ಅಲ್ ಖೈದಾ ಉಗ್ರ ಒಸಾಮಾ ಬಿನ್ ಲಾಡೆನ್‌ನನ್ನು ಅಮೆರಿಕ ಪಡೆಗಳು ಹತ್ಯೆ ಮಾಡಿದ ನಂತರ ಆತನ ಶವವನ್ನು ಸಮುದ್ರಕ್ಕೆ ಎಸೆದಿದ್ದು ಇಸ್ಲಾಮಿಕ್ ಧರ್ಮಕ್ಕೆ ವಿರುದ್ಧವಾಗಿದೆ ಎಂದು ಕಾಂಗ್ರೆಸ್ ಹಿರಿಯ ದಿಗ್ವಿಜಯ ಸಿಂಗ್ ನೀಡಿದ್ದ ಹೇಳಿಕೆ ಮತ್ತೊಂದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ.
ಜಗತ್ತಿನ ಮೋಸ್ಟ್ ವಾಂಟೆಡ್ ಉಗ್ರ ಒಸಾಮಾ ಬಿನ್ ಲಾಡೆನ್‌ನನ್ನು ಅಮೆರಿಕದ ಸಿಐಎ ಪಡೆ ಹತ್ಯೆ ನಡೆಸಿದ ನಂತರ ಆತನ ಶವವನ್ನು ಸಮುದ್ರದಲ್ಲಿ ಜಲಸಮಾಧಿ ಮಾಡಿತ್ತು. ಈ ಬಗ್ಗೆ ಸೋಮವಾರ ಪ್ರತಿಕ್ರಿಯೆ ನೀಡಿದ್ದ ಸಿಂಗ್, ಲಾಡೆನ್ ದೊಡ್ಡ ಉಗ್ರ ಹೌದು, ಆದರೆ ಆತನ ಧರ್ಮವನ್ನು ಗೌರವಿಸಬೇಕು ಎಂದು ಹೇಳುವ ಮೂಲಕ ಲಾಡೆನ್ ಶವವನ್ನು ಜಲಸಮಾಧಿ ಮಾಡಿದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು.
ಈ ಕುರಿತು ಬುಧವಾರ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ವಕ್ತಾರ ಮನೀಷ್ ತಿವಾರಿ, ಲಾಡೆನ್ ಅಂತ್ಯಕ್ರಿಯೆ ಕುರಿತು ದಿಗ್ವಿಜಯ್ ಸಿಂಗ್ ಅವರು ನೀಡಿರುವ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯವಾಗಿದೆ, ಪಕ್ಷದ ಅಭಿಪ್ರಾಯವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಲಾಡೆನ್ ಮತ್ತು ಆತನ ಭಯೋತ್ಪಾದಕ ಕೃತ್ಯಗಳ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈ ಕುರಿತು ಕಾಂಗ್ರೆಸ್ ಪಕ್ಷದ ನಿಲುವನ್ನು ಈಗಾಗಲೇ ಸ್ಪಷ್ಟಪಡಿಸಲಾಗಿದೆ. ಇದರಲ್ಲಿ ಯಾವುದೇ ಗೊಂದಲವಿಲ್ಲ ಎಂದು ಹೇಳಿದರು.
ದಿಗ್ವಿಜಯ್ ಸಿಂಗ್ ಅವರ ಹೇಳಿಕೆಯಿಂದ ಪಕ್ಷಕ್ಕೆ ಯಾವುದೇ ತೊಂದರೆಯಿಲ್ಲ, ಅಫ್ಜಲ್ ಗುರುವನ್ನು ಗಲ್ಲಿಗೇರಿಸಿದರೆ ಕಾಶ್ಮೀರದ ಮುಸ್ಲಿಮರು ಆಕ್ರೋಶ ವ್ಯಕ್ತಪಡಿಸಲಿದ್ದಾರೆ ಎಂಬುದಾಗಿಯೂ ದಿಗ್ವಿಜಯ್ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಅವರ ಹೇಳಿಕೆಗೆ ಯಾವುದೇ ಮಹತ್ವ ನೀಡುವ ಅಗತ್ಯವಿಲ್ಲ ಎಂದು ಹೆಸರು ಹೇಳಲಿಚ್ಛಿಸದ ಕಾಂಗ್ರೆಸ್ ಮುಖಂಡರೊಬ್ಬರು ತಿಳಿಸಿದ್ದಾರೆ.