ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಈ 'ಕೀಳು ನಾಟಕ'ವೆಲ್ಲಾ ನಡೆಯೋಲ್ಲ: ರಾಹುಲ್‌ಗೆ ಮಾಯಾ (Mayawati, Rahul Gandhi, Farmer Agitation, UP, Congress, Noida)
PTI
ಭೂಸ್ವಾಧೀನದ ಬಗ್ಗೆ ವದಂತಿಗಳನ್ನು ಹಬ್ಬಿಸಿ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತರುವ ಕಾಂಗ್ರೆಸ್ ಮತ್ತು ಇತರ ಪಕ್ಷಗಳ ಸಂಚನ್ನು ಖಂಡಿಸಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯಾವತಿ, ಗ್ರೇಟರ್ ನೋಯ್ಡಾದಲ್ಲಿ ರಾಹುಲ್ ಗಾಂಧಿ ನಡೆಸಿದ ಧರಣಿ 'ಕೀಳುಮಟ್ಟದ ನಾಟಕ' ಎಂದು ಬಣ್ಣಿಸಿದ್ದಾರಲ್ಲದೆ, ಈ ಬಂಧಿಸಲಾಗಿರುವ ಸಮಾಜದ್ರೋಹಿ ಶಕ್ತಿಗಳ ಬಿಡುಗಡೆಗಾಗಿ ಕಾಂಗ್ರೆಸ್ ಸಹಿತ ಪ್ರತಿಪಕ್ಷಗಳು ಮಾಡುತ್ತಿರುವ ನಾಟಕವೆಲ್ಲಾ ತನ್ನ ಬಳಿ ನಡೆಯುವುದಿಲ್ಲ ಎಂದು ಗುಡುಗಿದ್ದಾರೆ.

ಗ್ರೇಟರ್ ನೋಯ್ಡಾದ ಭಟ್ಟಾ ಪರ್ಸಾವುಲ್‌ನಲ್ಲಿ ನಡೆದ ಘರ್ಷಣೆಗೂ ಭೂಸ್ವಾಧೀನದ ಪರಿಹಾರಕ್ಕೂ ಯಾವುದೇ ಸಂಬಂಧ ಇಲ್ಲ. ಪ್ರತಿಪಕ್ಷಗಳು ಸುಳ್ಳುಗಳನ್ನು, ವದಂತಿಗಳನ್ನು ಹರಡುತ್ತಾ ಜನರನ್ನು ದಾರಿ ತಪ್ಪಿಸುತ್ತಿವೆ. ಭಟ್ಟಾ ಪರ್ಸಾವುಲ್‌ನ ಘಟನೆಯು ಅವುಗಳ ಹೀನ ರಾಜಕೀಯಕ್ಕೆ ಸಾಕ್ಷಿ ಎಂದು ಮಾಯಾವತಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ರಾಹುಲ್ ತನ್ನ ಪಕ್ಷದಲ್ಲೇ ಧರಣಿ ಮಾಡಲಿ...
ರೈತರ ಭೂಸ್ವಾಧೀನ ಕುರಿತು 'ಯುವರಾಜ' ರಾಹುಲ್ ಏನೇ ಮಾಡುವುದಿದ್ದರೂ, ಅದನ್ನು ಅವರ ಪಕ್ಷದೊಳಗೇ ಮಾಡಿಕೊಳ್ಳಲಿ. ಯಾಕೆಂದರೆ ಈ ಕುರಿತ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯವಿರುವುದು ಕಾಂಗ್ರೆಸ್ ನೇತೃತ್ವದ ಕೇಂದ್ರದ ಕೈಯಲ್ಲಿ. ಅವರ ಮನೆಯಲ್ಲೇ ಅವರ ಮಾತು ಯಾರೂ ಕೇಳುತ್ತಿಲ್ಲ, ಹತಾಶೆಯಿಂದಾಗಿ ಇಲ್ಲಿ ಬಂದು ಕೀಳುಮಟ್ಟದ ನಾಟಕ ಮಾಡುತ್ತಿದ್ದಾರೆ ಎಂದು ಮಾಯಾವತಿ ಟೀಕಿಸಿದರು.

