ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ದಾವೂದ್ ಬಗ್ಗೆ ಹಸಿ ಹಸಿ ಸುಳ್ಳು ಹೇಳಿದ ಪಾಕ್: ಅಡ್ವಾಣಿ (Dawood Ibrahim extradition | Musharraf visit | L.K. Advani)
ದಾವೂದ್ ಬಗ್ಗೆ ಹಸಿ ಹಸಿ ಸುಳ್ಳು ಹೇಳಿದ ಪಾಕ್: ಅಡ್ವಾಣಿ
ನವದೆಹಲಿ, ಸೋಮವಾರ, 9 ಮೇ 2011( 16:22 IST )
PTI
ನವದೆಹಲಿ : ಅಲ್-ಕೈದಾ ಮುಖಂಡ ಒಸಾಮಾ ಬಿನ್ ಲಾಡೆನ್ ಪಾಕ್ ನೆಲದಲ್ಲಿ ವಾಸಿಸುತ್ತಿಲ್ಲ ಎಂದು ಅಮೆರಿಕೆಗೆ ಹಸಿ ಸುಳ್ಳು ಹೇಳಿಕೆ ನೀಡಿದ ಪಾಕಿಸ್ತಾನ, ಕುಖ್ಯಾತ ಭೂಗತ ದೊರೆ ದಾವೂದ್ ಇಬ್ರಾಹಿಂ ಇರುವಿಕೆಯ ಬಗ್ಗೆ ಕೂಡಾ ಭಾರತಕ್ಕೆ ಹಸಿ ಸುಳ್ಳು ಹೇಳುತ್ತಿದೆ ಎಂದು ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಕಿಡಿಕಾರಿದ್ದಾರೆ.
ಪಾಕಿಸ್ತಾನದಲ್ಲಿ ಮಾಜಿ ರಾಷ್ಟ್ರಾಧ್ಯಕ್ಷ ಪರ್ವೇಜ್ ಮುಷ್ರಫ್ ಸಂಪೂರ್ಣ ಅಧಿಕಾರ ಹೊಂದಿರುವ ಸಂದರ್ಭದಲ್ಲಿ, ಸೇನಾ ನೆಲೆಯ ನಗರವಾದ ಅಬೋಟ್ಟಾಬಾದ್‌ನಲ್ಲಿ ಕುಖ್ಯಾತ ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್‌ಗೆ ವಾಸಿಸಲು ಅನುವು ಮಾಡಿಕೊಡಲಾಗಿತ್ತು ಎಂದು ಆರೋಪಿಸಿದ್ದಾರೆ.
2001ರಲ್ಲಿ ನಡೆದ ಅಗ್ರಾ ಶೃಂಗಸಮ್ಮೇಳನಕ್ಕೆ ಭಾರತಕ್ಕೆ ಆಗಮಿಸಿದ್ದ ಮುಷ್ರಫ್, ದಾವೂದ್‌ನನ್ನು ಭಾರತಕ್ಕೆ ಒಪ್ಪಿಸುವಂತೆ ಕೋರಿಕೆ ಸಲ್ಲಿಸಿದಾಗ, ಪಾಕಿಸ್ತಾನದಲ್ಲಿ ದಾವೂದ್‌ಗೆ ಆಶ್ರಯ ನೀಡಿಲ್ಲ ಎಂದು ಹಸಿಸುಳ್ಳು ಹೇಳಿದ್ದರು ಎಂದು ಅಡ್ವಾಣಿ ತಮ್ಮ ಬ್ಲಾಗ್‌ನಲ್ಲಿ ದಾಖಲಿಸಿದ್ದಾರೆ.
