ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ತಮಿಳುನಾಡು: ನೆಲಕಚ್ಚಿದ ಡಿಎಂಕೆ-ಕಾಂಗ್ರೆಸ್; ಜಯಾ ಅಧಿಕಾರಕ್ಕೆ (Tamilnadu Assembly Election Results 2011 | Jayalalithaa | AIADMK | Karunanidhi)
ಹಗರಣಗಳನ್ನು ಜನತೆ ಎಂದಿಗೂ ಕ್ಷಮಿಸುವುದಿಲ್ಲ ಎಂದು ತಮಿಳುನಾಡು ಜನತೆ ತೋರಿಸಿಕೊಟ್ಟಿದ್ದಾರೆ. ಮತ್ತು ಒಂದೇ ರೀತಿಯ ಹಗರಣಗಳಲ್ಲಿ ಮುಳುಗಿರುವವರಿಗೆ 5 ವರ್ಷಕ್ಕಿಂತ ಹೆಚ್ಚು ಆಳ್ವಿಕೆ ನಡೆಸಲು ಬಿಡುವುದಿಲ್ಲ ಎಂದೂ ಸಾಬೀತು ಮಾಡಿದ್ದಾರೆ. ಫಲಿತಾಂಶವಾಗಿ 2ಜಿ ಸ್ಪೆಕ್ಟ್ರಂ ಹಂಚಿಕೆ ಹಗರಣ ಕಳಂಕಿತ ಡಿಎಂಕೆ-ಕಾಂಗ್ರೆಸ್ ಮೈತ್ರಿಕೂಟವನ್ನು ಚುನಾವಣೆಗಳಲ್ಲಿ ಧೂಳೀಪಟ ಮಾಡಿರುವ ಮಾಜಿ ಮುಖ್ಯಮಂತ್ರಿ ಜಯಲಲಿತಾ ನೇತೃತ್ವದ ಎಐಎಡಿಎಂಕೆ, ಹೊಸ ಸರಕಾರ ರಚಿಸಲು ಸಿದ್ಧರಾಗುತ್ತಿದ್ದಾರೆ.

ದೇಶದಲ್ಲೇ ಕೋಲಾಹಲವೆಬ್ಬಿಸಿದ 2ಜಿ ಹಗರಣದಲ್ಲಿ ಡಿಎಂಕೆಯಿಂದ ಕೇಂದ್ರ ಸಚಿವರಾಗಿದ್ದ ಎ.ರಾಜಾ ಅವರು ತಪ್ಪಿತಸ್ಥರಾಗಿ ಜೈಲು ಸೇರಿದ್ದರೆ, ಕರುಣಾನಿಧಿ ಪುತ್ರಿ ಕನ್ನಿಮೋಳಿ ಕೂಡ ತನಿಖೆ ಎದುರಿಸುತ್ತಿದ್ದಾರೆ. ಇಂತಹಾ ಹಗರಣ ಕಳಂಕಿತರನ್ನು ಮತದಾರರು ಕ್ಷಮಿಸುವುದಿಲ್ಲ ಎಂಬ ಮಾತನ್ನು ಮನಗಂಡಿರುವ ಕಾಂಗ್ರೆಸ್‌ಗೆ ಈಗ ಒಳಗಿಂದೊಳಗೆ ಆತಂಕವಿದ್ದರೂ, ಡಿಎಂಕೆ ಮೈತ್ರಿ ಬಿಡುವುದಿಲ್ಲ ಎಂದು ಕಾಂಗ್ರೆಸ್ ಶುಕ್ರವಾರ ಘೋಷಿಸಿದೆ. ವಕ್ತಾರೆ ಜಯಂತಿ ನಟರಾಜನ್ ಇದನ್ನು ದೃಢಪಡಿಸಿದ್ದಾರೆ.

ಕರುಣಾನಿಧಿ ಪುತ್ರ ಸ್ಟಾಲಿನ್ ಸೋಲು...
ವಿಶೇಷವೆಂದರೆ, ಕರುಣಾನಿಧಿಯ ಉತ್ತರಾಧಿಕಾರಿ ಎಂದೇ ಬಿಂಬಿತವಾಗಿದ್ದ ಕಿರಿಯ ಪುತ್ರ, ಉಪಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಚೆನ್ನೈಯ ಕೊಳತ್ತೂರು ವಿಧಾನಸಭಾ ಕ್ಷೇತ್ರದಿಂದಲೇ ಸೋಲನ್ನಪ್ಪಿದ್ದಾರೆ.

86 ವರ್ಷದ ಕರುಣಾನಿಧಿಯವರ 'ಕೌಟುಂಬಿಕ ಆಡಳಿತ'ವನ್ನೇ ಟಾರ್ಗೆಟ್ ಮಾಡಿ ಚುನಾವಣಾ ಪ್ರಚಾರ ನಡೆಸಿದ್ದ ಜಯಲಲಿತಾ, ಈಗ ಅದರಲ್ಲಿ ಯಶಸ್ವಿಯಾಗಿದ್ದು, ಮರಳಿ ಅಧಿಕಾರಕ್ಕೇರುತ್ತಿದ್ದಾರೆ.