ಪರಿಹಾರ ನೀಡಲಾಗಿದೆ...
ಯಮುನಾ ಮತ್ತು ಗಂಗಾ ಎಕ್ಸ್‌ಪ್ರೆಸ್ ಹೆದ್ದಾರಿಗಳಿಗಾಗಿ ಜಮೀನು ನೀಡಲಾಗುತ್ತಿದೆ ಎಂಬ ವದಂತಿ ಹರಡಲಾಗುತ್ತಿದೆ. ಇದು ಸಂಪೂರ್ಣ ಸುಳ್ಳು. ಭೂಸ್ವಾಧೀನವಾಗಿದ್ದು ಗ್ರೇಟರ್ ನೋಯ್ಡಾ ಅಭಿವೃದ್ಧಿಗಾಗಿ. ರೈತರು 2009ರಲ್ಲೇ ತಮ್ಮ ಜಮೀನನ್ನು ಗ್ರೇಟರ್ ನೋಯ್ಡಾ ಪ್ರಾಧಿಕಾರಕ್ಕೆ ನೀಡಿದ್ದಾರೆ ಮತ್ತು ಪರಿಹಾರವನ್ನೂ ಪಡೆದಿದ್ದಾರೆ ಎಂದು ಮಾಯಾವತಿ ವಿವರಿಸಿದರು. ಹೀಗಾಗಿ ಇದರಿಂದಲೇ ಕಾಂಗ್ರೆಸ್‌ನ ಈ ಕುತಂತ್ರ ಬಯಲಾಗುತ್ತದೆ ಎಂದಿದ್ದಾರೆ ಮಾಯಾವತಿ.

ಸಮಾಜದ್ರೋಹಿಗಳ ಬಿಡುಗಡೆ ಇಲ್ಲ...
ಭಟ್ಟಾ ಪರ್ಸಾವುಲ್‌ನಲ್ಲಿ ಪ್ರತಿಪಕ್ಷಗಳು ಸಮಾಜವಿರೋಧಿ ಶಕ್ತಿಗಳಿಗೆ ಆಯುಧಗಳನ್ನು ಒದಗಿಸಿದ ಸಂಚು ಬಯಲಾಗುತ್ತಿದ್ದಂತೆಯೇ, ಅವುಗಳು ಈ ಘಟನೆಗೂ ಪರಿಹಾರಕ್ಕೂ ಸಂಬಂಧ ಕಲ್ಪಿಸಿ ಸುಳ್ಳು ಸುದ್ದಿ ಹರಡಲು ಆರಂಭಿಸಿದವು. ಕಾಂಗ್ರೆಸ್ ಮಾಡಿದ ಎಲ್ಲ 'ನಾಟಕ'ಗಳೂ ಸಮಾಜವಿರೋಧಿ ಶಕ್ತಿಗಳನ್ನು ಬಿಡುಗಡೆ ಮಾಡಿಸುವ ಉದ್ದೇಶ ಹೊಂದಿವೆ. ಆದರೆ, ನಾನೇನೂ ಇಂತಹಾ ಒತ್ತಡಕ್ಕೆ ಮಣಿಯಲಾರೆ, ಸಮಾಜವಿರೋಧಿಗಳನ್ನು ಎಂದಿಗೂ ಬಿಡುಗಡೆ ಮಾಡುವುದಿಲ್ಲ ಎಂದು ಮಾಯಾ ನುಡಿದರು.

