ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪ್ರಬಲ ಆರೋಪ ಇಲ್ಲ: ಭೋಪಾಲ ಸಂತ್ರಸ್ತರಿಗೆ ಮತ್ತೆ ಶಾಕ್ (New Delhi | Bhopal Tragedy | Supreme Court | Dismisses CBI Petition)
25 ವರ್ಷಗಳಿಂದ ನ್ಯಾಯಕ್ಕಾಗಿ ಕಾಯುತ್ತಿರುವ ಭೋಪಾಲ್‌ ಅನಿಲ ದುರಂತ ಸಂತ್ರಸ್ತರಿಗೆ ಬುಧವಾರ ಮತ್ತೊಂದು ಶಾಕ್. ದುರಂತಕ್ಕೆ ಕಾರಣರಾದವರ ವಿರುದ್ಧ ಪ್ರಬಲವಾದ ಆರೋಪಗಳನ್ನು ಪುನಃ ಹೊರಿಸುವ ಉದ್ದೇಶದಿಂದ ಪ್ರಕರಣವನ್ನು ಮರಳಿ ಕೆದಕಬೇಕೆಂದು ಸಿಬಿಐ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೋರ್ಟು ತಿರಸ್ಕರಿಸಿದೆ.

14 ವರ್ಷಗಳ ಅಂತರದ ಬಳಿಕ ಮರುಪರಿಶೀಲನಾ ಅರ್ಜಿ ಸಲ್ಲಿಸಿರುವುದಕ್ಕೆ ಸಿಬಿಐ ಹಾಗೂ ಮಧ್ಯಪ್ರದೇಶ ಸರಕಾರ ನೀಡಿರುವ ವಿವರಣೆ ತೃಪ್ತಿದಾಯಕವಾಗಿಲ್ಲ ಎಂದು ಸುಪ್ರೀಂ ಕೋರ್ಟ್‌ ಪೀಠ ಹೇಳಿದೆ.

'ಸೆಪ್ಟೆಂಬರ್ 1996ರಲ್ಲಿ ನೀಡಿದ್ದ ತೀರ್ಪು ಹಾಗೂ ಆದೇಶವು ಆರೋಪಿಗಳ ವಿರುದ್ಧ ಕಠಿಣವಾದ ಆರೋಪ ಹೊರಿಸುವುದಕ್ಕೆ ಸಿಬಿಐ ಹಾಗೂ ಮಧ್ಯಪ್ರದೇಶ ಸರಕಾರಕ್ಕೆ ಎಂದಿಗೂ ಅಡ್ಡಿಯಾಗಿರಲಿಲ್ಲ' ಎಂದು ನ್ಯಾಯಪೀಠ ಹೇಳಿದೆ.

ಪ್ರಪಂಚದಲ್ಲೇ ಅತ್ಯಂತ ದೊಡ್ಡ ಕೈಗಾರಿಕಾ ದುರಂತ ಎಂದು ಕರೆಯಲಾಗುವ ಭೋಪಾಲ ಅನಿಲ ಸೋರಿಕೆಯಿಂದಾಗಿ 15 ಸಾವಿರಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, ಸಾವಿರಾರು ಜನರು ಅಂಗವಿಕಲರಾಗಿದ್ದರು. ಯೂನಿಯನ್ ಕಾರ್ಬೈಡ್ ಸಂಸ್ಥೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದಾದ ಸಾವು ಎಂಬುದರ ಬದಲು, ಕಠಿಣತಮವಾದ 'ಕೊಲೆಗೆ ಕಾರಣವಾಗದ ಸಾಮೂಹಿಕ ನರಮೇಧ'ದ ಆರೋಪ ಹೊರಿಸುವ ಕುರಿತು ನ್ಯಾಯಾಲಯಕ್ಕೆ ಸಲ್ಲಿಸಿದ ಮನವಿಯಲ್ಲಿ ಸಿಬಿಐ ಕೇಳಿಕೊಂಡಿತ್ತು.

1996ರ ಸೆಪ್ಟೆಂಬರ್ ತೀರ್ಪಿಗೆ ಸಂಬಂಧಿಸಿ ಸಿಬಿಐ ಸಲ್ಲಿಸಿರುವ ಮರುಪರಿಶೀಲನಾ ಅರ್ಜಿಯಲ್ಲಿ ತನಗೂ ಮಧ್ಯಪ್ರವೇಶಕ್ಕೆ ಅವಕಾಶ ನೀಡುವಂತೆ ಮಧ್ಯಪ್ರದೇಶ ಸರಕಾರವು ಕೂಡ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ಅಂದು ಕೇವಲ ಕ್ರಿಮಿನಲ್ ನಿರ್ಲಕ್ಷ್ಯದ ಆರೋಪ ಹೊರಿಸಿದ್ದರಿಂದಾಗಿ, ಆರೋಪಿಗಳಿಗೆ ಕೇವಲ 2 ವರ್ಷ ಜೈಲು ಶಿಕ್ಷೆ ಮಾತ್ರ ವಿಧಿಸಲಾಗಿತ್ತು. 2010ರ ಜೂನ್ 7ರಂದು ಶಿಕ್ಷೆಗೆ ಒಳಗಾದವರಲ್ಲಿ ಯೂನಿಯನ್ ಕಾರ್ಬೈಡ್ ಇಂಡಿಯಾ ಮುಖ್ಯಸ್ಥ ಕೇಶುಬ್ ಮಹೇಂದ್ರ ಸಹಿತ ಹಲವರು ಸೇರಿದ್ದರು. ಆದರೆ ಸಂಸ್ಥೆಯ ಮುಖ್ಯಸ್ಥ ಜೇಮ್ಸ್ ಆಂಡರ್ಸನ್ ಅವರನ್ನು ಅಂದು ಮಧ್ಯಪ್ರದೇಶದ ಕಾಂಗ್ರೆಸ್ ಮುಖ್ಯಮಂತ್ರಿಯಾಗಿದ್ದ ಅರ್ಜುನ್ ಸಿಂಗ್ ಹಾಗೂ ಪ್ರಧಾನಿಯಾಗಿದ್ದ ರಾಜೀವ್ ಗಾಂಧಿ ಅವರು ಭಾರತದಿಂದ ತಪ್ಪಿಸಿಕೊಳ್ಳುವಲ್ಲಿ ಸಹಕಾರ ನೀಡಿದ್ದರು ಎಂಬ ಆರೋಪ ಬಲವಾಗಿ ಕೇಳಿಬಂದಿತ್ತು.

ಇತ್ತೀಚೆಗೆ ಭೋಪಾಲ ಸಂತ್ರಸ್ತರು ಕೇಂದ್ರ ಸರಕಾರದ ಮೇಲೆ ಒತ್ತಡವನ್ನು ಹೆಚ್ಚಿಸಿದ್ದರಿಂದಾಗಿ ಪ್ರಕರಣವನ್ನು ಪುನಃ ತೆರೆಯುವ ನಿಟ್ಟಿನಲ್ಲಿ ಸಿಬಿಐ ಕಾರ್ಯೋನ್ಮುಖವಾಗಿತ್ತು.
ಇವನ್ನೂ ಓದಿ