ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪಾತಕಿ ಪಾಕ್ ವಿರುದ್ಧ ಮತ್ತೆ ಪುರಾವೆ: 26/11 ದಾಳಿಯಲ್ಲಿ ಐಎಸ್ಐ
(Mumbai Terror Attack | 26 11 Attack | Lashkar | ISI | Pakistan)
ಪಾತಕಿ ಪಾಕ್ ವಿರುದ್ಧ ಮತ್ತೆ ಪುರಾವೆ: 26/11 ದಾಳಿಯಲ್ಲಿ ಐಎಸ್ಐ
ನವದೆಹಲಿ, ಸೋಮವಾರ, 9 ಮೇ 2011( 17:47 IST )
PTI
26/11ರ ಮುಂಬೈ ದಾಳಿಯಲ್ಲಿ ಪಾಕಿಸ್ತಾನವು 'ಇಲ್ಲ ಇಲ್ಲ' ಎಂದು ಹಸಿ ಹಸಿ ಸುಳ್ಳು ಹೇಳುತ್ತಲೇ ಇರುವ ಐಎಸ್ಐ ಕೈವಾಡಕ್ಕೆ ಈಗ ಅಮೆರಿಕವೇ ಪುರಾವೆ ನೀಡಿದೆ. ಭಾರತದ ಮೇಲೆ ನಡೆದ ಈ ದಾಳಿಯಲ್ಲಿ ಪಾಕಿಸ್ತಾನದ ಕುಖ್ಯಾತ ಬೇಹುಗಾರಿಕಾ ಸಂಸ್ಥೆ ಐಎಸ್ಐಯ ಮೇಜರ್ ಇಕ್ಬಾಲ್ ಎಂಬ ಅಧಿಕಾರಿ ಸೇರಿದಂತೆ ಐದು ಮಂದಿ ಶಾಮೀಲಾಗಿರುವ ಕುರಿತಾಗಿ ಅಮೆರಿಕ ಸರಕಾರವು ಸೋಮವಾರ ದಾಖಲಿಸಿದ ಎರಡನೇ ಚಾರ್ಜ್‌ಶೀಟ್‌ನಲ್ಲಿ ಸ್ಪಷ್ಟವಾಗಿ ತಿಳಿಸಿದೆ.
ಈ ದಾಳಿಯಲ್ಲಿ 6 ಅಮೆರಿಕನ್ನರು ಸಾವನ್ನಪ್ಪಿದ್ದರು. ಶಿಕಾಗೋ ನ್ಯಾಯಾಲಯಕ್ಕೆ ಸಲ್ಲಿಸಲಾದ ಚಾರ್ಜ್‌ಶೀಟ್‌ನಲ್ಲಿ ಮೇಜರ್ ಇಕ್ಬಾಲ್, ಸಾಜಿದ್ ಮಜೀದ್, ಅಬು ಕ್ವಹಾಫಾ, ಮಜ್ಹರ್ ಇಕ್ಬಾಲ್ ಮತ್ತು 'ಡಿ' ಎಂದು ಗುರುತಿಸಿಕೊಂಡಿರುವ ಒಬ್ಬ ಲಷ್ಕರ್ ಇ ತೋಯ್ಬಾ ಸದಸ್ಯನ ವಿರುದ್ಧ 'ಭಾರತದ ಸಾರ್ವಜನಿಕ ಸ್ಥಳಗಳಲ್ಲಿ ಬಾಂಬ್ ಇರಿಸುವ ಸಂಚು ರೂಪಿಸಿದ' ಆರೋಪ ಹೊರಿಸಲಾಗಿದೆ.
