ನಿಗದಿತ ಕಾಲಮಿತಿಯೊಳಗೆ ಅದಿರು ಸಾಗಣೆ ಮಾಡಲು ಕರ್ನಾಟಕ ಸರಕಾರಕ್ಕೆ ಸೂಚನೆ ನೀಡಬೇಕೆಂದು ಕೋರಿ ಗಣಿ ಕಂಪನಿಗಳು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಸೋಮವಾರ ವಜಾಗೊಳಿಸಿದೆ.
ಅದಿರು ರಫ್ತಿಗೆ ಅನುಮತಿ ನೀಡುವ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ರಾಜ್ಯಸರಕಾರ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಸೇಸ ಗೋವಾ ಸೇರಿದಂತೆ ಹಲವಾರು ಗಣಿ ಕಂಪನಿಗಳು ಸಲ್ಲಿಸಿದ್ದ ಅರ್ಜಿಯ ಕುರಿತು ಸೋಮವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್.ವಿ.ರವೀಂದ್ರನ್ ಹಾಗೂ ಎ.ಕೆ.ಪಟ್ನಾಯಕ್ ಅವರನ್ನೊಳಗೊಂಡ ನ್ಯಾಯಪೀಠ ಯಾವುದೇ ಆದೇಶ ನೀಡಲು ನಿರಾಕರಿಸಿತು.
ರಾಜ್ಯ ಸರಕಾರ ಅದಿರು ರಫ್ತಿಗೆ ಹಲವಾರು ಗಣಿ ಕಂಪನಿಗಳು ಸಲ್ಲಿಸಿದ್ದ ಅರ್ಜಿಗಳನ್ನು ಸ್ವೀಕರಿಸಿದ್ದು, ಅರ್ಜಿ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ರಾಜ್ಯ ಸರಕಾರದ ವಕೀಲರಾದ ಅನಿತಾ ಶಣೈ ನ್ಯಾಯಾಲಯಕ್ಕೆ ತಿಳಿಸಿದ್ದರು.
ಅಕ್ರಮ ಗಣಿಗಾರಿಕೆ ತಡೆಯುವ ನಿಟ್ಟಿನಲ್ಲಿ ರಾಜ್ಯ ಸರಕಾರ 2010ರಲ್ಲಿ ಜಾರಿಗೆ ತಂದಿರುವ ಹೊಸ ಗಣಿ ನೀತಿಯನ್ವಯ ಅದಿರು ರಫ್ತಿಗೆ ಅನುಮತಿ ನೀಡುವ ಪ್ರಕ್ರಿಯೆ ನಡೆಯುತ್ತಿದೆ ಎಂದು ವಕೀಲರು ಕೋರ್ಟ್‌ಗೆ ವಿವರಿಸಿದ್ದರು.
ಎರಡು ವಾರದೊಳಗಾಗಿ ಅದಿರು ರಫ್ತು ನಿಷೇಧ ಹಿಂಪಡೆಯುವಂತೆ ಕೋರ್ಟ್ ಏಪ್ರಿಲ್ 5ರಂದು ಆದೇಶ ನೀಡಿದ್ದರೂ, ರಾಜ್ಯ ಸರಕಾರ ಅದಿರು ರಫ್ತಿಗೆ ಅನಿಮತಿ ನೀಡಲು ಅನಗತ್ಯವಾಗಿ ವಿಳಂಬ ಮಾಡುತ್ತಿದೆ ಎಂದು ಸೇಸ ಗೋವಾ, ಎಸ್.ಬಿ.ಮಿನರಲ್ಸ್ ಮೊದಲಾದ ಕಂಪನಿಗಳು ಆಪಾದಿಸಿದ್ದವು.