ್ತು ವರ್ಷಗಳಲ್ಲಿ ನರೇಂದ್ರ ಮೋದಿಯನ್ನು ಹೊಗಳುತ್ತಾ ಬಂದಿರುವ ಉದ್ಯಮಿಗಳು, ಸಾಮಾಜಿಕ ಹೋರಾಟಗಾರರು, ನಟರು ಈ ಅರ್ಜಿಯ ಬಗ್ಗೆ, ನಾನಾವತಿ ಆಯೋಗದ ವರದಿ ಬಗ್ಗೆ ಮತ್ತು ಸುಪ್ರೀಂ ಕೋರ್ಟಿನಲ್ಲಿ ಸಲ್ಲಿಸಲಾಗಿರುವ ಇಂತಹುದ್ದೇ ಅರ್ಜಿಗಳ ಬಗ್ಗೆ ಯೋಚಿಸಬೇಕು ಎನ್ನುತ್ತಿದ್ದೇನೆ" ಎಂದು ಹೇಳಿದರು.
ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ತಮ್ಮ ಅಫಿದವಿತ್‌ನಲ್ಲಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರು, 2002ರ ಗುಜರಾತ್ ಗಲಭೆ ಸಂದರ್ಭ, "ಪ್ರತೀ ಬಾರಿ ಕೋಮು ಗಲಭೆಗಳಾಗುತ್ತಿರುವಾಗಲೂ ಒಂದು ಕೋಮಿನ ಪರ ವಹಿಸಿ ಸಾಕಾಗಿದೆ. ಈ ಬಾರಿ ಅವರು ಮತ್ತೆ ಈ ರೀತಿಯ ಗಲಭೆಗೆ ತೊಡಗದಂತೆ ಅವರಿಗೊಂದು ಪಾಠ ಕಲಿಸಬೇಕು, ಹಿಂದೂಗಳಿಗೆ ತಮ್ಮ ಆಕ್ರೋಶ ಹೊರಗೆಡಹಲು ಅವಕಾಶ ಮಾಡಿಕೊಡಬೇಕು" ಎಂಬರ್ಥದ ಆದೇಶಗಳನ್ನು ನೀಡಿದ್ದರು ಎಂದು ಆರೋಪಿಸಿದ್ದರು.
ವೈಯಕ್ತಿಕ ಹೇಳಿಕೆಗಳನ್ನು ನೀಡದಂತೆ, ಹಲವಾರು ವಿಷಯಗಳಲ್ಲಿ ಪಕ್ಷದ ನಿಲುವನ್ನು ಮಾತ್ರ ಪ್ರಕಟಿಸುವಂತೆ ಕಾಂಗ್ರೆಸ್ ಪಕ್ಷವು ನಾಯಕರೆಲ್ಲರಿಗೆ ನೋಟೀಸ್ ನೀಡಿರುವ ಕುರಿತು ಕೇಳಿದಾಗ, "ಆ ಬಗ್ಗೆಯೇನೂ ನಿರ್ಬಂಧ ಆದೇಶ ನೀಡಿಲ್ಲ" ಎಂದುತ್ತರಿಸಿದರು.
"ಯಾವುದೇ ವಿಷಯದಲ್ಲಿ ಪಕ್ಷದ ನಿಲುವನ್ನು ವಕ್ತಾರರ ಮೂಲಕ ಪ್ರಕಟಿಸುವುದೊಂದು ಸಂಪ್ರದಾಯ. ಆದರೆ ಹಿರಿಯ ನಾಯಕರು ವಿಷಯಗಳ ಬಗ್ಗೆ ಮಾತನಾಡಿ, ಸಂದೇಹಗಳನ್ನೆಲ್ಲಾ ಪರಿಹರಿಸುತ್ತಾರೆ" ಎಂದು ಮಾರ್ಮಿಕವಾಗಿ ನುಡಿದರು ತಿವಾರಿ.