ಸಾಜಿದ್ ಮಜೀದ್ (ಸಾಜಿದ್ ಮೀರ್ ಅಲಿಯಾಸ್ ವಾಸಿ, ಅಲಿಯಾಸ್ ಇಬ್ರಾಹಿಂ ಎಂಬ ಹೆಸರುಗಳಿವೆ) ಎಂಬ 35ರ ಹರೆಯದ ವ್ಯಕ್ತಿಯು, ಈಗಾಗಲೇ ಭಾರತವು ಧ್ವನಿಯೆತ್ತಿರುವ ಜಕೀ ಉರ್ ರಹಮಾನ್ ಲಖ್ವಿಗೆ ಆಪ್ತನೆಂದು ಹೇಳಲಾಗಿದೆ. ಈತ ಲಷ್ಕರ್ ಇ ತೋಯ್ಬಾದ ಹಿರಿಯ ಕಮಾಂಡರ್ ಆಗಿದ್ದು, ಭಾರತದ ಮೇಲಿನ ದಾಳಿಯ ಹೊಣೆ ವಹಿಸಿಕೊಂಡಿದ್ದಾನೆ. ಈತ ಮುಂಬೈ ದಾಳಿಯ ಪ್ರಧಾನ ಸೂತ್ರದಾರನಾಗಿದ್ದು, ಪಾಕಿಸ್ತಾನೀ ಮೂಲದ ಬಂಧಿತ ಉಗ್ರಗಾಮಿ, ಡೇವಿಡ್ ಕೊಲ್‌ಮನ್ ಹೆಡ್ಲಿಯ ಪ್ರಮುಖ ಸಂಪರ್ಕ ವ್ಯಕ್ತಿಯೂ ಆಗಿದ್ದಾನೆ. ಈತ 2008ರ ನವೆಂಬರ್ 26ರ ಮುಂಬೈ ದಾಳಿಯಲ್ಲಿ ಭಾಗಿಯಾಗಿದ್ದ (ಬಂಧಿತ ಕಸಬ್ ಸೇರಿದಂತೆ) ಎಲ್ಲ 10 ಉಗ್ರಗಾಮಿಗಳಿಗೆ ತರಬೇತಿ ನೀಡಿ ಪೂರ್ಣ ವಿವರಗಳನ್ನೂ ನೀಡಿದ್ದ. ಅದಲ್ಲದೆ, ಮುಂಬೈ ದಾಳಿ ಸಂಯೋಜನೆಗಾಗಿ ಹೆಡ್ಲಿಗೆ ಗುರಿಗಳ ಕುರಿತು ಸಮೀಕ್ಷೆ ನಡೆಸಲು ಎಲ್ಲ ರೀತಿಯ ಹಣಕಾಸು, ಉಪಕರಣಗಳ ನೆರವನ್ನೂ ಒದಗಿಸಿದ್ದ.
ಕ್ವಹಾಫಾ ಲಷ್ಕರ್ ತರಬೇತಿದಾರನಾಗಿದ್ದು, ಈತ ಕೂಡ 10 ಉಗ್ರರಿಗೆ ಜಿಪಿಎಸ್ ಇತ್ಯಾದಿ ಬಳಕೆಯ ಕುರಿತು ಸೂಕ್ತ ತರಬೇತಿ ನೀಡಿದ್ದ. ಅಲ್ಲದೆ, ಶಸ್ತ್ರಾಸ್ತ್ರ ಮತ್ತು ಸ್ಫೋಟಕಗಳ ತಜ್ಞನೂ ಆಗಿದ್ದ. ಮತ್ತು ಮುಂಬೈ ದಾಳಿಯ ಪ್ರಮುಖ ಆರೋಪಿಗಳಲ್ಲೊಬ್ಬನಾಗಿದ್ದು, ಈಗ ತಲೆ ಮರೆಸಿಕೊಂಡಿದ್ದಾನೆ.
ಲಷ್ಕರ್ ನಾಯಕ ಮಜ್ಹರ್ ಇಕ್ಬಾಲ್ ಅಲಿಯಾಸ್ ಅಬು ಅಲ್‌ಖಾಮಾ ಎಂಬಾತ ಕಾಶ್ಮೀರ ಘಟಕದ ುಸ್ತುವಾರಿ. ಈತ ಕೂಡ ಮುಂಬೈ ದಾಳಿಯಲ್ಲಿ 10 ಉಗ್ರರಿಗೆ ಪೂರ್ಣ ಮಾಹಿತಿ, ತರಬೇತಿ ನೀಡಿಕೆಯಲ್ಲಿ ಪ್ರಧಾನ ಪಾತ್ರ ವಹಿಸಿದ್ದ. ಈತನನ್ನು ಪಾಕಿಸ್ತಾನಿ ಅಧಿಕಾರಿಗಳು ಬಂಧಿಸಿ ಆರೋಪ ಪಟ್ಟಿಯನ್ನೂ ದಾಖಲಿಸಿದ್ದಾರೆ.
