ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಲಾಡೆನ್ ಉಗ್ರ ಅಂತ ಹೇಳಿದವರು ಯಾರು?: ಮುಸ್ಲಿಮ್ ಮುಖಂಡರು (Osama bin Laden | Muslim religious leader | Abbottabad | America)
ಅಲ್ ಖೈದಾ ವರಿಷ್ಠ ಒಸಾಮ ಬಿನ್‌ ಲಾಡೆನ್‌ನನ್ನು ಪಾಕಿಸ್ತಾನದ ಅಬೋಟಾಬಾದ್‌ನಲ್ಲಿ ಅಮೆರಿಕ ಸೈನಿಕರು ಭಾನುವಾರ ಹತ್ಯೆಗೈದ ನಂತರ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಭಾರತದ ಮುಸ್ಲಿಂ ಧಾರ್ಮಿಕ ಮುಖಂಡರು, ಲಾಡೆನ್‌ ಭಯೋತ್ಪಾದಕ ಅಂತ ಹೇಳಿದವರು ಯಾರು ಎಂದು ಪ್ರಶ್ನಿಸುವ ಮೂಲಕ ಆತ ಉಗ್ರನಲ್ಲ ಎಂದು ಪ್ರತಿಪಾದಿಸಿದ್ದಾರೆ.

ಅಲ್ ಖೈದಾ ಮುಖಂಡ ಒಸಾಮ ಬಿನ್‌ ಲಾಡೆನ್‌ನನ್ನು ಉಗ್ರ ಎಂದು ಪ್ರತಿಪಾದಿಸುವುದು ಅಮೆರಿಕದ ಹಿತಾಸಕ್ತಿ ಎಂದು ಧಾರ್ಮಿಕ ಮುಖಂಡರು ಅಭಿಪ್ರಾಯಪಟ್ಟಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಜಾಮಿಯಾ ಮಸೀದಿಯ ಸೈಯದ್‌ ಅಹಮದ್‌ ಬುಖಾರಿ, ಲಾಡೆನ್‌ ಭಯೋತ್ಪಾದಕ ಎಂದು ಯಾವ ನ್ಯಾಯಾಲಯ ತೀರ್ಪು ನೀಡಿದೆ. ಆತ ಭಯೋತ್ಪಾದಕ ಎಂದು ಅಮೆರಿಕ ಹೇಳಿರುವುದನ್ನು ನಾವೇಕೆ ನಂಬಬೇಕು ಎಂದು ಪ್ರಶ್ನಿಸಿದ್ದಾರೆ. ಲಾಡೆನ್‌ ಹತ್ಯೆ ಕುರಿತು ಭಾರತದ ಪ್ರತಿಕ್ರಿಯೆ ಕುರಿತು ಪ್ರಸ್ತಾಪಿಸಿದ ಅವರು, ಪ್ಯಾಲೆಸ್ತೇನ್‌ನಲ್ಲಿ ಅಮೆರಿಕದ ನೆರವಿನಿಂದ ಇಸ್ರೇಲ್‌ ಸಾವಿರಾರು ಮುಸ್ಲಿಮರ ಹತ್ಯೆ ಮಾಡುತ್ತಿದೆ ಎಂದು ಆಪಾದಿಸಿದರು. ಅದೇ ರೀತಿ ಲಿಬಿಯಾ, ಇರಾಕ್, ಪ್ಯಾಲೆಸ್ತೇನ್‌ಗಳಲ್ಲಿಯೂ ಅಮೆರಿಕ ಮೂಗು ತೂರಿಸುವ ಮೂಲಕ ಅಮಾಯಕರ ಹತ್ಯೆಯನ್ನು ಮುಂದುವರಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಫ್ಘಾನಿಸ್ತಾನದ ತೋರಾಬೋರಾ ಗುಹೆಯಲ್ಲಿ ಲಾಡೆನ್‌ನನ್ನು ಅಮೆರಿಕ ಹತ್ಯೆ ಮಾಡಿರುವುದಾಗಿ ಪಿ.ಚಿದಂಬರಂ ಹಾಗೂ ಪಾಕಿಸ್ತಾನ ಸಂಸದ ಶೇರ್‌ ಇ ರೆಹಮಾನ್‌ ಹೇಳಿದ್ದು ಸುಳ್ಳು ಎಂದು ಸಾಬೀತಾಗಿತ್ತು. ಇದಾದ ನಂತರ ಮುಸ್ಲಿಂ ಪ್ರಮುಖರು ಒಸಾಮ ಅಮೆರಿಕದ ಆಪ್ತ ಎಂದು ಪ್ರತಿಪಾದಿಸಿದ್ದರು.

