ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಣ್ಣಾ ಹಜಾರೆ ವಜಾ ಅರ್ಜಿಯನ್ನು ತಳ್ಳಿ ಹಾಕಿದ ಹೈಕೋರ್ಟ್ (Lokpal Bill,Drafting Committee,Anna Hazare,Dismissed a Plea)
ಅಣ್ಣಾ ಹಜಾರೆ ವಜಾ ಅರ್ಜಿಯನ್ನು ತಳ್ಳಿ ಹಾಕಿದ ಹೈಕೋರ್ಟ್
ನವದೆಹಲಿ, ಮಂಗಳವಾರ, 3 ಮೇ 2011( 09:59 IST )
ಲೋಕಪಾಲ ಮಸೂದೆ ಕರಡು ರಚನಾ ಸಮಿತಿಯಿಂದ ಅಣ್ಣಾ ಹಜಾರೆ ಅವರನ್ನು ಕೈಬಿಡಬೇಕು ಎಂದು ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ. ಅಣ್ಣಾ ಹಜಾರೆ ಅವರ ಟ್ರಸ್ಟ್‌ನಲ್ಲಿ ಅವ್ಯವಹಾರ ನಡೆದಿರುವುದರಿಂದ ಅವರನ್ನು ಸಮಿತಿಯಿಂದ ಜೈಬಿಡಬೇಕು ಎಂದು ಅರ್ಜಿಯಲ್ಲಿ ಆಪಾದಿಸಲಾಗಿತ್ತು.
ಈ ಕುರಿತು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಹಾಗೂ ಸಂಜೀವ್ ಖನ್ನಾ ಅವರನ್ನೊಳಗೊಂಡ ವಿಭಾಗೀಯ ಪೀಠವು, ಕರಡು ಸಮಿತಿ ನ್ಯಾಯಾಲಯದ ಪರಾಮರ್ಶೆಗೊಳಪಡುವಂತಿಲ್ಲ ಹಾಗೂ ಈ ಕುರಿತು ನ್ಯಾಯಾಲಯ ಮಧ್ಯಪ್ರವೇಶಿಸುವಂತಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ಲೋಕಪಾಲ ಸಮಿತಿ ರಚನೆ ಕುರಿತು ಕೇಂದ್ರ ಕಾನೂನು ಸಚಿವಾಲಯ ಅಧಿಸೂಚನೆ ಹೊರಡಿಸಿದ್ದು, ಇದನ್ನು ಆಂತರಿಕ ವಿಚಾರ ಎಂದೇ ಪರಿಗಣಿಸಲಾಗುತ್ತದೆ ಎಂದು ನ್ಯಾಯಪೀಠ ಹೇಳಿದೆ. ಸಮಿತಿಗೆ ಅಧ್ಯಕ್ಷರನ್ನು ಆಯ್ಕೆ ಮಾಡುವ ವಿಚಾರ ನ್ಯಾಯಾಂಗ ಪರಾಮರ್ಶೆಗೆ ಒಳಪಡಿಸುವಂತಿಲ್ಲ ಎಂದು ಕೋರ್ಟ್ ತಿಳಿಸಿದೆ.
ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಯಲ್ಲಿ ಯಾವುದೇ ರೀತಿಯ ಸಾರ್ವಜನಿಕ ಹಿತಾಸಕ್ತಿ ಕಂಡುಬರುತ್ತಿಲ್ಲ. ಆದ್ದರಿಂದ ಈ ಅರ್ಜಿಯನ್ನು ವಜಾಗೊಳಿಸಲಾಗಿದೆ. ಹಜಾರೆ ಅವರ ಹಿಂದ್ ಸ್ವರಾಜ್ ಟ್ರಸ್ಟ್‌ನಲ್ಲಿ ಅವ್ಯವಹಾರ ನಡೆದಿರುವುದರಿಂದ ಅವರನ್ನು ಲೋಕಪಾಲ್ ಮಸೂದೆ ಕರಡು ರಚನಾ ಸಮಿತಿಯಿಂದ ಕೈಬಿಡಬೇಕು ಎಂದು ಜನಶಕ್ತಿ ಸಂಘಟನೆ ಹೈಕೋರ್ಟ್ ಮೆಟ್ಟಿಲೇರಿತ್ತು.