ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಎಂಡೋಸಲ್ಫಾನ್ ವಿಷ ನಿಷೇಧಕ್ಕೆ 11 ವರ್ಷ ಕೇಳಿದ ಭಾರತ! (Endosulphon Ban | Geneva Convention | India | Stolkhom | Endosulphon Global Ban)
WD

ಹಲವಾರು ವರ್ಷಗಳಿಂದ ನೂರಾರು ಜನ ನರಳಿ ನರಳಿ ಸಾಯುತ್ತಿದ್ದರೂ ಎಂಡೋಸಲ್ಫಾನ್ ಎಂಬ ಮಾರಣಾಂತಿಕ ಕೀಟನಾಶಕಕ್ಕೆ ನಿಷೇಧ ಹೇರಲು ಹಿಂದೆ ಮುಂದೆ ನೋಡುತ್ತಿದ್ದ ಭಾರತ ಸರಕಾರವು, ಜಿನೇವಾದಲ್ಲಿ ನಡೆದ ಜಾಗತಿಕ ಸಮಾವೇಶದಲ್ಲಿ ಕೊನೆಗೂ ಒಂದಿಷ್ಟು ಕರುಣೆ ತೋರಿದಂತೆ ಸ್ಪಂದಿಸಿದೆ. ಎಂಡೋಸಲ್ಫಾನ್ ನಿಷೇಧಿಸಬೇಕೆಂಬ ಅನ್ಯ ರಾಷ್ಟ್ರಗಳ ಒತ್ತಡಕ್ಕೆ ಒಂದಿಷ್ಟು ಮಣಿದಿದೆಯಾದರೂ, ಇದನ್ನು ಹಂತ ಹಂತವಾಗಿ ನಿಷೇಧಿಸಲು 11 ವರ್ಷಗಳ ಗಡುವನ್ನೂ ಕೇಳಿ ಪಡೆದುಕೊಂಡಿದೆ.

ನಾವು ಜಾಗತಿಕ ಶಕ್ತಿಗಳ ಒಮ್ಮತಾಭಿಪ್ರಾಯಕ್ಕೆ ಬೆಂಬಲಿಸುತ್ತೇವೆ. ಆದರೆ, ಇದೇ ಅವಧಿಯಲ್ಲಿ ಸುರಕ್ಷಿತ ಪರ್ಯಾಯ ವಿಧಾನವನ್ನು ಕಂಡುಹುಡುಕುವ ನಿಟ್ಟಿನಲ್ಲಿ ನಮಗೆ ಕಾಲಾವಕಾಶ ಬೇಕಾಗಿದೆ. ಎಂದು ಭಾರತ ಸರಕಾರದ ನಿಯೋಗದ ಮುಖ್ಯಸ್ಥ, ಪರಿಸರ ಮತ್ತು ಅರಣ್ಯ ಸಚಿವಾಲಯ ಹೆಚ್ಚುವರಿ ಕಾರ್ಯದರ್ಶಿ ಗೌರಿ ಕುಮಾರ್ ಸಮಾವೇಶದಲ್ಲಿ ಹೇಳಿದ್ದಾರೆ.

ಕರ್ನಾಟಕದ ಇಂಧನ ಸಚಿವೆ ಶೋಭಾ ಕರಂದ್ಲಾಜೆ ಕೂಡ ಕೇಂದ್ರ ಸರಕಾರದ ಮೇಲೆ ಈ ಕುರಿತು ಒತ್ತಡ ಹೇರಲು ಸಂಸತ್ ಎದುರು ಪ್ರತಿಭಟನಾ ಧರಣಿ ಮಾಡುವುದಾಗಿ ಹೇಳಿಕೊಂಡಿದ್ದರು.

