ದೇಶದಲ್ಲೇ ಕೋಲಾಹಲವೆಬ್ಬಿಸಿದ ಬಹುಕೋಟಿ ರೂಪಾಯಿಗಳ 2ಜಿ ತರಂಗಗುಚ್ಛ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಟೆಲಿಕಾಂ ಮಾಜಿ ಸಚಿವ ಎ.ರಾಜಾ ಅವರನ್ನು ದೋಷಿ ಎಂದು ಉಲ್ಲೇಖಿಸಿದ ಸಾರ್ವಜನಿಕ ಲೆಕ್ಕಪತ್ರ ಸಮಿತಿ (ಪಿಎಸಿ) ವರದಿಯನ್ನು ಸ್ವತಃ ಸಮಿತಿ ಸದಸ್ಯರೇ ತಿರಸ್ಕರಿಸುವಂತೆ ಮಾಡುವಲ್ಲಿ ಪ್ರತಿಪಕ್ಷಗಳಾದ ಎಸ್ಪಿ ಮತ್ತು ಬಿಎಸ್ಪಿ ಬೆಂಬಲ ದೊರಕಿಸಿಕೊಳ್ಳುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದ್ದು, ಗುರುವಾರ ಸಂಸದೀಯ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಮತ್ತೊಂದು ಹೊಸ ಅಧ್ಯಾಯ ಬರೆದಂತಾಯಿತು.
ಬಿಜೆಪಿ ಮುಖಂಡ ಮುರಳಿ ಮನೋಹರ ಜೋಷಿ ಅಧ್ಯಕ್ಷತೆಯ ಪಿಎಸಿ ವರದಿಯ ಕರಡು ಅಂಗೀಕಾರಕ್ಕಾಗಿ ಸಮಿತಿಯು ಗುರುವಾರ ಸಭೆ ಸೇರಿತ್ತು. ಮಾಜಿ ಟೆಲಿಕಾಂ ಸಚಿವ, ಡಿಎಂಕೆಯ ಎ.ರಾಜಾ ದೋಷಿ ಎಂದು ಸಾರಿದ ಮತ್ತು ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಗೃಹ ಸಚಿವ ಪಿ.ಚಿದಂಬರಂ ಅವರ ಮೇಲೆ ತೀಕ್ಷ್ಣ ಆರೋಪಗಳಿರುವ ವರದಿಯನ್ನು ಒಪ್ಪಿಕೊಳ್ಳಲು ಲೆಕ್ಕಪತ್ರ ಸಮಿತಿಯಲ್ಲಿರುವ ಯುಪಿಎ ಸದಸ್ಯರು ತಯಾರಿರಲಿಲ್ಲ.
21 ಮಂದಿ ಸದಸ್ಯರ ಈ ಸಮಿತಿಯು ಕರಡು ವರದಿ ಸಿದ್ಧಪಡಿಸಲೆಂದು ಗುರುವಾರ ಸಭೆ ಸೇರಿತ್ತು. ಇದರಲ್ಲಿ 9 ಮಂದಿ ಯುಪಿಎಯ 9 ಸದಸ್ಯರು (7 ಕಾಂಗ್ರೆಸ್, ಇಬ್ಬರು ಡಿಎಂಕೆ) ಪ್ರತಿಪಕ್ಷಗಳ ಕಡೆಯಿಂದ 12 ಸದಸ್ಯರು (ಎಸ್ಪಿಯಿಂದ ಒಬ್ಬರು, ಬಿಎಸ್ಪಿಯಿಂದ ಒಬ್ಬರು, ಬಿಜೆಪಿಯಿಂದ 7 ಮಂದಿ, ಎಐಎಡಿಎಂಕೆ ಮತ್ತು ಬಿಜೆಡಿಯ ತಲಾ ಒಬೊಬ್ಬ ಸಂಸದರು) ಇದ್ದರು.
ಸಭೆಯಲ್ಲಿ ಭಾರೀ ಚರ್ಚೆ ನಡೆದು ಮತದಾನ ನಡೆದಾಗ, ಕಾಂಗ್ರೆಸ್‌ನ 9 ಸದಸ್ಯರಿಗೆ ಪ್ರತಿಪಕ್ಷಗಳ ಗುಂಪಿನಲ್ಲಿದ್ದ ಸಮಾಜವಾದಿ ಪಕ್ಷ (ಎಸ್ಪಿ) ಮತ್ತು ಬಹುಜನ ಸಮಾಜ ಪಕ್ಷ (ಬಿಎಸ್ಪಿ) ಸದಸ್ಯರ ಬೆಂಬಲ ದೊರೆತಿದ್ದರಿಂದ, ಈ ವರದಿಯು ತಿರಸ್ಕೃತವಾಯಿತು. ಕರಡು ವರದಿಗೆ 11-10 ಅಂತರದ ಅಂದರೆ 1 ಮತದ ಸೋಲುಂಟಾಯಿತು.
