ಉಗ್ರಗಾಮಿಗಳಿಗೆ ಸೂಕ್ತವಾದ ಪ್ರಯಾಣದ ದಾಖಲೆಪತ್ರಗಳನ್ನು ತಯಾರಿಸಲು ಮತ್ತು ಆಶ್ರಯ ಕಲ್ಪಿಸಿಕೊಡುವಲ್ಲಿ ದೆಹಲಿ ಮೂಲದ ಇಸ್ಲಾಮಿಕ್ ಮಿಶನರಿ ಕೂಟ 'ತಬ್ಲಿಗಿ ಜಮಾತ್' ಅನ್ನು ಅಲ್ ಖಾಯಿದಾ ಬಳಸಿಕೊಳ್ಳುತ್ತಿತ್ತು ಎಂಬ ಮಾಹಿತಿಯನ್ನು ವಿಕಿಲೀಕ್ಸ್ ಬಹಿರಂಗಪಡಿಸಿದೆ.
ಗ್ವಾಂಟನಾಮೋ ಬೇಯಲ್ಲಿರುವ ಕಾರಾಗೃಹದಲ್ಲಿ ಬಂಧಿತರಾಗಿರುವ ಉಗ್ರಗಾಮಿಗಳು ಬಯಲುಗೊಳಿಸಿರುವ ಅಂಶಗಳ ಪ್ರಕಾರ, ಈ ಜೈಲಿನಲ್ಲಿರುವ ಕನಿಷ್ಠ ಮೂವರು ಭಯಾನಕ ಉಗ್ರರು ದೆಹಲಿಯ ಸುತ್ತಮುತ್ತ ತಬ್ಲಿಗಿ ಜಮಾತ್ ಸಂಸ್ಥೆಯ ಆಶ್ರಯ ಪಡೆದಿದ್ದರು.
779 ಮಂದಿ ಖೈದಿಗಳನ್ನು ವಿಚಾರಣೆಗೆ ಗುರಿಪಡಿಸಲಾಗಿದ್ದು, ಈ ಸಂದರ್ಭ ಪಾಕಿಸ್ತಾನಿ ಮೂಲದ ಉಗ್ರಗಾಮಿ ಸಂಘಟನೆ ಅಲ್ ಖಾಯಿದಾ ಭಾರತದಲ್ಲಿ ತನ್ನ ಜಾಲ ವಿಸ್ತರಿಸಲು ತಬ್ಲಿಗಿ ಜಮಾತ್ ಅನ್ನು ಬಳಸಿಕೊಂಡಿದೆ ಎಂಬ ಮಾಹಿತಿ ಲಭ್ಯವಾಗಿದೆ. ಜಮಾತ್ ತಬ್ಲಿಗಿಯನ್ನು ಅಮೆರಿಕ ಕೇಬಲ್‌ಗಳು 'ಉದ್ದೇಶಪೂರ್ವಕವಾಗಿಯೇ ಭಯೋತ್ಪಾದಕರನ್ನು ಬೆಂ6ಬಲಿಸುವ ಮತಾಂತರಿ ಸಂಸ್ಥೆ' ಎಂದು ಬಣ್ಣಿಸಿದೆ.
ವಿಕಿಲೀಕ್ಸ್ ಕೇಬಲ್‌ಗಳ ಪ್ರಕಾರ, ತನ್ನ ಸದಸ್ಯರಿಗೆ ಅಂತಾರಾಷ್ಟ್ರೀಯ ಪ್ರಯಾಣದ ವ್ಯವಸ್ಥೆಗಳನ್ನು ಮಾಡಲು ಅಲ್ ಖಾಯಿದಾವು ಜಮಾತ್ ಅನ್ನು ಬಳಸಿಕೊಳ್ಳುತ್ತಿತ್ತು. 26/11 ಮುಂಬೈ ದಾಳಿಯಲ್ಲಿಯೂ ಈ ಸಂಸ್ಥೆಯ ಪಾತ್ರವಿದೆ ಎಂದು ಅಮೆರಿಕ ಹೇಳಿರುವ ಉಲ್ಲೇಖವೂ ವಿಕಿಲೀಕ್ಸ್‌ನಲ್ಲಿದೆ.