ಕೇರಳದಲ್ಲಿ ಸಂತೋಷದ ನಡುವೆ ದುಃಖದ ಕರಿಛಾಯೆ
ಕೊನೆಗೂ ಭಾರತವು ಎಂಡೋಸಲ್ಫಾನ್ ನಿಷೇಧಕ್ಕೆ ಒಪ್ಪಿತಲ್ಲಾ ಎಂಬ ಕಾರಣಕ್ಕೆ ಕೇರಳ ರಾಜ್ಯಕ್ಕೆ ಸೇರಿರುವ ಕಾಸರಗೋಡು ಭಾಗದ ಜನರು ಹಿರಿಹಿರಿ ಹಿಗ್ಗಿದ್ದರೆ, ದೇಶಾದ್ಯಂತ ಇದನ್ನು ನಿಷೇಧಿಸಬೇಕೆಂದು ಒತ್ತಾಯಿಸಿ ಶುಕ್ರವಾರ ಕೇರಳದಲ್ಲಿ ತಾನು ನಡೆಸಿದ ಹರತಾಳಕ್ಕೆ ದೊರೆತ ಜಯ ಇದು ಎಂದು ಸಿಪಿಎಂ ಎದೆಯುಬ್ಬಿಸಿಕೊಂಡಿದೆ.

ಈಗ ಜಿನಿವಾದ ಸ್ಟಾಕ್‌ಹೋಂನಲ್ಲಿ ಶುಕ್ರವಾರ ಮುಕ್ತಾಯಗೊಂಡ ಐದು ದಿನಗಳ ಸಮಾವೇಶದಲ್ಲಿ ಈ ಮಾರಣಾಂತಿಕ ವಿಷವನ್ನು ನಿಷೇಧಕ್ಕೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು ಗಡುವು ಕೇಳಿರುವುದು, ಇದರ ವಿರುದ್ಧ ಹೋರಾಡುತ್ತಿರುವವರ ಕಣ್ಣು ಕೆಂಪಗಾಗಿಸಿದೆ.

ಕಾಸರಗೋಡು ಭಾಗದಲ್ಲಿ ವಂಶವಾಹಿಗಳಲ್ಲೇ ಸೇರಿಹೋಗಿರುವ ಈ ಎಂಡೋಸಲ್ಫಾನ್ ಎಂಬ ಮಾರಣಾಂತಿಕ ವಿಷವು, ಅಂಗ ಊನತೆಗೆ, ಅನಾರೋಗ್ಯದ ಸರಪಣಿಗೆ ಕಾರಣವಾಗಿದ್ದು, ಕಾಸರಗೋಡಿನ ಎಣ್ಮಕಜೆ ಮುಂತಾದ ಪ್ರದೇಶಗಳಲ್ಲಿ ಗೇರು ಬೀಜಕ್ಕೆ ಸರಕಾರವು ಬಲವಂತವಾಗಿ ಸಿಂಪಡಿಸಿದ್ದ ವಿಷಯುಕ್ತ ಕೀಟನಾಶಕವು ತಂದೊಡ್ಡಿದ್ದ ನರಕವನ್ನು ಕಣ್ಣಾರೆ ಕಾಣಬಹುದಾಗಿದೆ.

ಕೇಂದ್ರದ ಹಿತಾಸಕ್ತಿ ಏನು...
ಭಾರತವು ಸದ್ಯ ಜಗತ್ತಿನಲ್ಲೇ ಅತೀ ದೊಡ್ಡ ಎಂಡೋಸಲ್ಫಾನ್ ರಫ್ತು ರಾಷ್ಟ್ರವಾಗಿದೆ. ಇದರಲ್ಲಿ ಬಹುರಾಷ್ಟ್ರೀಯ ಕಂಪನಿಗಳ ಹಿತಾಸಕ್ತಿಯೂ ಇದ್ದು, ಕೇಂದ್ರ ಕೃಷಿ ಸಚಿವ ಶರದ್ ಪವಾರ್ ಅವರು ಈ ಮಾರಣಾಂತಿಕ ವಿಷದ ನಿಷೇಧಕ್ಕೆ ಹಿಂದೆ ಮುಂದೆ ನೋಡುತ್ತಿರುವುದಕ್ಕೆ ಈಗಾಗಲೇ ಹಲವು ರಾಜ್ಯಗಳಿಂದ ಆಕ್ಷೇಪ ಕೇಳಿಬರುತ್ತಿದೆ.

