ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಜಗನ್‌ಗೆ 5.44 ಲಕ್ಷ ಅಂತರದ ಜಯ: ಉಳಿದೆಲ್ಲರಿಗೆ ಠೇವಣಿ ನಷ್ಟ (By Election Results 2011 | Kadapa | Jagan Reddy | Congress | Vijayalaxmi | Pulivendula | YSR)
ಮುಖ್ಯಮಂತ್ರಿ ಪಟ್ಟ ಕೊಡಲಿಲ್ಲವೆಂಬ ಕಾರಣಕ್ಕೆ ಕಾಂಗ್ರೆಸ್‌ನಿಂದ ಸಿಡಿದು ಹೊರಬಂದು ತಮ್ಮದೇ ಆದ ವೈಎಸ್ಆರ್ ಕಾಂಗ್ರೆಸ್ ಪಕ್ಷ ಕಟ್ಟಿ, ಮರಳಿ ಚುನಾವಣಾ ಕಣಕ್ಕೆ ಧುಮುಕಿದ ಮಾಜಿ ಮುಖ್ಯಮಂತ್ರಿ ವೈ.ಎಸ್.ರಾಜಶೇಖರ ರೆಡ್ಡಿ ಪುತ್ರ ಜಗನ್ ಮೋಹನ್ ರೆಡ್ಡಿ ಅವರು ಕಡಪಾ ಲೋಕಸಭಾ ಕ್ಷೇತ್ರದಿಂದ ಹೊಸ ದಾಖಲೆಯನ್ನೇ ಬರೆದು ಜಯ ಗಳಿಸಿದ್ದಾರೆ.

5 ಲಕ್ಷದ 43 ಸಾವಿರದ 53 ಮತಗಳ ಅಂತರದಿಂದ ವಿಜಯ ಸಾಧಿಸಿರುವ ಅವರು, ಎದುರಾಳಿಗಳೆಲ್ಲರೂ ಠೇವಣಿ ಕಳೆದುಕೊಳ್ಳುವಂತೆ ಮಾಡಿದ್ದಾರೆ. ಅತ್ತ ವಿಧಾನಸಭಾ ಉಪಚುನಾವಣೆಯಲ್ಲಿ ಜಗನ್ ತಾಯಿ ವಿಜಯಲಕ್ಷ್ಮಿ ಕೂಡ ಪುಲಿವೇಂದುಲದಲ್ಲಿ 85,191 ಮತಗಳ ಅಂತರದಿಂದ ಜಯ ಸಾಧಿಸಿ, ಎದುರಾಳಿ ಕಾಂಗ್ರೆಸ್ ಮತ್ತು ಟಿಡಿಪಿ ಅಭ್ಯರ್ಥಿಗಳನ್ನು ಠೇವಣಿ ಕಳೆದುಕೊಳ್ಳುವಂತೆ ಮಾಡಿದ್ದಾರೆ. ಇದು ಕೂಡ ಪುಲಿವೇಂದುಲದ ದಾಖಲೆ ಅಂತರದ ವಿಜಯವಾಗಿದೆ.

ಇದಕ್ಕೆ ಮೊದಲು, ಪಶ್ಚಿಮ ಬಂಗಾಳದಲ್ಲಿ ಅನಿಲ್ ಬೋಸ್ ಅವರು 5,92,502 ಅಂತರದ ಜಯ ಸಾಧಿಸಿದ್ದು ದಾಖಲೆಯಾಗಿತ್ತು.

ತಾಯಿ-ಮಗ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದರಿಂದ ಕಡಪಾ ಲೋಕಸಭಾ ಕ್ಷೇತ್ರ ಮತ್ತು ಪುಲಿವೇಂದುಲ ವಿಧಾನಸಭಾ ಕ್ಷೇತ್ರಗಳು ಖಾಲಿ ಬಿದ್ದಿದ್ದವು. ಕುಟುಂಬದ ಭದ್ರಕೋಟೆಯಾಗಿರುವ ಎರಡೂ ಕ್ಷೇತ್ರಗಳಲ್ಲಿ ಅನುಕಂಪದ ಅಲೆ ಮತ್ತು ಹಣ ಬಲದಿಂದಲೂ ತಾಯಿ - ಮಗ ವಿಜಯ ಸಾಧಿಸಿದ್ದು, ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಹೊಡೆತವಾಗಿಯೂ ಪರಿಣಮಿಸಿದೆ.