ಅದೇ ರೀತಿ ಜಮಾತ್‌ ಉಲ್ಮಾ ಹಿಂದ್‌ ಅಧ್ಯಕ್ಷ ಮೌಲಾನಾ ಅರ್ಷದ್‌ ಮದನಿ ಅವರೂ ಸಹ ಒಸಾಮ ಭಯೋತ್ಪಾದಕ ಅಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಅಮೆರಿಕದವರು ಅಫ್ಘಾನಿಸ್ತಾನದಲ್ಲಿ ರಷ್ಯಾ ವಿರುದ್ಧ ಹೋರಾಡಲು ಲಾಡೆನ್‌ನನ್ನು ಬಳಸಿಕೊಂಡ ನಂತರ ಆತನನ್ನು ಭಯೋತ್ಪಾದಕ ಎಂದು ಬಿಂಬಿಸಿದ್ದಾರೆ ಎಂದು ಆಪಾದಿಸಿದ್ದಾರೆ. ಒಂದು ಕಾಲದಲ್ಲಿ ಅಮೆರಿಕದ ಉತ್ತಮ ಗೆಳೆಯನಾಗಿದ್ದ ಲಾಡೆನ್ ಇದೀಗ ಅಮೆರಿಕಕ್ಕೆ ಭಯೋತ್ಪಾದಕನಾಗಿದ್ದಾನೆ. ಇದು ಅಮೆರಿಕದ ಕ್ರೂರತನದ ಮುಖವಾಡ ಎಂದು ಅಸಮಾಧಾನವ್ಯಕ್ತಪಡಿಸಿದ್ದಾರೆ.

ಪಾಕಿಸ್ತಾನದಲ್ಲಿ ಐಎಸ್‌ಐ ಉಗ್ರರಿಗೆ ಬೆಂಬಲ ನೀಡುತ್ತಿದೆ ಎಂದು ಹೇಳಿರುವ ಬುಖಾರಿ, 'ಒಸಾಮಾ ಭಯೋತ್ಪಾದಕ ಎಂದು ನಾನು ಹೇಳುತ್ತಿಲ್ಲ, ಜೈಷ್‌ ಎ ಮೊಹಮದ್‌ ಹಾಗೂ ಲಷ್ಕರ್‌ ಇ ತೊಯ್ಬಾ ಅಮೆರಿಕದಲ್ಲಿ ಬ್ಯಾಂಕ್‌ ಖಾತೆಗಳನ್ನು ಹೊಂದಿರುವುದರಿಂದ ಐಎಸ್‌ಐ ಹಾಗೂ ಅಮೆರಿಕ ಜತೆಯಾಗಿ ಭಾರತದಲ್ಲಿ ಭಯೋತ್ಪಾದನಾ ಕೃತ್ಯಗಳನ್ನು ನಡೆಸಲು ಪ್ರೋತ್ಸಾಹ ನೀಡುತ್ತಿವೆ' ಎಂದು ಆಪಾದಿಸಿದ್ದಾರೆ.

ಲಾಡೆನ್‌ ಹತ್ಯೆ ಕುರಿತು ಪ್ರತಿಕ್ರಿಯಿಸಿರುವ ಮರ್ಕಜೆ ಜಮಾತ್‌ ಅಹ್ಲೆ ಹದೀಸ್‌ ಹಿಂದ್‌ನ ಅಸ್ಗರ್‌ ಅಲಿ ಇಮಾಂ, ಒಸಾಮಾ ಅಮೆರಿಕದ ಕೈಗೊಂಬೆಯಾಗಿದ್ದ, ಅಮೆರಿಕವೇ ಆತನ್ನು ಹತ್ಯೆ ಮಾಡಿದೆ ಎಂದು ದೂರಿದರು.

ಒಸಾಮಾ ಭಯೋತ್ಪಾದಕ ಎಂಬುದು ಅಮೆರಿಕ ಹೇಳಿರುವುದರಲ್ಲಿ ಯಾವುದೇ ಹುರುಳಿಲ್ಲ. ಪಾಕಿಸ್ತಾನದಲ್ಲಿ ಒಸಾಮ ಬಿನ್‌ ಲಾಡೆನ್‌ನನ್ನು ಅಮೆರಿಕ ಪಡೆಗಳು ಹತ್ಯೆ ಮಾಡಿರುವುದರಿಂದ ಪಾಕಿಸ್ತಾನ ಇಕ್ಕಟ್ಟಿಗೆ ಸಿಲುಕುವಂತಾಗಿದೆ ಎಂದು ಜಮಾತೆ ಇಸ್ಲಾಂ ಇ ಹಿಂದ್‌ ಅಧ್ಯಕ್ಷ ಜಲಾಲುದ್ದೀನ್‌ ಉಮ್ರಿ ತಿಳಿಸಿದ್ದಾರೆ.
ಇವನ್ನೂ ಓದಿ