ಆದರೂ, 11 ವರ್ಷದ ಅವಧಿ ಕೇಳಿರುವುದು ಎಂಡೋಸಲ್ಫಾನ್ ವಿರೋಧಿ ಹೋರಾಟಗಾರರಿಗೆ ತೀವ್ರ ಆತಂಕಕ್ಕೆ ಕಾರಣವಾಗಿರುವ ಸಂಗತಿ. ಇದು ರೈತರಿಗೆ ದೊರೆಯುವ ಅತ್ಯಂತ ಕಡಿಮೆ ಬೆಲೆಯ ಕೀಟನಾಶಕ ಎಂಬುದು ಭಾರತ ಸರಕಾರದ ವಾದ.

84 ದೇಶಗಳು ನಿಷೇಧಿಸಿವೆ...
84 ದೇಶಗಳು ಎಂಡೋಸಲ್ಫಾನ್ ಅನ್ನು ನಿಷೇಧಿಸಿದೆಯಾದರೂ, ಭಾರತವು ಸುದೀರ್ಘ ಕಾಲದಿಂದ ಈ ನಿಷೇಧವನ್ನು ವಿರೋಧಿಸುತ್ತಲೇ ಬಂದಿತ್ತು. ಮಾನವನ ಮೇಲೆ ಇದು ದುಷ್ಪರಿಣಾಮ ಬೀರುತ್ತದೆ ಎಂಬುದಕ್ಕೆ ಯಾವುದೇ ಸಾಕ್ಷ್ಯಾಧಾರ ಇಲ್ಲವಂತೆ! ಈ ಕಾರಣಕ್ಕೆ ನಿಷೇಧ ಇಲ್ಲ ಎಂಬುದು ನಮ್ಮದೇ ಸರಕಾರದ ವಾದವಾಗಿತ್ತು!

ಆದರೀಗ ಸ್ಟಾಕ್‌ಹೋಂ ಸಮಾವೇಶದಲ್ಲಿ ಭಾರತವು ಏಕಾಂಗಿಯಾಗಿ ಉಳಿದಿತ್ತು. ಎಂಡೋಸಲ್ಫಾನ್ ಬಳಸುತ್ತಿರುವ ಚೀನಾ ಕೂಡ ಷರತ್ತುಬದ್ಧ ಬೆಂಬಲ ನೀಡಿದಾಗ, ಭಾರತಕ್ಕೂ ವಿಧಿಯಿಲ್ಲದೇ ಹೋಯಿತು. ಮಾತ್ರವಲ್ಲ, ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಒಕ್ಕೂಟ ಕೂಡ ಇದು ವಿಷಯುಕ್ತ ಮತ್ತು ಆರೋಗ್ಯಕ್ಕೆ ಹಾನಿಕರ ಎಂಬ ವರದಿ ನೀಡಿದ್ದರಿಂದಾಗಿ, ಕಾಂಗ್ರೆಸ್ ನೇತೃತ್ವದ ಭಾರತ ಸರಕಾರವು ಮಣಿಯಲೇಬೇಕಾಯಿತು. ಆದರೂ 11 ವರ್ಷ ಕಾಲಾವಕಾಶ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯೂ ಆಯಿತು.

ಕೇಂದ್ರದ ನಿಲುವು ದೇಶಕ್ಕೇ ಅವಮಾನ
ಜಿನಿವಾದಲ್ಲಿ ನಡೆದ ಜಾಗತಿಕ ಅಂತಾರಾಷ್ಟ್ರೀಯ ಸಮ್ಮೇಳನವು ನಿರ್ಣಯ ಕೈಗೊಂಡಿದ್ದರೂ, ಭಾರತದಲ್ಲಿ ಇದರ ನಿಷೇಧ ಜಾರಿಗೆ ಕಷ್ಟ ಎಂಬ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು ಹೇಳಿರುವುದು ಅಕ್ಷಮ್ಯ ಅಪರಾಧ ಎಂದಿರುವ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಈ ನಿಲುವು ದೇಶಕ್ಕೇ ಅವಮಾನ ಎಂದು ಪ್ರತಿಕ್ರಿಯಿಸಿದ್ದಾರೆ.
ಇವನ್ನೂ ಓದಿ