ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸಮೀಕ್ಷೆ ತ.ನಾಡಿಗೆ ಜಯಾ, ಬಂಗಾಳಕ್ಕೆ ಮಮತಾ ಒಡೆತನ (Election 2011 | Tamilnadu | Kerala | West Bengal | Puduchery | Assam)
ನಾಲ್ಕು ರಾಜ್ಯಗಳು ಮತ್ತು 1 ಕೇಂದ್ರಾಡಳಿತ ಪ್ರದೇಶ ಮತ ಮಹಾ ಸಮರದ ಫಲಿತಾಂಶ ಶುಕ್ರವಾರ ಹೊರಬೀಳಲಿರುವಂತೆಯೇ, ಕೆಲವು ರಾಜ್ಯಗಳಲ್ಲಿ ಮೈತ್ರಿಕೂಟ ಮಾಡಿಕೊಂಡಿರುವ ಕಾಂಗ್ರೆಸ್ ಹೊಸ ಸುದ್ದಿಯ ನಿರೀಕ್ಷೆಯಲ್ಲಿದೆ.

ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ, ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಜೊತೆ ಕೈಜೋಡಿಸಿರುವ ಕಾಂಗ್ರೆಸ್ ಪಕ್ಷಕ್ಕೆ ಉತ್ತಮ ಫಲಿತಾಂಶ ಲಭ್ಯವಾಗಲಿದೆ. ಅಂದರೆ ಅಲ್ಲಿ 34 ವರ್ಷಗಳ ಎಡಪಂಥೀಯ ಆಳ್ವಿಕೆ ಮುಕ್ತಾಯವಾಗಿ ಹೊಸ ಶಕೆ ಉದಯವಾಗಲಿದೆ. ಅದೇ ರೀತಿಯಾಗಿ, ಅಸ್ಸಾಂ ಮತ್ತು ಕೇರಳಗಳಲ್ಲಿಯೂ ಕಾಂಗ್ರೆಸ್ ಮೈತ್ರಿಕೂಟವು ಚುನಾವಣೆಯಲ್ಲಿ ವಿಜಯ ಸಾಧಿಸಲಿದೆ ಎಂದು ಹೇಳಿವೆ ಸಮೀಕ್ಷೆಗಳು. ಮಾತ್ರವಲ್ಲದೆ, ಪುದುಚೇರಿ ಕೇಂದ್ರಾಡಳಿತ ಪ್ರದೇಶದಲ್ಲಿಯೂ ಕಾಂಗ್ರೆಸ್ ಅಧಿಕಾರ ಉಳಿಸಿಕೊಳ್ಳಲಿದೆ.

ಆದರೆ, ತಮಿಳುನಾಡಿನಲ್ಲಿ ಡಿಎಂಕೆಯ ಬೆನ್ನೇರಿದ ಕಾಂಗ್ರೆಸ್‌ಗೆ ಈ ಬಾರಿ ದೇಶದ ಅತಿದೊಡ್ಡ ಹಗರಣವಾದ 2ಜಿ ಸ್ಪೆಕ್ಟ್ರಂ ಹಂಚಿಕೆಯು ದೊಡ್ಡ ಆಘಾತವನ್ನೇ ನೀಡಲಿದ್ದು, ಅಲ್ಲಿ ಮಾಜಿ ಮುಖ್ಯಮಂತ್ರಿ ಜಯಲಲಿತಾ ನೇತೃತ್ವದ ಎಐಎಡಿಎಂಕೆ ಮೈತ್ರಿಕೂಟವು ಮೇಲುಗೈ ಸಾಧಿಸಲಿದೆ ಎಂದಿವೆ ಸಮೀಕ್ಷೆಗಳು.

545 ಸದಸ್ಯಬಲದ ಸಂಸತ್ತಿನ ಐದನೇ ಒಂದಂಶವು ಈ ಐದು ರಾಜ್ಯಗಳಿಂದಲೇ ಇರುವುದರಿಂದ ಕೇಂದ್ರದಲ್ಲಿ ಅಧಿಕಾರಾರೂಢವಾಗಿರುವ ಕಾಂಗ್ರೆಸ್‌ಗೆ ಇದೊಂದು ದೊಡ್ಡ ನಿರೀಕ್ಷೆಯೇ ಆಗಿದ್ದು, 2014ರ ಮಹಾ ಚುನಾವಣೆಗಳಿಗೆ ಮುನ್ನುಡಿಯನ್ನೂ ಬರೆಯಲಿದೆ. ಯಾಕೆಂದರೆ, ಕಳೆದ ಚುನಾವಣೆಗಳಲ್ಲಿ ಕೂಡ ಯಾವುದೇ ರಾಷ್ಟ್ರೀಯ ಪಕ್ಷಗಳಿಗೆ ಪೂರ್ಣ ಬಹುಮತ ಲಭಿಸಿಲ್ಲವಾದುದರಿಂದ, ಮೈತ್ರಿಕೂಟ ರಾಜಕೀಯ ಇನ್ನೂ ಮುಂದುವರಿಯುವ ನಿರೀಕ್ಷೆಗಳಿವೆ.

