ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕಪ್ಪು ಹಣ ಇಟ್ಟ ಭಾರತೀಯರ ಪಟ್ಟಿ ನನ್ನಲ್ಲಿದೆ: ಅಸಾಂಜ್
ವಿದೇಶಗಳಲ್ಲಿ ಭಾರತೀಯರು ಇಟ್ಟಿರುವ ಕಪ್ಪು ಹಣವನ್ನು ವಾಪಸ್‌ ತರುವಂತೆ ಕೇಂದ್ರ ಸರಕಾರದ ಮೇಲೆ ನ್ಯಾಯಾಲಯ, ಪ್ರತಿಪಕ್ಷಗಳು ಮತ್ತು ಜನಸಾಮಾನ್ಯರ ಒತ್ತಡ ಹೆಚ್ಚಾಗಿರುವಂತೆಯೇ, ಸ್ವಿಸ್ ಬ್ಯಾಂಕಿನಲ್ಲಿ ಕಪ್ಪು ಹಣ ಇಟ್ಟಿರುವ ಭಾರತೀಯರ ಸಂಪೂರ್ಣ ವಿವರಗಳುಳ್ಳ ಪಟ್ಟಿ ತನ್ನ ಬಳಿ ಇದೆ ಎಂಬ ಸ್ಫೋಟಕ ಮಾಹಿತಿಯನ್ನು ವಿಕಿಲೀಕ್ಸ್‌ ಸಂಸ್ಥಾಪಕ ಜೂಲಿಯಸ್‌ ಅಸಾಂಜ್‌ ಹೊರಗೆಡಹಿದ್ದಾರೆ. ಇದಲ್ಲದೆ, ಬೇರೆಲ್ಲಾ ದೇಶಗಳಿಗಿಂತ ಭಾರತೀಯರ ಹಣವೇ ಸ್ವಿಸ್ ಬ್ಯಾಂಕಿನಲ್ಲಿ ಅತ್ಯಧಿಕ ಪ್ರಮಾಣದಲ್ಲಿದೆ ಎಂದೂ ಅವರು ಹೇಳಿದ್ದಾರೆ.

ಟೈಮ್ಸ್ ನೌ ಸಂದರ್ಶನದಲ್ಲಿ ಮಾತನಾಡಿದ ಅಸಾಂಜ್‌, ಭಾರತೀಯರು ವಿದೇಶಗಳಲ್ಲಿ ಬಿಲಿಯನ್‌ಗಟ್ಟಲೆ ಕಪ್ಪು ಹಣ ಇಟ್ಟಿದ್ದು, ಇದು ಭಾರತದ ಆರ್ಥಿಕ ಪರಿಸ್ಥಿತಿಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂಬ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದೂ ಒತ್ತಾಯಿಸಿದ್ದಾರೆ.

ವಿದೇಶಿ ಬ್ಯಾಂಕ್‌ಗಳಲ್ಲಿ ಭಾರತೀಯರು ಅಕ್ರಮ ಹಣವನ್ನು ರಾಶಿ ಹಾಕುತ್ತಿರುವುದರಿಂದ ರೂಪಾಯಿಯ ಮೌಲ್ಯ ಕಡಿಮೆಯಾಗುತ್ತಿದೆ. ಹೀಗಾಗಿ ಕಪ್ಪು ಹಣ ಹೊರ ತರಲು ಭಾರತ ಸರಕಾರ ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಸಾಂಜ್‌ ಹೇಳಿದರು.

ಭಾರತ ಪ್ರತಿಕ್ರಿಯೆ ಅತ್ಯಂತ ಕೆಳ ಮಟ್ಟದ್ದು...
ಇದೇ ವೇಳೆ, ಭಾರತೀಯರ ಭ್ರಷ್ಟಾಚಾರಗಳನ್ನು, ಅಕ್ರಮಗಳನ್ನು ಹೊರಗೆಡಹುತ್ತಿರುವ ವಿಕಿಲೀಕ್ಸ್‌ ಬಗ್ಗೆ ಭಾರತ ಸರಕಾರ ವ್ಯಕ್ತಪಡಿಸಿರುವ ಅಭಿಪ್ರಾಯ ಬೇಸರ ಮೂಡಿಸಿದೆ ಎಂದು ಅಸಾಂಜ್‌ ತಿಳಿಸಿದ್ದಾರೆ.

ಜನರ ದಿಕ್ಕು ತಪ್ಪಿಸುತ್ತಿದೆ ಸರಕಾರ...
ವಿಕಿಲೀಕ್ಸ್‌ ಬಗ್ಗೆ ಭಾರತ ಸರಕಾರದ ಪ್ರತಿಕ್ರಿಯೆಯು ಇಡೀ ವಿಶ್ವದಲ್ಲೇ ಇದುವರೆಗೆ ದೊರೆತ ಅತ್ಯಂತ ಕೆಟ್ಟ ಹೇಳಿಕೆಯಾಗಿದೆ. ಭಾರತ ಸರಕಾರ ಕಪ್ಪು ಹಣದ ವಿಷಯದಲ್ಲಿ ದೇಶದ ಜನರ ದಿಕ್ಕುತಪ್ಪಿಸುತ್ತಿದೆ ಎಂದು ಆಪಾದಿಸಿದರು. ಪ್ರಧಾನಿ ಮನಮೋಹನ್ ಸಿಂಗ್‌ ಅವರು ಭ್ರಷ್ಟರಲ್ಲ, ಆದರೆ ವಿದೇಶದಲ್ಲಿನ ಭಾರತೀಯರ ಕಪ್ಪು ಹಣ ಹೊರತರುವಲ್ಲಿ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ನಿರಾಶಾದಾಯಕ ಸಂಗತಿ ಎಂದು ತಿಳಿಸಿದ್ದಾರೆ.