ವಿಶೇಷವೆಂದರೆ, ವೀಲ್ ಚೇರ್‌ನಲ್ಲೇ ತಿರುಗಾಡುತ್ತಿರುವ 86ರ ಹರೆಯದ ಕರುಣಾನಿಧಿಗೆ ಇದು ಕೊನೆಯ ಚುನಾವಣೆ ಎಂದು ಹೇಳಲಾಗುತ್ತಿದ್ದು, ಅವರು ತಮ್ಮ ಮಗ ಎಂ.ಕೆ.ಸ್ಟಾಲಿನ್ ಅವರನ್ನು ಉತ್ತರಾಧಿಕಾರಿಯನ್ನಾಗಿಸಲು ಪ್ರಯತ್ನಿಸುತ್ತಿದ್ದಾರೆ. ಹಿರಿಯ ಮಗ ಎಂ.ಕೆ.ಅಳಗಿರಿ ಮತ್ತು ಸೋದರ ಸಂಬಂಧಿ ದಯಾನಿಧಿ ಮಾರನ್, ಪುತ್ರಿ ಕನಿಮೋಳಿ ಇವರೆಲ್ಲರೂ ರಾಜಕೀಯದಲ್ಲಿ ಸಕ್ರಿಯವಾಗಿದ್ದಾರೆ.

ಮತ ಎಣಿಕೆ ಮುಂದುವರಿದಿದ್ದು, ಲಭ್ಯ ಟ್ರೆಂಡ್ ಪ್ರಕಾರ, ರಾಜ್ಯದ 234 ಕ್ಷೇತ್ರಗಳ ಪೈಕಿ ಎಐಎಡಿಎಂಕೆ ಮತ್ತು ಮಿತ್ರಕೂಟವು 202ರಲ್ಲಿ ಮುನ್ನಡೆ/ವಿಜಯ ಸಾಧಿಸಿದ್ದರೆ, ಆಡಳಿತಾರೂಢ ಡಿಎಂಕೆ-ಕಾಂಗ್ರೆಸ್ ಮೈತ್ರಿಕೂಟವು ಕೇವಲ 32 ಕ್ಷೇತ್ರಗಳಲ್ಲಿ ಮುನ್ನಡೆ/ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ.

2006ರ ಚುನಾವಣೆಗಳಲ್ಲಿ ಡಿಎಂಕೆ 96 ಸ್ಥಾನಗಳನ್ನು ಗೆದ್ದುಕೊಂಡಿದ್ದರೆ, ಎಐಎಡಿಎಂಕೆ 61 ಸ್ಥಾನಗಳನ್ನು ತನ್ನದಾಗಿಸಿಕೊಂಡಿತ್ತು. ಮಿತ್ರಪಕ್ಷ ಕಾಂಗ್ರೆಸ್‌ನ 34 ಸ್ಥಾನಗಳ ಸಹಾಯದಿಂದ ಕರುಣಾನಿಧಿ ಅವರು ಅಧಿಕಾರ ಚಲಾಯಿಸುತ್ತಿದ್ದರು.

ಜಯಲಲಿತಾ ಉವಾಚ...
ನಾನು ಪ್ರತಿ ಬಾರಿ ಅಧಿಕಾರಕ್ಕೆ ಬಂದಾಗಲೂ ತಮಿಳುನಾಡನ್ನು ಉದ್ಧಾರ ಮಾಡುವುದೇ ಆಯ್ತು. ಈ ಬಾರಿಯೂ ಕೆಟ್ಟು ಹೋಗಿರುವ ಕಾನೂನು ಸುವ್ಯವಸ್ಥೆ, ಆಡಳಿತ ಯಂತ್ರ ಇತ್ಯಾದಿಗಳನ್ನು ಸರಿಪಡಿಸುವೆ ಎಂದು ಹೇಳಿರುವ ಅವರು, ಮೈತ್ರಿಕೂಟದ ಸಹಾಯವಿಲ್ಲದೆಯೇ ಸರಕಾರ ರಚಿಸುತ್ತೇವೆ ಎಂದು ಹೇಳಿದ್ದಾರೆ.

ಭ್ರಷ್ಟಾಚಾರದ ವಿರುದ್ಧ, ಡಿಎಂಕೆ ದಬ್ಬಾಳಿಕೆ ವಿರುದ್ಧ ರೋಸಿ ಹೋದ ಜನತೆ ತಮಗೆ ನೀಡಿದ ಮತಗಳಿಗಾಗಿ ಅವರು ತಮಿಳರನ್ನು ಅಭಿನಂದಿಸಿದ್ದಾರೆ.
ಇವನ್ನೂ ಓದಿ