ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಹೆಚ್ಚಿದ ಆತಂಕ: ಅರುಣಾಚಲ ಸಿಎಂ ಪತ್ತೆಗಾಗಿ ತೀವ್ರ ಶೋಧ (Arunachal CM | Dorjee Khandu | missing chopper | Bhutanese troops | search operations)
ಹೆಚ್ಚಿದ ಆತಂಕ: ಅರುಣಾಚಲ ಸಿಎಂ ಪತ್ತೆಗಾಗಿ ತೀವ್ರ ಶೋಧ
ಇಟಾನಗರ, ಭಾನುವಾರ, 1 ಮೇ 2011( 10:42 IST )
PTI
ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ದೋರ್ಜಿ ಖಂಡು ಅವರು ಪ್ರಯಾಣಿಸುತ್ತಿದ್ದ ಪವನ್ ಹಂಸ ಎಎಸ್350 ಬಿ 3 ಹೆಲಿಕಾಪ್ಟರ್ ಶನಿವಾರ ದಿಢೀರ್ ಸಂಪರ್ಕ ಕಡಿದುಕೊಂಡು ನಾಪತ್ತೆಯಾಗಿದ್ದು, ಸಿಎಂ ಹೆಲಿಕಾಪ್ಟರ್ ಶೋಧ ಕಾರ್ಯ ಭಾನುವಾರವೂ ಮುಂದುವರಿದಿದೆ. ಇದೀಗ ಸಿಎಂ ಹೆಲಿಕಾಪ್ಟರ್ ನಾಪತ್ತೆ ಪ್ರಕರಣ ಸಾಕಷ್ಟು ಆತಂಕಕ್ಕೆ ಎಡೆಮಾಡಿಕೊಟ್ಟಿದೆ.
ದೋರ್ಜಿ ಖಂಡು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಪತ್ತೆಗಾಗಿ 30 ಸೇನಾ ತುಕಡಿಗಳು ತೀವ್ರ ಶೋಧ ಕಾರ್ಯ ನಡೆಸುತ್ತಿವೆ. ಆದರೆ ಹವಾಮಾನ ವೈಪರೀತ್ಯದಿಂದಾಗಿ ಶೋಧ ಕಾರ್ಯಕ್ಕೆ ಅಡ್ಡಿಯಾಗಿದೆ ಎಂದು ಮೂಲಗಳು ತಿಳಿಸಿವೆ.
ಶನಿವಾರ ಬೆಳಿಗ್ಗೆ 9.56ಕ್ಕೆ ತವಾಂಗ್ ನಗರದಿಂದ ಹೊರಟಿದ್ದ ಸಿಎಂ ಹೆಲಿಕಾಪ್ಟರ್ 11-30ಕ್ಕೆ ಇಟಾನಗರ ತಲುಪಬೇಕಿತ್ತು. ಆದರೆ ಅದು ಆಕಾಶಕ್ಕೆ ಹಾರಿದ 20 ನಿಮಿಷಗಳ ನಂತರ ನಿಯಂತ್ರಣ ಕೊಠಡಿಯಿಂದ ಸಂಪೂರ್ಣವಾಗಿ ತನ್ನ ಸಂಪರ್ಕ ಕಡಿದುಕೊಂಡಿತು. ಈ ಸಂದರ್ಭದಲ್ಲಿ ಗಂಟೆಗಳ ನಂತರ ಸಿಎಂ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಭೂತಾನ್‌ನಲ್ಲಿ ಲ್ಯಾಂಡ್ ಆಗಿದ್ದು, ಎಲ್ಲರೂ ಸುರಕ್ಷಿತರಾಗಿದ್ದಾರೆ ಎಂದು ಅರುಣಾಚಲ ಪ್ರದೇಶ ಸರಕಾರ ಸ್ಪಷ್ಟನೆ ನೀಡಿತ್ತು.
ತದನಂತರ ಊಹಾಪೋಹ ಮುಂದುವರಿದಿರುವ ನಡುವೆಯೇ ಖಂಡು ಹೆಲಿಕಾಪ್ಟರ್ ಪತ್ತೆಯಾಗಿಲ್ಲ ಎಂಬ ಅಂಶ ಖಚಿತವಾಗಿತ್ತು. ಹೆಲಿಕಾಪ್ಟರ್‌ನಲ್ಲಿ ಮುಖ್ಯಮಂತ್ರಿ ದೋರ್ಜಿ ಖಂಡು, ತವಾಂಗ್ ಕ್ಷೇತ್ರದ ಶಾಸಕರ ಸಹೋದರಿ ಯೆಶಿ ಲಾಮು, ಖಂಡು ಅವರ ಭದ್ರತಾ ಅಧಿಕಾರಿ ಯೆಶಿ ಛೊಡ್ಡಕ್ ಮತ್ತು ಇಬ್ಬರು ಪೈಲಟ್‌ಗಳಾದ ಕ್ಯಾಪ್ಟನ್ ಜೆ.ಎಸ್.ಬಬ್ಬರ್ ಮತ್ತು ಕೆ.ಎಸ್.ಮಲಿಕ್ ಇದ್ದರು.
'ನಮ್ಮ ಮುಖ್ಯಮಂತ್ರಿಗಳ ಬಗ್ಗೆ ಈವರೆಗೂ ಯಾವುದೇ ಖಚಿತ ಮಾಹಿತಿ ಬಂದಿಲ್ಲ' ಎಂದು ಅರುಣಾಚಲ ಸಂಸದ ತಾಕಾಮ್ ಸಂಜಯ್ ತಿಳಿಸಿದ್ದಾರೆ. ನಿಜಕ್ಕೂ ಏನಾಗಿದೆ ಎಂಬ ಮಾಹಿತಿ ನಮಗೂ ತಿಳಿದಿಲ್ಲ ಎಂದಿದ್ದಾರೆ. ಅಲ್ಲದೇ ಖಂಡು ಅವರು ಪ್ರಯಾಣಿಸುತ್ತಿದ್ದ ವಿಮಾನ ಭೂತಾನ್‌ನಲ್ಲಿ ಲ್ಯಾಂಡ್ ಆಗಿದೆ ಎಂಬ ವರದಿಯನ್ನು ಭೂತಾನ್ ಸರಕಾರ ಕೂಡ ತಳ್ಳಿಹಾಕಿದೆ ಎಂದು ಅವರು ವಿವರಿಸಿದ್ದಾರೆ.
ಇಸ್ರೋ ಸಹಕಾರ ಕೋರಿದ ಕೇಂದ್ರ: ಮುಖ್ಯಮಂತ್ರಿ ದೋರ್ಜಿ ಖಂಡು ಹಾಗೂ ಇತರ ನಾಲ್ವರನ್ನು ಕರೆದೊಯ್ಯುತ್ತಿದ್ದ ಹೆಲಿಕಾಪ್ಟರ್ ಪತ್ತೆಗೆ ಕೇಂದ್ರ ಸರಕಾರ ಇಸ್ರೋ ಸಹಕಾರ ಕೋರಿದೆ. ಹೆಲಿಕಾಪ್ಟರ್ ನಾಪತ್ತೆಯಾಗಿರುವ ಪ್ರದೇಶದಲ್ಲಿ ಭಾರತೀಯ ಉಪಗ್ರಹ ಎರಡು ಬಾರಿ ಸುತ್ತು ಹಾಕಿದೆ ಎಂದು ಗೃಹ ಕಾರ್ಯದರ್ಶಿ ಜಿ.ಕೆ.ಪಿಳ್ಳೈ ತಿಳಿಸಿದ್ದಾರೆ.