ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕೇರಳ: 1 ಸ್ಥಾನದ ಅಂತರದಿಂದ ಐಕ್ಯರಂಗಕ್ಕೆ ಅಧಿಕಾರಕ್ಕೆ (Kerala Election Result 2011 | LDF | UDF | Congress | Left Front)
ಉತ್ತರದ "ಕೆಂಪು" ಕೋಟೆಯು ಮಮತಾ ಬ್ಯಾನರ್ಜಿಯೆಂಬ ಬೆಂಕಿ ಚೆಂಡಿನಿಂದಾಗಿ ಧ್ವಂಸಗೊಂಡಿದ್ದರೆ, ದಕ್ಷಿಣದ "ಕೆಂಪು" ಕೋಟೆಯಲ್ಲಿ ಮತ ಎಣಿಕೆಯ ಕೊನೆ ಕ್ಷಣದವರೆಗೂ ಹಲವು ರೋಚಕ ಘಟ್ಟಗಳನ್ನು ಕಂಡ ಬಳಿಕ, ಕೊನೆಗೂ ಕಾಂಗ್ರೆಸ್ ನೇತೃತ್ವದ ಐಕ್ಯರಂಗ (ಯುಡಿಎಫ್) 2 ಮತಗಳ ಅಂತರದಿಂದ ಮೇಲುಗೈ ಸಾಧಿಸಿತು. ಐಕ್ಯರಂಗಕ್ಕೆ 72 ಕ್ಷೇತ್ರಗಳು ಲಭ್ಯವಾಗಿದ್ದರೆ, ಎಡರಂಗವು 68 ಸ್ಥಾನಗಳಲ್ಲಿ ತೃಪ್ತಿಪಟ್ಟುಕೊಳ್ಳಬೇಕಾಯಿತು. ಬಹುಮತಕ್ಕೆ ಬೇಕಾಗಿರುವುದು 71 ಸ್ಥಾನ. ಹೀಗಾಗಿ ಅತ್ಯಲ್ಪ ಸರಳ ಬಹುಮತದೊಂದಿಗೆ ಕಾಂಗ್ರೆಸ್ ನೇತೃತ್ವದ ಐಕ್ಯರಂಗವು ಅಧಿಕಾರಕ್ಕೇರಿದೆ.

ಆದರೆ ಬಿಜೆಪಿ ನಾಯಕರು ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದ ಬಿಜೆಪಿಗೆ ಕೇರಳವು ಇನ್ನೂ ಒಲಿಯಲಿಲ್ಲ. ಇದೇ ವೇಳೆ, ದೇವೇಗೌಡರ ಜಾತ್ಯತೀತ ಜನತಾ ದಳವು ಕೂಡ 4 ಸ್ಥಾನಗಳನ್ನು ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಅದು ಎಡರಂಗ ಮೈತ್ರಿಕೂಟದಲ್ಲಿ ಸೇರಿಕೊಂಡಿದೆ.

ಕಾಂಗ್ರೆಸ್ ನೇತೃತ್ವದ ಯುಡಿಎಫ್ ಹಾಗೂ ಸಿಪಿಎಂ ನೇತೃತ್ವದ ಎಲ್‌ಡಿಎಫ್ ನಡುವೆ ಕತ್ತು ಕತ್ತಿನ ಹೋರಾಟ ಕಂಡ ಈ ನಾಡಿನಲ್ಲಿ, ಸಿಪಿಎಂ ಮುಖ್ಯಮಂತ್ರಿ ವಿ.ಎಸ್.ಅಚ್ಯುತಾನಂದನ್ ಹಾಗೂ ಮುಖ್ಯಮಂತ್ರಿ ಅಭ್ಯರ್ಥಿ, ಕಾಂಗ್ರೆಸಿನ ಊಮನ್ ಚಾಂಡಿ ಅವರು ಭರ್ಜರಿ ಅಂತರದಿಂದ ವಿಜಯ ಸಾಧಿಸಿದ್ದಾರೆ.

