ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪಿಎಸಿ ಅಧ್ಯಕ್ಷ ಜೋಷಿ ಕ್ಷಮೆ ಯಾಚಿಸಲಿ: ಕಾಂಗ್ರೆಸ್ ಒತ್ತಾಯ
(PAC | Murli Manohar Joshi | Congress | Jayanthi Natarajan)
ಪಿಎಸಿ ಅಧ್ಯಕ್ಷ ಜೋಷಿ ಕ್ಷಮೆ ಯಾಚಿಸಲಿ: ಕಾಂಗ್ರೆಸ್ ಒತ್ತಾಯ
ನವದೆಹಲಿ, ಗುರುವಾರ, 12 ಮೇ 2011( 15:19 IST )
ಬಾಯಿಗೆ ಬಂದ ಹಾಗೆ ರಾಜಕೀಯ ಮಾತನಾಡುವ ಮೂಲಕ ಮುರಳಿ ಮನೋಹರ ಜೋಷಿ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ವಿಶ್ವಾಸಾರ್ಹತೆಯನ್ನೇ ಹಾಳುಗೆಡಹಿದ್ದಾರೆ ಎಂದು ಆಪಾದಿಸಿರುವ ಕಾಂಗ್ರೆಸ್, ಅವರು ಸಂಸತ್ತಿನ ಹಾಗೂ ಲೋಕಸಭಾಧ್ಯಕ್ಷರ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದೆ. ಇದಲ್ಲದೆ, ಈ ಸಂಸದೀಯ ಸಮಿತಿಗೆ ಜೋಷಿಯವರ ನೇತೃತ್ವದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವ ಬಗೆಗೂ ಕಾಂಗ್ರೆಸ್ ಯೋಚಿಸುತ್ತಿದೆ.
ತಮ್ಮ ನೇತೃತ್ವದ ಪಿಎಸಿಯನ್ನು ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು ತನ್ನ 'ಕೈಗೊಂಬೆ'ಯಂತೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿದೆ ಎಂಬ ಜೋಷಿ ಅವರ ಆರೋಪವನ್ನು 'ಪಿಎಸಿ ಶವಪೆಟ್ಟಿಗೆಗೆ ಹೊಡೆದ ಕೊನೆಯ ಮೊಳೆ' ಎಂದು ಕಾಂಗ್ರೆಸ್ ಟೀಕಿಸಿದೆ. 'ಸಮಿತಿಗೆ ಅವರ ಅಧ್ಯಕ್ಷತೆ ಬಗ್ಗೆ ವಿಶ್ವಾಸವಿಡಲು ಸಾಧ್ಯವೇ ಎಂಬ ಅನುಮಾನ ನಮಗೆ ಮೂಡಿದೆ. ಈ ರೀತಿಯ ಬಹಿರಂಗ ಹೇಳಿಕೆಗಳ ಮೂಲಕ ಅವರು ತಮ್ಮ ಸ್ಥಾನಕ್ಕೇ ಚ್ಯುತಿಯುಂಟು ಮಾಡಿದ್ದಾರೆ. ನಾವು ಈ ವಿಷಯವನ್ನು ಸಮಿತಿಯ ಸಭೆಯಲ್ಲಿ ಪ್ರಸ್ತಾಪಿಸುತ್ತೇವೆ' ಎಂದು ಕಾಂಗ್ರೆಸ್ ವಕ್ತಾರೆ ಜಯಂತಿ ನಟರಾಜನ್ ಹೇಳಿದ್ದಾರೆ.
2G ಹಗರಣದ ಕುರಿತು ತನಿಖೆ ನಡೆಸಿದ್ದ ಪಿಎಸಿ ವರದಿಗೆ ಸಂಬಂಧಿಸಿ ಪತ್ರಿಕಾಗೋಷ್ಠಿಗಳಲ್ಲಿ ಕಾಂಗ್ರೆಸ್ ಮೇಲೆ ಆಪಾದನೆಗಳನ್ನು ಮಾಡಿರುವ ಜೋಷಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವ ಅಥವಾ ಸ್ಪೀಕರ್‌ಗೆ ದೂರು ನೀಡುವ ಕುರಿತು ಕಾಂಗ್ರೆಸ್ ಚಿಂತಿಸುತ್ತಿದೆ ಎಂದು ಅವರು ಹೇಳಿದ್ದಾರೆ.
ಕಾಂಗ್ರೆಸ್ ಸಂಸದರ ವಿರೋಧದ ಹಿನ್ನೆಲೆಯಲ್ಲಿ ಪಿಎಸಿ ಸಭೆಯನ್ನು ಮುಂದೂಡಿದ್ದ ಜೋಷಿ, ವರದಿಯನ್ನು ಸ್ಪೀಕರ್‌ಗೆ ಸಲ್ಲಿಸಿದ್ದರು. ವರದಿಯನ್ನು ಸ್ವೀಕರಿಸುವಂತೆಯೂ ಸ್ಪೀಕರ್ ಅವರಿಗೆ ಒತ್ತಾಯಿಸಿದ್ದರು. ಆದರೆ 'ಕರಡು ವರದಿ' ಸಮಿತಿಯಲ್ಲೇ ಅಂಗೀಕಾರವಾಗಿಲ್ಲ, ಹೀಗಾಗಿ ಸ್ಪೀಕರ್ ಅದನ್ನು ಸ್ವೀಕರಿಸಬಾರದು ಎಂದು ಕಾಂಗ್ರೆಸ್ ವಾದ ಮಾಡಿತ್ತು.
ಪ್ರತಿ ಪಿಎಸಿ ಸಭೆ ನಡೆದ ಬಳಿಕವೂ ಪತ್ರಿಕಾಗೋಷ್ಠಿ ನಡೆಸಿ ಮಾಧ್ಯಮಗಳಿಗೆ ವಿವರ ನೀಡಿದ ಜೋಷಿ ಅವರು ಸಮಿತಿಯ ವಿಶ್ವಾಸಾರ್ಹತೆಯನ್ನು ಹಾಳುಮಾಡಿದ್ದಾರೆ ಎಂದು ಜಯಂತಿ ಆಪಾದಿಸಿದರು. 'ಜೋಷಿ ಅವರು ಸಮಿತಿಯ ಅಧ್ಯಕ್ಷರಾಗಿ ವರ್ತಿಸದೇ ಬಿಜೆಪಿ ಮುಖಂಡರಂತೆ ವರ್ತಿಸಿರುವುದು ರಾಜಕೀಯ ದುರಂತ' ಎಂದು ಹೇಳಿದರು.