ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಯೋಧ್ಯೆ: 1993ರ ಯಥಾಸ್ಥಿತಿಗೆ ಸುಪ್ರೀಂ ಕೋರ್ಟ್ ಆದೇಶ (Ayodhya Verdict | Allahabad High Court | Ram Janmabhomi)
ಅಯೋಧ್ಯೆಯ ರಾಮ ಜನ್ಮಭೂಮಿ-ಬಾಬರಿ ಮಸೀದಿ ವಿವಾದ ಮತ್ತೆ ಸುದ್ದಿಯಾಗುತ್ತಿದೆ. ಅಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೋಮವಾರ ಸುಪ್ರೀಂ ಕೋರ್ಟು ಆದೇಶ ನೀಡಿದ್ದು, ಈ ಹಿಂದೆ ವಿವಾದ ಪರಿಹಾರಕ್ಕಾಗಿ ಜಮೀನನ್ನು ಮೂರು ಪಾಲು ಮಾಡಿದ ಅಲಹಾಬಾದ್ ಹೈಕೋರ್ಟ್ ನಿಲುವಿಗೆ ಅಚ್ಚರಿ ವ್ಯಕ್ತಪಡಿಸಿರುವ ಅದು, ಆ ತೀರ್ಪಿಗೆ ತಡೆಯಾಜ್ಞೆ ನೀಡಿದೆ.

ಅಲಹಾಬಾದ್ ಹೈಕೋರ್ಟ್ ತೀರ್ಪು ವಿಲಕ್ಷಣ ಮತ್ತು ಅಚ್ಚರಿಯ ತೀರ್ಪಾಗಿದ್ದು, ಯಾರು ಕೂಡ ವಿಭಜನೆ ಕೋರಿರಲಿಲ್ಲ. ವಿವಾದಿತ ಭೂಮಿಯನ್ನು ವಿಭಾಗ ಮಾಡಿ ಹಂಚಿರುವುದು ಸಾಕಷ್ಟು ಕಾನೂನು ಹೋರಾಟಗಳಿಗೆ ನಾಂದಿಯಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಹೀಗಾಗಿ, 1993ರ ಜನವರಿ 7ಕ್ಕೆ ಅನುಸಾರವಾಗಿ ಯಥಾಸ್ಥಿತಿ ಕಾಯ್ದುಕೊಳ್ಳಬೇಕೆಂದು ನ್ಯಾಯಮೂರ್ತಿ ಅಫ್ತಾಬ್ ಅಲಂ ಮತ್ತು ನ್ಯಾಯಮೂರ್ತಿ ಆರ್.ಎಸ್.ಲೋಧಾ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ಪೀಠವು ಸೋಮವಾರ ತೀರ್ಪು ನೀಡಿದೆ.

ಈ ಹಿಂದೆ 2010ರ ಸೆ.30ರಂದು, ವಿವಾದಿತ 2.77 ಎಕರೆ ಜಮೀನನ್ನು ಮುಸ್ಲಿಮರಿಗೆ, ಹಿಂದುಗಳಿಗೆ ಮತ್ತು ನಿರ್ಮೋಹಿ ಅಖಾಡಕ್ಕೆ ಪಾಲು ಮಾಡಿ, ಅಲಹಾಬಾದ್ ಹೈಕೋರ್ಟ್ ಪೀಠವು ನೀಡಿದ್ದ ತೀರ್ಪಿನಿಂದ ಅಸಮಾಧಾನಗೊಂಡ ಹಲವಾರು ಹಿಂದೂ ಮತ್ತು ಮುಸ್ಲಿಂ ಸಂಘಟನೆಗಳು ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದವು.

ನಿರ್ಮೋಹಿ ಅಖಾಡ, ಅಖಿಲ ಭಾರತ ಹಿಂದೂ ಮಹಾಸಭಾ, ಜಮೀಯತ್ ಉಲೇಮಾ ಹಿಂದ್ ಮತ್ತು ಸುನ್ನಿ ಸೆಂಟ್ರಲ್ ವಕ್ಫ್ ಮಂಡಳಿಗಳು ಈ ಕುರಿತು ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದವು. ಅದೇ ರೀತಿಯಾಗಿ, ಭಗವಾನ್ ರಾಮ ವಿರಾಜಮಾನ ಪರವಾಗಿಯೂ ಒಂದು ಅರ್ಜಿ ಸಲ್ಲಿಸಲಾಗಿತ್ತು.