ಅಚ್ಯುತಾನಂದನ್ ಅವರು ಮಲಂಪುರ ಕ್ಷೇತ್ರದಲ್ಲಿ 13 ಸಾವಿರ ಅಂತರದಿಂದ ಜಯಿಸಿದ್ದಾರೆ. 2006ದಲ್ಲಿ ಅವರ ವಿಜಯದ ಅಂತರ 20 ಸಾವಿರ ಮತಗಳು. ಅದೇ ರೀತಿ, 1970ರಿಂದೀಚೆಗೆ ಒಂದೇ ಒಂದು ಚುನಾವಣೆಯಲ್ಲಿಯೂ ಸೋಲು ಕಾಣದ ಚಾಂಡಿ ಅವರು ಪೂತುಪಳ್ಳಿ ಕ್ಷೇತ್ರದಿಂದ 32 ಸಾವಿರ ಮತಗಳಿಂದ ಗೆದ್ದಿದ್ದಾರೆ. ಅವರಿಗೆ ಇದು ಸತತ 9ನೇ ಗೆಲುವು.

ಕೇರಳ ಮಾಜಿ ಮುಖ್ಯಮಂತ್ರಿ ಕೆ.ಕರುಣಾಕರನ್ ಪುತ್ರ ಕೆ.ಮುರಳೀಧರನ್ ಅವರು ತಮ್ಮ ಮೊದಲ ಅಸೆಂಬ್ಲಿ ಚುನಾವಣೆಯನ್ನು ಗೆದ್ದುಕೊಂಡಿದ್ದಾರೆ. ವಟ್ಟಿಯೂರುಕ್ಕಾವು ಕ್ಷೇತ್ರದಲ್ಲಿ ಅವರು ಆಡಳಿತದ ಸಿಪಿಎಂ ಬೆಂಬಲಿತ ಪಕ್ಷೇತರ ಚೆರಿಯನ್ ಫಿಲಿಪ್ ವಿರುದ್ಧ 10 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. 2009 ಮತ್ತು 2004ರ ಚುನಾವಣೆಗಳಲ್ಲಿ ಅವರು ಸೋಲನ್ನಪ್ಪಿದ್ದರು. 2005ರಲ್ಲಿ ಪಕ್ಷದಿಂದ ಉಚ್ಚಾಟಿಸಲ್ಪಟ್ಟಿದ್ದ ಅವರು 2010ರಲ್ಲಿ ತಂದೆ ಕರುಣಾಕರನ್ ನಿಧನದ ಬಳಿಕ ಕಾಂಗ್ರೆಸ್‌ಗೆ ಮರಳಿದ್ದರು.

2006ರ ಚುನಾವಣೆಗಳಲ್ಲಿ 140ರಲ್ಲಿ 98 ಸ್ಥಾನಗಳನ್ನು ಬಾಚಿಕೊಂಡಿದ್ದ ಎಡರಂಗ (ಎಡ ಪಕ್ಷಗಳ ಒಕ್ಕೂಟ) ಅಧಿಕಾರಕ್ಕೇರಿತ್ತು (ಇದು 2001ರ ಚುನಾವಣೆಯ ಫಲಿತಾಂಶದ ಬಹುತೇಕ ರಿವರ್ಸ್!). 2009ರ ಲೋಕಸಭಾ ಚುನಾವಣೆಗಳಲ್ಲಿ ಎಡಪಕ್ಷಗಳು 20ರಲ್ಲಿ ಕೇವಲ 4 ಸ್ಥಾನ ಗೆಲ್ಲುವಲ್ಲಿ ಶಕ್ತವಾಗಿದ್ದ ಕಾರಣ, ಹೀನಾಯ ಹಿನ್ನಡೆ ಅನುಭವಿಸಿದ್ದವು. ಕಾಂಗ್ರೆಸ್ ನೇತೃತ್ವದ ಐಕ್ಯರಂಗವೇ 16 ಲೋಕಸಭಾ ಸ್ಥಾನಗಳನ್ನು ಗೆದ್ದುಕೊಂಡಿತ್ತು. ಕಳೆದ ವರ್ಷ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿಯೂ ಎಲ್‌ಡಿಎಫ್ (ಎಡರಂಗ) ಹೀನಾಯ ಹಿನ್ನಡೆ ಅನುಭವಿಸಿತ್ತು.

ಈ ರಾಜ್ಯದ ಮತದಾರರು ಒಮ್ಮೆ ಐಕ್ಯರಂಗಕ್ಕೂ, ಮತ್ತೊಮ್ಮೆ ಎಡರಂಗಕ್ಕೂ ಅವಕಾಶ ಕೊಡುವ ಮೂಲಕ ಬದಲಾವಣೆಗೆ ಕಟ್ಟುಬಿದ್ದಿರುವುದು ಇತಿಹಾಸ ಕೆದಕಿದರೆ ತಿಳಿದುಬರುವ ಅಂಶ.
ಇವನ್ನೂ ಓದಿ