'ಡಿ' ಎಂಬ ಹೆಸರಿನಿಂದ ಕರೆಯಲ್ಪಡುತ್ತಿದ್ದ ಲಷ್ಕರ್ ಸದಸ್ಯನು ಲಖ್ವಿಯ ಬಂಧನದ ಬಳಿಕ ಲಷ್ಕರ್‌ನ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದನು. ಈತ ಪ್ರಮುಖ ಸಂಚುಕೋರನಾಗಿದ್ದು, ತಲೆ ಮರೆಸಿಕೊಂಡಿದ್ದಾನೆ. 10 ಉಗ್ರಗಾಮಿಗಳ ನೇಮಕಾತಿ, ತರಬೇತಿಯಲ್ಲಿಯೂ ಇವನ ಪಾತ್ರವಿತ್ತು.
ಇನ್ನು ಐಎಸ್ಐ ಅಧಿಕಾರಿ ಮೇಜರ್ ಇಕ್ಬಾಲ್ 2007-08ರ ಅವಧಿಯಲ್ಲಿ ಲಾಹೋರ್‌ನಲ್ಲಿ ಹುದ್ದೆಯಲ್ಲಿದ್ದ. ಐಎಸ್ಐ ಪರವಾಗಿ ಮುಂಬೈ ಭಯೋತ್ಪಾದನಾ ದಾಳಿಗಾಗಿ ಡೇವಿಡ್ ಹೆಡ್ಲಿಯನ್ನು ನಿಯಂತ್ರಿಸುತ್ತಿದ್ದ ಈತ, ಅವನ ಸಮೀಕ್ಷಾ ಕಾರ್ಯಾಚರಣೆಯ ಖರ್ಚಿಗಾಗಿ 25 ಸಾವಿರ ಡಾಲರ್ ಹಣ ಮತ್ತು ಭಾರತೀಯ ನಕಲಿ ನೋಟುಗಳನ್ನೂ ಒದಗಿಸಿದ್ದ.
ತಾನು ಸಂಗ್ರಹಿಸಿದ ಎಲ್ಲ ಸರ್ವೇಕ್ಷಣಾ ವೀಡಿಯೊಗಳನ್ನು ಮೊದಲು ಮೇಜರ್ ಇಕ್ಬಾಲ್‌ಗೇ ಒದಗಿಸುತ್ತಿದ್ದ ಡೇವಿಡ್ ಹೆಡ್ಲಿ ನಂತರವಷ್ಟೇ ಅದನ್ನು ಲಷ್ಕರ್‌ಗೆ ಒಪ್ಪಿಸುತ್ತಿದ್ದ. ಈತ ಐಎಸ್ಐ ಅಧಿಕಾರಿಯಾಗಿದ್ದುಕೊಂಡು, ಮುಂಬೈ ದಾಳಿಯ ಯೋಜನೆ ಮತ್ತು ಅನುಷ್ಠಾನದಲ್ಲಿ ಪೂರ್ಣವಾಗಿ ತೊಡಗಿಸಿಕೊಂಡಿದ್ದ.
ಲಾಡೆನ್ ನಮ್ಮ ಬಳಿ ಇಲ್ಲ ಎಂದು ಅಮೆರಿಕಕ್ಕೂ ಸುಳ್ಳು ಹೇಳಿದ್ದ ಪಾಕಿಸ್ತಾನದ ಎಡಬಿಡಂಗಿತನಕ್ಕೆ ಮತ್ತೊಂದು ಅಧಿಕೃತ ದಾಖಲೆ ದೊರೆತಿದೆ. ಈ ಮೂಲಕ, ಪಾಕಿಸ್ತಾನದ ಮೇಲೆ ಕ್ರಮ ಕೈಗೊಳ್ಳಲು ಭಾರತಕ್ಕೆ ಒಂದು ಅಧಿಕೃತ ದಾಖಲೆಯು ದೊರೆತಂತಾಗಿದ್ದು, ಇನ್ನಾದರೂ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಸೂಕ್ತ ಕ್ರಮ ಕೈಗೊಂಡೀತೇ ಎಂಬುದು ಭಾರತೀಯರ ನಿರೀಕ್ಷೆ.