ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪಿಎಸಿ ವರದಿ ಬಹಿರಂಗ ಹೇಗಾಯ್ತು?: ಯುಪಿಎ ತನಿಖೆ
(PAC Draft | Ambika Soni | 2G spectrum | PMO | Murali Monahar Joshi)
ಪಿಎಸಿ ವರದಿ ಬಹಿರಂಗ ಹೇಗಾಯ್ತು?: ಯುಪಿಎ ತನಿಖೆ
ನವದೆಹಲಿ, ಗುರುವಾರ, 28 ಏಪ್ರಿಲ್ 2011( 15:55 IST )
2ಜಿ ಹಗರಣಕ್ಕೆ ಸಂಬಂಧಿಸಿದ ಸಾರ್ವಜನಿಕ ಲೆಕ್ಕಪತ್ರ ಸಮಿತಿ ವರದಿ (ಪಿಎಸಿ) ಮಂಡನೆಯಾಗುವ ಮೊದಲೇ ಹೇಗೆ ಬಹಿರಂಗವಾಯಿತು ಎಂಬುದರ ಕುರಿತು ಸರಕಾರ ತನಿಖೆ ನಡೆಸಲಿದೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಚಾರ ಖಾತೆ ಸಚಿವೆ ಅಂಬಿಕಾ ಸೋನಿ ಹೇಳಿದ್ದಾರೆ.
'ವರದಿ ಮಂಡನೆಯಾಗುವ ಮೊದಲೇ ಮಾಧ್ಯಮಗಳಿಗೆ ಹೇಗೆ ತಲುಪಿದೆ ಎಂಬುದರ ಕುರಿತು ನಾವು ಪರಿಶೀಲಿಸುತ್ತೇವೆ'ಎಂದು ಸೋನಿ ತಿಳಿಸಿದ್ದಾರೆ.
ಪ್ರಧಾನ ಮಂತ್ರಿ ಕಚೇರಿ ಹಾಗೂ ಕೇಂದ್ರ ಸಚಿವಾಲಯ 2ಜಿ ಪ್ರಕರಣದಲ್ಲಿ ಭಾಗಿಯಾಗಿದೆ ಎಂದು ಬಿಜೆಪಿ ಮುಖಂಡ ಮುರಳೀ ಮನೋಹರ ಜೋಷಿ ಅಧ್ಯಕ್ಷತೆಯ ಪಿಎಸಿ ವರದಿಯಲ್ಲಿ ಗಂಭೀರ ಆರೋಪ ಮಾಡಿದ್ದರಿಂದ ಯುಪಿಎ ಮೈತ್ರಿಕೂಟದ ಇತರೆ ಪಕ್ಷಗಳ ನಡುವೆ ವಾಗ್ಯುದ್ದ ನಡೆದಿತ್ತು.
'ಪಿಎಸಿ ವರದಿ ಮಾಧ್ಯಮಗಳಿಗೆ ಹೇಗೆ ಬಹಿರಂಗವಾಯಿತು ಎಂಬುದರ ಕುರಿತು ನನ್ನಲ್ಲಿ ಉತ್ತರವಿಲ್ಲ, ಈ ವರದಿಯಲ್ಲಿ ಏನಿತ್ತು ಎಂಬುದರ ಬಗ್ಗೆ ನನಗೆ ತಿಳಿದಿಲ್ಲ. ಪಿಎಸಿ ಸದಸ್ಯರು ವರದಿಯ ಬಗ್ಗೆ ಒಪ್ಪಿಗೆ ಸೂಚಿಸುವವರೆಗೂ ಕೇಂದ್ರ ಸಚಿವೆಯಾಗಿರುವ ನಾನು ಈ ಬಗ್ಗೆ ಉತ್ತರಿಸುವುದು ಸರಿಯಲ್ಲ' ಎಂದರು.
ವರದಿಯ ಕುರಿತು ಸರಕಾರ ಹಾಗೂ ಪ್ರತಿಪಕ್ಷಗಳ ನಡುವೆ ಭಿನ್ನಾಭಿಪ್ರಾಯವಿರುವ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸೋನಿ, ಪಿಎಸಿ ಸಂಸದೀಯ ಸಮಿತಿಯಾಗಿದ್ದು, ಆ ಸಮಿತಿಯ ಸದಸ್ಯರು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದ್ದಾರೆ ಎಂದು ಹೇಳಿದರು.
ಈ ಕುರಿತು ಯಾವುದೇ ಭಿನ್ನಾಭಿಪ್ರಾಯಗಳಿದ್ದರೆ ಪ್ರಜಾಪ್ರಭುತ್ವದ ತತ್ವಗಳ ಆಧಾರದ ಮೇಲೆ ಚರ್ಚಿಸಲಾಗುತ್ತದೆ.ಈ ಮೊದಲೂ ಸಮಿತಿಯ ಸದಸ್ಯರ ನಡುವೆ ಭಿನ್ನಾಭಿಪ್ರಾಯವಿತ್ತು ಎಂದರು.
ಮಂಡನೆಗೆ ಮುನ್ನವೇ ಪಿಎಸಿ ವರದಿ ಬಹಿರಂಗವಾದ ಹಿನ್ನೆಲೆಯಲ್ಲಿ, ಸರಕಾರದ ವಿರುದ್ಧ ಸಂಚು ನಡೆಸಿದ್ದಾರೆಂದು ಆರೋಪಿಸಿ ಕಾಂಗ್ರೆಸ್ ಹಾಗೂ ಡಿಎಂಕೆ, ಜೋಷಿ ಅವರ ರಾಜೀನಾಮೆಗೆ ಒತ್ತಾಯಿಸಿದ್ದವು.