ತಮಿಳುನಾಡಿನಲ್ಲಿ ಕಾಡಾಕಾಡಿ...
ತಮಿಳುನಾಡಿನಲ್ಲಿ 234 ಸ್ಥಾನಗಳಿವೆ. ಬಹುಮತಕ್ಕೆ ಬೇಕಾದ ಸಂಖ್ಯೆ 118. ಆಡಳಿತಾರೂಢ ಡಿಎಂಕೆ ಮೈತ್ರಿಕೂಟದ ಈಗಿರುವ 163ರ ಸಂಖ್ಯಾ ಬಲವು 102ರಿಂದ 114ಕ್ಕೆ ಇಳಿಯುತ್ತದೆ ಎಂದು ಸಿಎನ್ಎನ್-ಐಬಿಎನ್ ಸಮೀಕ್ಷೆ ತಿಳಿಸಿದರೆ, ಆಜ್‌ತಕ್ ಸಮೀಕ್ಷೆ ಪ್ರಕಾರ 115ರಿಂದ 130 ಸ್ಥಾನ ದೊರೆಯುತ್ತದೆ. ಪ್ರತಿಪಕ್ಷ ಎಐಎಡಿಎಂಕೆ ಮೈತ್ರಿಕೂಟದ ಸ್ಥಾನಗಳ ಸಂಖ್ಯೆಯು 69 ಇದೆ. ಅದು 120-132ರವರೆಗೆ ಬರಲಿದೆ ಎಂದು ಸಿಎನ್ಎನ್-ಐಬಿಎನ್ ಹೇಳಿದರೆ, ಆಜ್‌ತಕ್ ಸಮೀಕ್ಷೆ ಪ್ರಕಾರ, 105ರಿಂದ 120 ಸ್ಥಾನಗಳು ಅದಕ್ಕೆ ದೊರೆಯುತ್ತದೆ. ಹೀಗಾಗಿ ತಮಿಳುನಾಡಿನಲ್ಲಿ ಕಾಡಾಕಾಡಿ ಹೋರಾಟವಿದೆ ಎನ್ನಬಹುದು.

ಬಂಗಾಳದಲ್ಲಿ ಎಡರಂಗ ಯುಗಾಂತ್ಯ...
ಕಳೆದ 34 ವರ್ಷಗಳಿಂದ ಎಡಪಂಥೀಯರ ಆಡಳಿತದಡಿ ಇರುವ ಪಶ್ಚಿಮ ಬಂಗಾಳದ ಒಟ್ಟು ಕ್ಷೇತ್ರಗಳ ಸಂಖ್ಯೆ 294. ಬಹುಮತಕ್ಕೆ ಬೇಕಾಗಿರುವುದು 148. ಆಡಳಿತದಲ್ಲಿರುವ ಎಡರಂಗ ಈಗ 233 ಸ್ಥಾನಗಳನ್ನು ಹೊಂದಿದೆ. ತೃಣಮೂಲ ಕಾಂಗ್ರೆಸ್ ಹಾಗೂ ಕಾಂಗ್ರೆಸ್ ಮೈತ್ರಿಕೂಟವು 51 ಸ್ಥಾನಗಳನ್ನು ಹೊಂದಿದೆ.