ರಾಜ್ಯವು ಸೂಕ್ತ ಪರಿಹಾರ ನೀತಿಯನ್ನು ಸಿದ್ಧಪಡಿಸುವಂತೆ ಎಷ್ಟು ಬಾರಿ ಕೇಂದ್ರವನ್ನು ಕೇಳಿಕೊಂಡರೂ ಅದು ಕಿವಿಗೆ ಹಾಕಿಕೊಂಡಿಲ್ಲ. ಹೀಗಾಗಿ ರಾಜ್ಯ ಸರಕಾರವೇ ಪರಿಹಾರ ನೀತಿಯೊಂದನ್ನು ರೂಪಿಸಿತ್ತು. ಆದರೆ, ಈಗ ಅದರ ಪ್ರಕಾರ ಪರಿಹಾರ ವಿತರಿಸಲು ಕೇಂದ್ರವು ಸಿದ್ಧವಿಲ್ಲ ಎಂದ ಮಾಯಾವತಿ, ಪ್ರತಿಪಕ್ಷಗಳಿಗೆ ನಿಜಕ್ಕೂ ರೈತರ ಮೇಲೆ ಕಾಳಜಿ ಇದ್ದರೆ, ಸೂಕ್ತ ಪರಿಹಾರ ನೀತಿ ಜಾರಿಗೊಳಿಸುವಂತೆ ಕೇಂದ್ರದ ಮೇಲೆ ಒತ್ತಡ ತರಲಿ ಎಂದು ಸವಾಲು ಹಾಕಿದರು.

ಸೋನಿಯಾ ಕ್ಷೇತ್ರದಲ್ಲೇ ಕೇಂದ್ರದಿಂದ ಇನ್ನೂ ಪರಿಹಾರ ಬಂದಿಲ್ಲ
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯ ರಾಯ್ ಬರೇಲಿ ಸಂಸದೀಯ ಕ್ಷೇತ್ರದಲ್ಲೇ ಇರುವ ಲಾಲ್‌ಗಂಜ್ ಕೋಚ್ ಫ್ಯಾಕ್ಟರಿಗಾಗಿ ಸ್ವಾಧೀನಪಡಿಸಿಕೊಂಡ ಭೂಮಿಗೆ ಕೇಂದ್ರವು ರೈತರಿಗೆ ಇನ್ನೂ ಪರಿಹಾರ ವಿತರಿಸಿಲ್ಲ ಎಂದವರು ಹೇಳಿದರು.

ರಾಹುಲ್, ರಾಜನಾಥ್, ರಾಮ್ ವಿಲಾಸ್ ಬಂಧನ...
ಇದಕ್ಕೆ ಮೊದಲು, ಗ್ರೇಟರ್ ನೋಯ್ಡಾ ಪ್ರದೇಶದಲ್ಲಿ 156 ಕಿ.ಮೀ. ಉದ್ದದ ಯಮುನಾ ಎಕ್ಸ್‌ಪ್ರೆಸ್ ವೇ ಕಾಮಗಾರಿಗಾಗಿ ಭೂಸ್ವಾಧೀನ ಮಾಡಿರುವ ಜಮೀನಿಗೆ ಹೆಚ್ಚಿನ ಪರಿಹಾರ ನೀಡುವಂತೆ ಒತ್ತಾಯಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದಿರುವ ಕಾಂಗ್ರೆಸ್ ಸಹಿತ ಪ್ರತಿಪಕ್ಷಗಳು, ಇದನ್ನೊಂದು ರಾಜಕೀಯ ಮೇಲಾಟಕ್ಕಾಗಿ ವೇದಿಕೆಯನ್ನಾಗಿ ಮಾಡಿಕೊಂಡಿದ್ದು, ಹಲವರು ಬಂಧನಕ್ಕೊಳಗಾಗಿದ್ದಾರೆ.

ಮುಂದಿನ ವರ್ಷ ಉತ್ತರ ಪ್ರದೇಶದಲ್ಲಿ ಚುನಾವಣೆಗಳು ನಡೆಯಲಿದ್ದು, ಬಿಎಸ್ಪಿ ಅಧ್ಯಕ್ಷೆ, ಮುಖ್ಯಮಂತ್ರಿ ಮಾಯಾವತಿಯನ್ನು ಕೆಳಗಿಳಿಸಲು ಮತ್ತು ರೈತರನ್ನು ಓಲೈಸುವ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳು ಮುಂದಾಗಿದ್ದು, ಬುಧವಾರ ಬೆಳಿಗ್ಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಅವರು ಬೈಕಿನಲ್ಲಿ ಪ್ರತಿಭಟನಾ ನಿರತ ರೈತರ ಬಳಿಗೆ ತೆರಳಿ ಬಂಧನಕ್ಕೊಳಗಾಗಿದ್ದಾರೆ. 18 ತಾಸುಗಳ ಬಂಧನದ ಬಳಿಕ ಅವರನ್ನು ಗುರುವಾರ ಮುಂಜಾವ 2 ಗಂಟೆ ಸುಮಾರಿಗೆ ಬಿಡುಗಡೆಗೊಳಿಸಿ ದೆಹಲಿಗೆ ಮರಳಿ ಕಳುಹಿಸಲಾಗಿದೆ.