ಈ ನಡುವೆ, ಕರಡು ವರದಿ ಅಂಗೀಕಾರಗೊಳ್ಳುವ ಮೊದಲೇ ಅದು ಮಾಧ್ಯಮಗಳಿಗೆ ಬಹಿರಂಗಗೊಂಡಿದ್ದು ಹೇಗೆ ಎಂದು ಕಾಂಗ್ರೆಸ್, ಡಿಎಂಕೆ, ಎಸ್ಪಿ ಮತ್ತು ಬಿಎಸ್ಪಿ ಸದಸ್ಯರು ಗದ್ದಲವೆಬ್ಬಿಸಿದ್ದರು. ಅಂತಿಮವಾಗಿ ವರದಿಗೆ 1 ಮತದ ಸೋಲುಂಟಾದಾಗ ರೋಸಿ ಹೋದ ಜೋಷಿ ಅವರು ಸಭೆಯಿಂದಲೇ ಹೊರ ನಡೆದರು. ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ವರದಿಯೊಂದು ಸದಸ್ಯರಿಂದಲೇ ತಿರಸ್ಕೃತವಾಗಿರುವುದು ಸಂಸದೀಯ ಪ್ರಜಾಸತ್ತೆಯ ಇತಿಹಾಸದಲ್ಲೇ ಪ್ರಥಮ ಪ್ರಕರಣವಾಗಿದೆ.
ಈ ಕರಡು ವರದಿಯನ್ನು ತಿರಸ್ಕರಿಸುವಂತೆ ಪತ್ರವನ್ನು ಸಮಿತಿ ಅಧ್ಯಕ್ಷ ಜೋಷಿಗೆ ನೀಡಿರುವುದಾಗಿ ಈ 11 ಮಂದಿ ಸದಸ್ಯರು ತಿಳಿಸಿದ್ದಾರೆ. ಜೋಷಿ ಅಧಿಕಾರಾವಧಿ ಇದೇ 30ಕ್ಕೆ ಕೊನೆಗೊಳ್ಳಲಿದೆ. ಪಿಎಸಿಗೆ ಹೊಸ ಅಧ್ಯಕ್ಷರಾಗಿ ಕಾಂಗ್ರೆಸ್‌ನ ಸೈಫುದ್ದೀನ್ ಸೋಜ್ ಅವರನ್ನು ಬೆಂಬಲಿಸುವುದಾಗಿ ಈ 11 ಮಂದಿ ಸದಸ್ಯರು ಲಿಖಿತ ಹೇಳಿಕೆ ನೀಡಿದ್ದಾರೆ.
ವಾಜಪೇಯಿ ವಿರುದ್ಧ ಮತ ಚಲಾಯಿಸಿದ್ದ ಸೋಜ್ 'ಅಧ್ಯಕ್ಷ' ಜೋಷಿ ಅವರು ಹೊರ ನಡೆದ ಬಳಿಕ 'ಸಭೆ' ನಡೆಸಿದ ಆಡಳಿತಾರೂಢ ಮೈತ್ರಿಕೂಟದ 9 ಮಂದಿ ಮತ್ತು ಇಬ್ಬರು ಪ್ರತಿಪಕ್ಷದ (ಎಸ್ಪಿ, ಬಿಎಸ್ಪಿ) ಸದಸ್ಯರು, ಕಾಂಗ್ರೆಸ್‌ನ ಸೈಫುದ್ದೀನ್ ಸೋಜ್ ಅವರನ್ನು ಹೊಸ ಅಧ್ಯಕ್ಷರಾಗಿ 'ಚುನಾಯಿಸಿ'ದರು. ಈ ಚುನಾವಣೆಯಲ್ಲಿ ಪ್ರತಿಪಕ್ಷದ 10 ಮಂದಿ ಸದಸ್ಯರು ಭಾಗವಹಿಸಿರಲಿಲ್ಲ. 11 ಮಂದಿ ಸದಸ್ಯರು ಜೋಷಿ ನೇತೃತ್ವ ಸಮಿತಿಯನ್ನು ಧಿಕ್ಕರಿಸಿದ್ದಾರೆ ಎಂದು ಘೋಷಿಸಿದ ಸೋಜ್, ತಾನು ಈ ಸಮಿತಿಯ ಕಲಾಪದ ಪೂರ್ಣ ವರದಿಯನ್ನು ಲೋಕಸಭಾ ಸ್ಪೀಕರ್‌ಗೆ ಸಲ್ಲಿಸುತ್ತೇನೆ ಎಂದರು.
ಪರಿಸ್ಥಿತಿಗಳು ಬಂದಾಗ ಇಂತಹಾ 'ಚುನಾವಣೆ'ಗಳು ನಡೆಯಬೇಕಾಗುತ್ತದೆ ಎಂದು ಸೋಜ್ ಅವರು ತಮ್ಮ ಆಯ್ಕೆಯ ಬಳಿಕ ಹೇಳಿದರು. ಇದೇ ಸೋಜ್, 1999ರಲ್ಲಿ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ವಿಶ್ವಾಸ ಮತ ಯಾಚಿಸಿದ ಸಂದರ್ಭ ಸರಕಾರದ ವಿರುದ್ಧ ಮತ ಚಲಾಯಿಸಿ, ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್‌ನಿಂದ ಉಚ್ಚಾಟನೆಗೊಂಡಿದ್ದರು.
ವಾಸ್ತವವಾಗಿ, ಸೋಜ್ ಅವರು ರಾಜ್ಯಸಭಾ ಸದಸ್ಯರಾಗಿದ್ದು, ಪಿಎಸಿಯ ಅಧ್ಯಕ್ಷರಾಗುವಂತಿಲ್ಲ. ಮತ್ತು ಸಂಪ್ರದಾಯಗಳ ಪ್ರಕಾರ ಪ್ರತಿಪಕ್ಷಗಳ ಸದಸ್ಯರೇ ಪಿಎಸಿಯ ಅಧ್ಯಕ್ಷರಾಗಿರುತ್ತಾರೆ.