ಅವಳಿ ತೆರಿಗೆಯಿಂದ ವಿದೇಶಗಳಲ್ಲಿ ಭಾರತೀಯರ ಕಪ್ಪು ಹಣ ಇಡುವುದನ್ನು ತಪ್ಪಿಸಲು ಸಾಧ್ಯವಿಲ್ಲ. ಇದು ಆರ್ಥಿಕ ಪರಿಸ್ಥಿತಿಯ ಮೇಲೆ ಮತ್ತಷ್ಟು ಪರಿಣಾಮ ಬೀರಲಿದೆ ಎಂದು ಅಸಾಂಜ್‌ ಅಭಿಪ್ರಾಯಪಟ್ಟರು.

ತಾವು ಕಪ್ಪು ಹಣದ ಬಗ್ಗೆ ವಿಕಿಲೀಕ್ಸ್‌ ಬಯಲು ಮಾಡಿದ್ದರಿಂದ ಕಂಗಾಲಾಗಿರುವ ಸ್ವಿಸ್‌ ಬ್ಯಾಂಕ್‌ನಲ್ಲಿ ಹಣ ಇಟ್ಟಿರುವ ಪ್ರಭಾವಿ ವ್ಯಕ್ತಿಗಳು, ಆ ಮಾಹಿತಿಯನ್ನು ತಮಗೊಪ್ಪಿಸುವಂತೆ ಹೆಚ್ಚು ಹಣ ನೀಡುವ ಆಮಿಷವೊಡ್ಡಿದ್ದಾರೆ ಮತ್ತು ಕೆಲವರು ಜೀವ ಬೆದರಿಕೆಯನ್ನೂ ಒಡ್ಡಿದ್ದಾರೆ ಎಂದು ಅವರು ಆಪಾದಿಸಿದರು.

ಈಗಲಾದರೂ ಬಹಿರಂಗಪಡಿಸಿ: ಬಿಜೆಪಿ
ಈ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ವಕ್ತಾರ ನಿರ್ಮಲಾ ಸೀತಾರಾಮನ್‌, ವಿದೇಶಿ ಬ್ಯಾಂಕ್‌ಗಳಲ್ಲಿ ಭಾರತೀಯರು ಅಕ್ರಮವಾಗಿ ಇಟ್ಟಿರುವ ಬಿಲಿಯನ್‌ಗಟ್ಟಲೆ ಹಣವನ್ನು ವಾಪಸ್‌ ತರಲು ಕ್ರಮ ಕೈಗೊಳ್ಳಬೇಕು, ಹಾಗೂ ಹಣ ಇಟ್ಟವರ ಹೆಸರು ಬಹಿರಂಗ ಪಡಿಸಿ ತಕ್ಕ ಶಿಕ್ಷೆ ನೀಡಬೇಕು ಎಂದು ಯುಪಿಎ ನೇತೃತ್ವದ ಕೇಂದ್ರ ಸರಕಾರಕ್ಕೆ ಒತ್ತಾಯಿಸಿದ್ದಾರೆ.

ವಿದೇಶದಲ್ಲಿ ಭಾರತೀಯರು ಇಟ್ಟಿರುವ ಕಪ್ಪು ಹಣವನ್ನು ವಾಪಸ್‌ ತರಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಹಿರಿಯ ವಕೀಲ ರಾಂ ಜೇಠ್ಮಲಾನಿ ಸುಪ್ರೀಂ ಕೋರ್ಟ್‌‌ನಲ್ಲಿ ಅರ್ಜಿ ಸಲ್ಲಿಸಿದ್ದು, ಈಗಾಗಲೇ ಸುಪ್ರೀಂ ಕೋರ್ಟು ಯುಪಿಎ ಸರಕಾರ ಹಾಗೂ ತನಿಖಾ ಏಜೆನ್ಸಿಗಳ ವಿರುದ್ಧ ಹಲವು ಬಾರಿ ಕೆಂಡ ಕಾರಿತ್ತು. ತನಿಖಾ ಏಜೆನ್ಸಿಗಳು ನಿದ್ರೆ ಮಾಡುತ್ತಿವೆಯೇ ಎಂದೂ ಕೂಡ ಸುಪ್ರೀಂ ಕೋರ್ಟು ಇತ್ತೀಚೆಗಷ್ಟೇ ಪ್ರಶ್ನಿಸಿತ್ತು.
ಇವನ್ನೂ ಓದಿ