ಶ್ರೀರಾಮನ ಹೆಸರಿನಲ್ಲಿ ರಾಜಕೀಯ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಬಿಜೆಪಿ, ಎಲ್ಲ ಸಮುದಾಯಗಳ ಸಹಕಾರದಿಂದ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡುವುದಾಗಿ ಹೇಳಿದೆ.
ಈ ಕುರಿತು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ಗಡ್ಕರಿ, ಶ್ರೀರಾಮ ರಾಜಕೀಯದ ಸಮಸ್ಯೆಗೆ ಪರಿಹಾರವಲ್ಲ ಅಥವಾ ಬಿಜೆಪಿಯ ಗುರಿಯೂ ಅಲ್ಲ ಎಂದು ಸ್ಷಷ್ಟಪಡಿಸಿದ್ದಾರೆ.
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಎಲ್ಲ ಸಮುದಾಯಗಳೂ ಸಹಕಾರ ನೀಡಬೇಕು, ದೇಶಕ್ಕೆ ಸಾಂಸ್ಕೃತಿಕ ಹಾಗೂ ಐತಿಹಾಸಿಕ ಹಿನ್ನೆಲೆಯಿದೆ. ಈ ನಿಟ್ಟಿನಲ್ಲಿ ಎಲ್ಲರೂ ಸಹಕರಿಸಬೇಕು ಎಂದು ಹೇಳಿದ್ದಾರೆ.
ಬಿಜೆಪಿ ಹಾಗೂ ಆರ್‌ಎಸ್‌ಎಸ್ ನಡುವಿನ ಸಂಬಂಧ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಗಡ್ಕರಿ, ಬಿಜೆಪಿ ಹಾಗೂ ಆರ್‌ಎಸ್‌ಎಸ್ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಿಗೆ ಹೋಲಿಸಿದರೆ ಬಿಜೆಪಿ ಆಡಳಿತವಿರುವ ರಾಜ್ಯಗಳ ಆರ್ಥಿಕ ಮಟ್ಟ ಉತ್ತಮವಾಗಿದೆ. ಉತ್ತಮ ಹಾಗೂ ಪಾರದರ್ಶಕ ಆಡಳಿತ ನೀಡಿರುವ ಬಗ್ಗೆ ಪಕ್ಷಕ್ಕೆ ಸಂತೃಪ್ತಿ ಇದೆ ಎಂದರು. ಬಿಜೆಪಿ ಆಡಳಿತವಿರುವ ಚತ್ತೀಸ್ ಗಢದಲ್ಲಿ ಸಾರ್ವಜನಿಕ ವಿರತಣಾ ವ್ಯವಸ್ಥೆ ಉತ್ತಮವಾಗಿದೆ, ಕರ್ನಾಟಕದಲ್ಲಿ ಕೃಷಿ ಅಭಿವೃದ್ಧಿ ಸಾಧಿಸಲಾಗಿದೆ. ಗುಜರಾತ್ ಮತ್ತು ಮಧ್ಯಪ್ರದೇಶದಲ್ಲೂ ಬಿಜೆಪಿ ನೇತೃತ್ವದ ಸರಕಾರ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಗಡ್ಕರಿ ಹೇಳಿದರು.
ರಾಜಾಸ್ತಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಅವರ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ಗಡ್ಕರಿ, ಮುಂಬರುವ ವಿಧಾನಸಭಾ ಚುನಾವಣೆಯನ್ನು ರಾಜೇ ಹಾಗೂ ಪಕ್ಷದ ರಾಜ್ಯಧ್ಯಕ್ಷ ಅರುಣ್ ಚತುರ್ವೇದಿ ನೇತೃತ್ವದಲ್ಲೇ ಎದುರಿಸುವುದಾಗಿ ತಿಳಿಸಿದರು. ರಾಜೆ ಅವರು ತಮ್ಮ ಅಧಿಕಾರಾವಧಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದರು. ಅವರಿಗೆ ಜನರ ಬೆಂಬಲವಿತ್ತು. ಅವರ ಅಧಿಕಾರಾವಧಿಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಜನರು ಇಂದಿಗೂ ಸ್ಮರಿಸುತ್ತಿದ್ದಾರೆ ಎಂದರು.