ಜಾಗತಿಕ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ಲಾಡೆನ್‌ಗೆ ಪಾಕ್ ಆಶ್ರಯ ನೀಡಿಲ್ಲ ಎಂದು ಅಮೆರಿಕೆಗೆ ವಂಚಿಸಿದ ಪಾಕಿಸ್ತಾನ, ದಾವೂದ್ ಪಾಕ್‌ನಲ್ಲಿ ವಾಸಿಸುತ್ತಿಲ್ಲ ಎಂದು ಭಾರತಕ್ಕೆ ಸುಳ್ಳು ಮಾಹಿತಿ ನೀಡುತ್ತಿದೆ ಎಂದು ಹೇಳಿದ್ದಾರೆ.
ಮಾಜಿ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರ ಆಹ್ವಾನದ ಮೇರೆಗೆ ಭಾರತಕ್ಕೆ ಆಗಮಿಸಿದ್ದ ಮುಷ್ರಫ್, ದಾವುದ್‌ನನ್ನು ಭಾರತಕ್ಕೆ ಒಪ್ಪಿಸಿ ಎನ್ನುವ ಮನವಿ ಮಾಡಿದ ಕೂಡಲೇ, ಮುಷ್ರಫ್ ಕಣ್ಣು ಕೆಂಪಾಗಿಸಿ, ದಾವುದ್‌ಗೆ ಪಾಕಿಸ್ತಾನ ಆಶ್ರಯ ನೀಡಿಲ್ಲ ಎಂದು ಅಹಿತಕರವಾಗಿ ವರ್ತಿಸಿದರು ಎಂದು ಅಡ್ವಾಣಿ ಅಂದಿನ ನೆನಪುಗಳನ್ನು ಸ್ಮರಿಸಿದ್ದಾರೆ.
ತಾವು ಗೃಹ ಸಚಿವರಾಗಿದ್ದಾಗ ಮುಷ್ರಫ್ ಅವರೊಂದಿಗೆ 2001ರ ಜುಲೈ 14 ರಂದು ನಡೆದ ಸಭೆಯ ನಂತರ, ಪಾಕಿಸ್ತಾನದ ಅಧಿಕಾರಿಯೊಬ್ಬರು ತಮ್ಮೊಂದಿಗೆ ಮಾತನಾಡಿ, ದಾವೂದ್ ಬಗ್ಗೆ ನಮ್ಮ ಅಧ್ಯಕ್ಷರು ನಿಮಗೆ ಹಸಿಸುಳ್ಳು ಹೇಳಿದ್ದಾರೆ. ದಾವೂದ್ ಪಾಕಿಸ್ತಾನದಲ್ಲಿ ವಾಸಿಸುತ್ತಿದ್ದಾನೆ ಎಂದು ಮಾಹಿತಿ ನೀಡಿರುವುದಾಗಿ ಅಡ್ವಾಣಿ ಬಹಿರಂಗಪಡಿಸಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ದೇಶಗಳು ಆರೋಪಿಗಳನ್ನು ಹಸ್ತಾಂತರಿಸುವ ಬಗ್ಗೆ ಒಪ್ಪಂದಕ್ಕೆ ಸಹಿಹಾಕಬೇಕು ಎನ್ನುವ ಸಲಹೆಗೆ ಮುಷ್ರಫ್ ಆರಂಭದಲ್ಲಿ ಸಕಾರಾತ್ಮಕವಾಗಿ ಸ್ಪಂದಿಸಿದರು. ಆದರೆ, ಮುಂಬೈ ಸ್ಫೋಟದ ರೂವಾರಿ ದಾವೂದ್‌ನನ್ನು ಭಾರತಕ್ಕೆ ಒಪ್ಪಿಸುವಂತೆ ಬೇಡಿಕೆ ಸಲ್ಲಿಸಿದಾಗ ಸಭೆಯಲ್ಲಿ ಪರಿಸ್ಥಿತಿ ತುಂಬಾ ಬಿಗಡಾಯಿಸಿತು ಎಂದು ಬಿಜೆಪಿ ಹಿರಿಯ ಮುಖಂಡ ಎಲ್.ಕೆ.ಅಡ್ವಾಣಿ ಬ್ಲಾಗ್‌ನಲ್ಲಿ ದಾಖಲಿಸಿದ್ದಾರೆ.