ಇಲ್ಲಿ ಎಡಪಂಥೀಯರಿಗೆ ಪ್ರಬಲ ಹೊಡೆತ ಬೀಳಲಿದ್ದು, ಸಿಎನ್ಎನ್-ಐಬಿಎನ್ ಸಮೀಕ್ಷೆಯ ಪ್ರಕಾರ, ಅದರ ಸ್ಥಾನಗಳ ಸಂಖ್ಯೆಯು 60-72ರವರೆಗೆ ಇಳಿಯಲಿದೆ. ಆಜ್‌ತಕ್ ಕೂಡ 65-70 ಸ್ಥಾನಗಳು ಅಂತ ಹೇಳಿದೆ. ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಮೈತ್ರಿಕೂಟಕ್ಕೆ ಭರ್ಜರಿ ಬೆಳೆ. ಅದು 222ರಿಂದ 234 ಸ್ಥಾನಗಳನ್ನು ಕಬಳಿಸಲಿದೆ ಎಂದಿದೆ ಸಿಎನ್ಎನ್-ಐಬಿಎನ್ ಸಮೀಕ್ಷೆ. ಆಜ್‌ತಕ್ ಸಮೀಕ್ಷೆ ಪ್ರಕಾರ ಅದಕ್ಕೆ ದೊರೆಯುವ ಸ್ಥಾನಗಳ ಸಂಖ್ಯೆ 210-220.

ಅಸ್ಸಾಂನಲ್ಲಿ ಕಾಂಗ್ರೆಸ್ ಮೇಲುಗೈ...
126 ಕ್ಷೇತ್ರಗಳಿರುವ ಅಸ್ಸಾಂನಲ್ಲಿ ಆಡಳಿತಾರೂಢ ಕಾಂಗ್ರೆಸ್ ಅಧಿಕಾರ ಉಳಿಸಿಕೊಳ್ಳಲಿದೆ. 53 ಸ್ಥಾನ ಹೊಂದಿರುವ ಅದು 64-72 ಸ್ಥಾನ ಗಳಿಸುತ್ತದೆ ಎಂದು ಸಿಎನ್ಎನ್-ಐಬಿಎನ್ ಸಮೀಕ್ಷೆ ಹೇಳಿದರೆ, ಆಜ್‌ತಕ್ ಪ್ರಕಾರ ಅದು 41-47 ಸ್ಥಾನ ಪಡೆಯಲಿದೆ.

24 ಸ್ಥಾನ ಹೊಂದಿರುವ ಅಸ್ಸಾಂ ಗಣ ಪರಿಷತ್ ಅನುಕ್ರಮವಾಗಿ ಸಿಎನ್ಎನ್-ಐಬಿಎನ್ ಮತ್ತು ಆಜ್‌ತಕ್ ಚಾನೆಲ್‌ಗಳ ಪ್ರಕಾರ 16-22 ಮತ್ತು 31-35, 10 ಸ್ಥಾನ ಹೊಂದಿರುವ ಬಿಜೆಪಿಗೆ 7-11 ಮತ್ತು 16-18, 10 ಸ್ಥಾನ ಇರುವ ಎಯುಡಿಎಫ್‌ಗೆ 11-17 ಮತ್ತು 13-15 ಸ್ಥಾನಗಳು ದೊರೆಯಲಿವೆ.

ಕೇರಳದಲ್ಲಿ ಕೂಡ ಪ್ರಬಲ ಹೋರಾಟ...
140 ಸ್ಥಾನಗಳಿರುವ ಕೇರಳದಲ್ಲಿ ಎಡರಂಗ 98 ಸ್ಥಾನಗಳನ್ನೂ, ಕಾಂಗ್ರೆಸ್ ನೇತೃತ್ವದ ಐಕ್ಯರಂಗ 42 ಸ್ಥಾನಗಳನ್ನೂ ಹೊಂದಿದೆ. ಅನುಕ್ರಮವಾಗಿ ಸಿಎನ್ಎನ್-ಐಬಿಎನ್ ಹಾಗೂ ಆಜ್‌ತಕ್ ಸಮೀಕ್ಷೆಗಳ ಪ್ರಕಾರ ಈ ಸಂಖ್ಯೆಯು ಎಡರಂಗಕ್ಕೆ 69-77 ಹಾಗೂ 45-52, ಐಕ್ಯರಂಗಕ್ಕೆ 63-71 ಮತ್ತು 85-92 ಸ್ಥಾನಗಳು ಲಭ್ಯವಾಗಲಿವೆ.

ಕರ್ನಾಟಕದ ಮೂರು ಕ್ಷೇತ್ರಗಳ ಸಹಿತ ಈ ರಾಜ್ಯಗಳ ಪೂರ್ಣ ಫಲಿತಾಂಶವು ಶುಕ್ರವಾರ ಸಾಯಂಕಾಲದೊಳಗೆ ಬಹಿರಂಗವಾಗಲಿದೆ.
ಇವನ್ನೂ ಓದಿ