ಪ್ರಧಾನಿ ಮನಮೋಹನ್ ಸಿಂಗ್ ಅವರು ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಅಶ್ಫಾಕ್ ಪರ್ವೇಜ್ ಕಯಾನಿ ಜತೆ ರಹಸ್ಯ ಮಾತುಕತೆಯೊಂದನ್ನು ಹತ್ತು ತಿಂಗಳ ಹಿಂದೆ ಆರಂಭಿಸಿದ್ದರು ಎಂಬ ವರದಿಯು ಬಯಲಾಗಿರುವುದು, ತೀವ್ರ ವಿವಾದಕ್ಕೆ ಗುರಿಯಾಗಿದೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ನಿಂತು ಹೋದ ಮಾತುಕತೆಯನ್ನು ಮುಂದುವರಿಸುವ ನಿಟ್ಟಿನಲ್ಲಿ ಅವರು, ಪಾಕಿಸ್ತಾನದ ವಿದೇಶಾಂಗ ನೀತಿಯ ಮೇಲೆ ಪೂರ್ಣ ಹಿಡಿತವಿರುವ ಜ.ಕಯಾನಿಯನ್ನು ಸಂಪರ್ಕಿಸಲು ಅನಧಿಕೃತ ಪ್ರತಿನಿಧಿಯೊಬ್ಬರನ್ನು ನೇಮಿಸಿದ್ದರು ಎಂದು ದಿ ಟೈಮ್ಸ್ ವರದಿ ಮಾಡಿದೆ.
ಕಳೆದ ತಿಂಗಳು ಮೊಹಾಲಿಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ವಿಶ್ವಕಪ್ ಕ್ರಿಕೆಟ್ ಸೆಮಿಫೈನಲ್ ಪಂದ್ಯ ವೀಕ್ಷಣೆಗೆ ಪಾಕ್ ಪ್ರಧಾನಿ ಯೂಸುಫ್ ರಾಜಾ ಗಿಲಾನಿಯನ್ನು ಸಿಂಗ್ ಆಹ್ವಾನಿಸಿರುವುದು, ಅವರು ಭಾರತಕ್ಕೆ ಆಗಮಿಸಿರುವುದು ಉಭಯ ರಾಷ್ಟ್ರಗಳ ನಡುವಿನ ರಾಜತಾಂತ್ರಿಕ ಮಾತುಕತೆ ಮುಂದುವರಿಯುವ ಕುರಿತು ಸೂಚನೆಗಳನ್ನು ನೀಡಿದ್ದವು.
ಈ ನಡುವೆ, ಕಯಾನಿ ಕೂಡ ಕಳೆದ ವಾರ ಅಫ್ಘಾನಿಸ್ತಾನಕ್ಕೆ ತೆರಳಿ, ಅಲ್ಲಿನ ಅಧ್ಯಕ್ಷ ಹಮೀದ್ ಕರ್ಜಾಯಿ ಅವರು ಉಗ್ರಗಾಮಿ ಪಡೆಗಳಾದ ತಾಲಿಬಾನ್ ಸಂಘಟನೆಗಳೊಂದಿಗೆ ಸಂಪರ್ಕಕ್ಕೆ ನೇಮಿಸಿದ್ದ ಉನ್ನತ ಮಟ್ಟದ ಶಾಂತಿ ಸಮಿತಿಯ ಸದಸ್ಯರನ್ನು ಭೇಟಿಯಾಗಿದ್ದರು. ಅವರೊಂದಿಗೆ ಜನರಲ್ ಪಾಕಿಸ್ತಾನದ ಕುಖ್ಯಾತ ಬೇಹುಗಾರಿಕಾ ಸಂಸ್ಥೆ ಐಎಸ್ಐ ಮುಖ್ಯಸ್ಥ ಅಹ್ಮದ್ ಶುಜಾ ಪಾಷಾ ಕೂಡ ಇದ್ದರು.