ಈ ಮಧ್ಯೆ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್, ಉ.ಪ್ರ. ಕಾಂಗ್ರೆಸ್ ಅಧ್ಯಕ್ಷೆ ರೀಟಾ ಬಹುಗುಣ, ಸಂಸದ ರಾಜ್ ಬಬ್ಬರ್, ಬಿಜೆಪಿ ಮಾಜಿ ಅಧ್ಯಕ್ಷ ರಾಜನಾಥ್ ಸಿಂಗ್, ಹಿರಿಯ ನಾಯಕ ಅರುಣ್ ಜೇಟ್ಲಿ, ಲೋಕ ಜನ ಶಕ್ತಿ ಪಕ್ಷದ ಮುಖಂಡ ರಾಮ್ ವಿಲಾಸ್ ಪಾಸ್ವಾನ್ ಕೂಡ ರೈತರ ಪರವಾಗಿ ಪ್ರತಿಭಟನೆಗಿಳಿದಿದ್ದು, ಗುರುವಾರ ಅಲ್ಲಿನ ಪೊಲೀಸರಿಂದ ಬಂಧಿಸಲ್ಪಟ್ಟಿದ್ದಾರೆ.

ಭಾರತೀಯ ಅನ್ನಿಸಿಕೊಳ್ಳಲು ನಾಚಿಕೆ: ರಾಹುಲ್...
ರೈತರು ಪರಿಹಾರಕ್ಕಾಗಿ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂಬ ವಿಷಯವು ರಾಜಕೀಯ ಪಕ್ಷಗಳನ್ನು ಆಕರ್ಷಿಸಿದ್ದು, ಪ್ರತಿಭಟನಾ ನಿರತರ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳ ಕಣ್ಣುಗಳು ರೈತರತ್ತ ಹೊರಳಿದ್ದು, ರಾಹುಲ್ ಗಾಂಧಿಯವರಂತೂ, "ಉತ್ತರ ಪ್ರದೇಶ ಸರಕಾರದ ಈ ದಬ್ಬಾಳಿಕೆಯ ವರ್ತನೆಯನ್ನು ನೋಡಿ, ನನಗೆ ಭಾರತೀಯ ಎಂದು ಹೇಳಿಕೊಳ್ಳುವುದಕ್ಕೇ ನಾಚಿಕೆಯಾಗುತ್ತಿದೆ" ಎಂದು ರೈತರ ಸಭೆಯಲ್ಲಿ ಘರ್ಜಿಸಿ ಕೋಲಾಹಲವನ್ನೇ ಸೃಷ್ಟಿಸಿದ್ದಾರೆ.

ಉತ್ತರ ಪ್ರದೇಶದ ವಿವಿಧೆಡೆ ರಾಹುಲ್ ಗಾಂಧಿಯ ಬಂಧನ ಖಂಡಿಸಿ ಮತ್ತು ಮಾಯಾವತಿ ಸರಕಾರದ ರಾಜೀನಾಮೆ ಆಗ್ರಹಿಸಿ ಕಾಂಗ್ರೆಸಿಗರು ಪ್ರತಿಭಟನೆ ನಡೆಸತೊಡಗಿದ್ದು, ಹಲವು ಜಿಲ್ಲೆಗಳಲ್ಲಿ ಪೊಲೀಸರು ಹಲವಾರು ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸುತ್ತಿದ್ದಾರೆ.
ಇವನ್ನೂ ಓದಿ