ಜಗನ್ ಅವರದು ಆಂಧ್ರಪ್ರದೇಶದಲ್ಲೇ ಹೊಸ ದಾಖಲೆಯ ಅಂತರದ ವಿಜಯ. ಅವರಿಗೆ ಒಟ್ಟು 6,87,068 ಮತಗಳು ಬಿದ್ದಿದ್ದರೆ, ಅವರೆದುರು ಸ್ಪರ್ಧಿಸಿದ್ದ ಆಂಧ್ರ ಪ್ರದೇಶ ಆರೋಗ್ಯ ಸಚಿವ. ಕಾಂಗ್ರೆಸ್‌ನ ಡಿ.ಎಲ್.ರವೀಂದ್ರ ರೆಡ್ಡಿಗೆ 1,44,015 ಮತಗಳು ಮತ್ತು ತೆಲುಗು ದೇಶಂನ ಎಂ.ವಿ.ಮೈಸೂರಾ ರೆಡ್ಡಿಗೆ 1,27,183 ಮತಗಳು ಲಭಿಸಿದೆ. ಜಗನ್ ಹೊರತಾಗಿ ಕಣದಲ್ಲಿದ್ದ ಎಲ್ಲ 41 ಅಭ್ಯರ್ಥಿಗಳೂ ಠೇವಣಿ ಕಳೆದುಕೊಂಡಿದ್ದಾರೆ.

ಪುಲಿವೇಂದುಲದಲ್ಲಿ ವಿಜಯಲಕ್ಷ್ಮಿ ಅವರು 85191 ಅಂತರದಿಂದ ವಿಜಯ ಸಾಧಿಸಿದ್ದು, ಅವರಿಗೆ 1,14,198 ಮತಗಳು ಬಿದ್ದಿವೆ. ಕಾಂಗ್ರೆಸ್ ಟಿಕೆಟಿನಲ್ಲಿ ವಿಜಯಲಕ್ಷ್ಮಿ ಎದುರು ನಿಂತ ಮೈದುನ (ವೈಎಸ್ಆರ್ ಸಹೋದರ) ವೈ.ಎಸ್.ವಿವೇಕಾನಂದ ರೆಡ್ಡಿ ಅವರಿಗೆ ಕೇವಲ 28,626 ಮತಗಳೂ, ಟಿಡಿಪಿಯ ಬಿ.ಟೆಕ್ ರವಿಗೆ 11,552 ಮತಗಳೂ ಬಿದ್ದು, ಹೀನಾಯ ಸೋಲನ್ನಪ್ಪಿ ಠೇವಣಿ ಕಳೆದುಕೊಂಡಿದ್ದಾರೆ.

ಕಡಪದಲ್ಲಿ 13.29 ಲಕ್ಷ ಮತದಾರರಿದ್ದು, 10.28 ಲಕ್ಷ ಮಂದಿ ಮತ ಚಲಾಯಿಸಿದ್ದರು. ಕಡಪದ ಏಳು ಅಸೆಂಬ್ಲಿ ಕ್ಷೇತ್ರಗಳಲ್ಲೊಂದ ಪುಲಿವೇಂದುಲದಲ್ಲಿ 1.89 ಲಕ್ಷದಲ್ಲಿ 1.56 ಲಕ್ಷ ಮಂದಿ ಓಟು ಹಾಕಿದ್ದರು. ಕಡಪದಲ್ಲಿ ಒಟ್ಟು 42 ಅಭ್ಯರ್ಥಿಗಳಿದ್ದರೆ, ಪುಲಿವೇಂದುಲದಲ್ಲಿ 25 ಅಭ್ಯರ್ಥಿಗಳು ಕಣದಲ್ಲಿದ್ದರು.

ತಾಯಿ, ಮಗ ಇಬ್ಬರೂ ಎದುರಾಳಿಗಳೆಲ್ಲರೂ ಠೇವಣಿ ಕಳೆದುಕೊಳ್ಳುವಂತೆ ವಿಜಯ ಸಾಧಿಸಿರುವುದು ಆಂಧ್ರದಲ್ಲಿ ಅಧಿಕಾರಾರೂಢ ಕಾಂಗ್ರೆಸ್ ಪಕ್ಷಕ್ಕೆ ಆತಂಕಕ್ಕೆ ಕಾರಣವಾಗಿದೆ.

2009ರಲ್ಲಿ ಜಗನ್ ಅವರು 1.79 ಲಕ್ಷ ಮತಗಳ ಅಂತರದಿಂದ ಕಡಪದಿಂದ ಜಯ ಗಳಿಸಿದ್ದರು. ಅವರಿಗೆ 5.43 ಲಕ್ಷ ಮತಗಳು ಬಿದ್ದಿದ್ದವು. ವೈಎಸ್ಆರ್ ಅವರು ಹೆಲಿಕಾಪ್ಟರ್ ದುರಂತದಲ್ಲಿ ಸಾವನ್ನಪ್ಪಿದ್ದ ಬಳಿಕ ನಡೆದಿದ್ದ ಪುಲಿವೇಂದುಲ ಉಪಚುನಾವಣೆಗಳಲ್ಲಿ ವಿಜಯಲಕ್ಷ್ಮಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದರು. ಪುಲಿವೇಂದುಲದಲ್ಲಿ ವೈಎಸ್ಆರ್ ಅವರು 2009ರಲ್ಲಿ 60 ಸಾವಿರ ಮತಗಳಿಂದ ಗೆದ್ದಿದ್ದರು.
ಇವನ್ನೂ ಓದಿ