ಹೈಕೋರ್ಟ್ ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ಕೇವಲ ನಂಬಿಕೆಯ ಆಧಾರದಲ್ಲಿ ತೀರ್ಪು ನೀಡಿದೆ ಎಂದು ವಕ್ಫ್ ಮಂಡಳಿ ವಾದಿಸಿತ್ತು.

ವಿವಾದಿತ ಪ್ರದೇಶದ ಮೂರನೇ ಒಂದು ಭಾಗವನ್ನು ಮುಸ್ಲಿಮರಿಗೆ ಕೊಡುವ ತೀರ್ಪನ್ನು ಹಿಂದೂ ಮಹಾಸಭಾ ಕೂಡ ಪ್ರಶ್ನಿಸಿ ಸುಪ್ರೀಂ ಕೋರ್ಟಿನ ಮೊರೆ ಹೋಗಿತ್ತು. ಅಂದು ನ್ಯಾಯಮೂರ್ತಿ ಧರ್ಮವೀರ್ ಶರ್ಮಾ ಅವರು ಹೇಳಿದಂತೆ, ಪೂರ್ಣ ಪ್ರದೇಶವನ್ನು ಹಿಂದೂಗಳಿಗೆ ಹಸ್ತಾಂತರಿಸಬೇಕು ಎಂಬ ತೀರ್ಪನ್ನು ಮಾನ್ಯ ಮಾಡುವಂತೆ ಅದು ಸುಪ್ರೀಂ ಕೋರ್ಟನ್ನು ಕೇಳಿಕೊಂಡಿದೆ.

ಕಳೆದ ಸೆ.30ರಂದು ತ್ರಿಸದಸ್ಯ ಪೀಠವು ಅಯೋಧ್ಯೆ ಕುರಿತು ತೀರ್ಪು ನೀಡಿ, ಮೂರು ಗೋಪುರಗಳಿರುವಲ್ಲಿ, ಕೇಂದ್ರೀಯ ಗೋಪುರವಿರುವ, ಶ್ರೀರಾಮ ವಿಗ್ರಹವಿರುವ ಪ್ರದೇಶವು ಹಿಂದೂಗಳಿಗೆ ಸೇರಬೇಕೆಂದು ಬಹುಮತದ (2-1) ತೀರ್ಪು ಹೊರಬಿದ್ದಿತ್ತು. ಅಂತೆಯೇ, ನ್ಯಾಯಮೂರ್ತಿ ಎಸ್.ಯು.ಖಾನ್ ಮತ್ತು ನ್ಯಾಯಮೂರ್ತಿ ಸುಧೀರ್ ಅಗರ್‌ವಾಲ್ ಅವರು, ಇಡೀ ವಿವಾದಿತ ಪ್ರದೇಶವನ್ನು ಮೂರು ಭಾಗ ಮಾಡಿ, ಒಂದು ಭಾಗವನ್ನು ಮುಸ್ಲಿಮರಿಗೆ, ಒಂದು ಭಾಗವನ್ನು ನಿರ್ಮೋಹಿ ಅಖಾಡಕ್ಕೆ ಮತ್ತು 'ರಾಮ ಲಲ್ಲಾ ವಿರಾಜಮಾನ'ನ ಪ್ರತಿನಿಧಿಗಳಾದ ಅಖಿಲ ಭಾರತ ಹಿಂದೂ ಮಹಾಸಭಾಕ್ಕೆ ಕೊಡಬೇಕು ಎಂದು ತೀರ್ಪು ನೀಡಿದ್ದರೆ, ನ್ಯಾಯಮೂರ್ತಿ ಶರ್ಮಾ ಅವರು, ಪೂರ್ಣ ಭಾಗವನ್ನು ಹಿಂದೂಗಳಿಗೆ ಒಪ್ಪಿಸಬೇಕೆಂದು ತೀರ್ಪಿತ್ತಿದ್ದರು.
ಇವನ್ನೂ ಓದಿ