ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪ.ಬಂಗಾಳ: ಕೆಂಪು ಕೋಟೆ ಛಿದ್ರ; ಮಮತಾ ಮುಖ್ಯಮಂತ್ರಿ (West Bengal Election Results 2011 | Trinamool Congress | Congress | Mamata Banerjee)
ಪಶ್ಚಿಮ ಬಂಗಾಳದ ಕೆಂಪು ಭೂಮಿಯಲ್ಲಿ ಮಮತಾ ಎಕ್ಸ್‌ಪ್ರೆಸ್‌ಗೆ ಹಸಿರು ನಿಶಾನೆ ದೊರೆತಿದೆ. 34 ವರ್ಷಗಳ ಎಡಪಂಥೀಯ ಆಳ್ವಿಕೆಯನ್ನು ಮಟ್ಟ ಹಾಕುವ ಜೀವನದ ಅತಿ ದೊಡ್ಡ ಕನಸನ್ನು ನನಸು ಮಾಡಿಕೊಂಡಿರುವ ಕೇಂದ್ರ ರೈಲ್ವೇ ಸಚಿವೆ ಮಮತಾ ಬ್ಯಾನರ್ಜಿ, ಅವರ ನೇತೃತ್ವದ ತೃಣಮೂಲ ಕಾಂಗ್ರೆಸ್ ಮೈತ್ರಿಕೂಟವು, ಮೇ 18ರಂದು ಪ್ರಮಾಣವಚನ ಸ್ವೀಕರಿಸಲಿದೆ ಎಂದು ಹೇಳಿದ್ದಾರೆ.

ಮುಖ್ಯಮಂತ್ರಿಗೇ ಸೋಲು...
ಭಟ್ಟಾಚಾರ್ಜೀ ಅವರು ಫಲಿತಾಂಶ ಬರತೊಡಗಿದ ತಕ್ಷಣ ಶುಕ್ರವಾರ ಮಧ್ಯಾಹ್ನವೇ ರಾಜ್ಯಪಾಲ ಎಂ.ಕೆ.ನಾರಾಯಣನ್ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದರು. ಅವರು ಬಂಗಾಳ ಇತಿಹಾಸದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸೋತ ಎರಡನೇ ಮುಖ್ಯಮಂತ್ರಿ ಎಂಬ ಅಪಖ್ಯಾತಿಗೂ ಪಾತ್ರರಾದರು. ಈ ಹಿಂದೆ, ಬಂಗಾಳದ ಮೂರನೇ ಮುಖ್ಯಮಂತ್ರಿಯಾಗಿದ್ದ ಪ್ರಫುಲ್ಲ ಸೇನ್ ಅವರು ಚುನಾವಣೆಯಲ್ಲಿ ಸೋತಿದ್ದರು.

ಸಿಪಿಎಂಗೆ ಇದು ಐತಿಹಾಸಿಕ ಸೋಲು. ಮುಖ್ಯಮಂತ್ರಿ ಅವರು ಕೂಡ ತೃಣಮೂಲದ ಅಲೆಗೆ ಕೊಚ್ಚಿ ಹೋಗಿದ್ದು, ತೃಣಮೂಲ ಕಾಂಗ್ರೆಸ್ ಅಭ್ಯರ್ಥಿಯೆದುರು ಪರಾಭವ ಅನುಭವಿಸಿದ್ದಾರೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅತಿ ದೀರ್ಘಾವಧಿ ಆಳ್ವಿಕೆ ನಡೆಸಿದ ಖ್ಯಾತಿ ಹೊಂದಿದ್ದ ಸಿಪಿಎಂ ನೇತೃತ್ವದ ಎಡರಂಗ ಸರಕಾರದ ಹೆಚ್ಚಿನ ಮಂತ್ರಿಗಳು ಕೂಡ ಚುನಾವಣೆಯಲ್ಲಿ ನೆಲ ಕಚ್ಚಿದ್ದಾರೆ.

ಸ್ವಾತಂತ್ರ್ಯ ದೊರೆತ 64 ವರ್ಷಗಳ ನಂತರ ಪಶ್ಚಿಮ ಬಂಗಾಳಕ್ಕೆ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿ ಮಮತಾ ಬ್ಯಾನರ್ಜಿ ಅವರು ಅಧಿಕಾರಕ್ಕೇರಲಿದ್ದಾರೆ. ಎಡರಂಗದ ಸೋಲಂತೂ ಪಶ್ಚಿಮ ಬಂಗಾಳದ ಸಂಪೂರ್ಣ ಚಿತ್ರಣವನ್ನೇ ಬದಲಾಯಿಸಿಬಿಡಲಿದೆ.

1977ರಿಂದಲೂ ಎಡರಂಗ ವಿಜಯ ಸಾಧಿಸುತ್ತಲೇ ಬಂದಿದ್ದ ಕೆಂಪು ಭದ್ರ ಕೋಟೆಗಳಾದ ಬರ್ದ್ವಾನ್, ಬಂಕುರಾ, ಪುರುಲಿಯಾ ಮುಂತಾದ ಜಿಲ್ಲೆಗಳಲ್ಲಿ ಕೂಡ ಈ ಬಾರಿ ನಲುಗಿವೆ. ರಾಜ್ಯದ ಒಟ್ಟು 294 ಕ್ಷೇತ್ರಗಳಲ್ಲಿ ಮಮತಾ ದೀದಿ ನೇತೃತ್ವದ ಮಿತ್ರಕೂಟವು 190ಕ್ಕೂ ಹೆಚ್ಚು ಸ್ಥಾನಗಳನ್ನು ತಮ್ಮದಾಗಿಸಿಕೊಂಡು, ವಿಜಯ ಪತಾಕೆ ಹಾರಿಸಿದರೆ, ಆಡಳಿತದಲ್ಲಿದ್ದ ಎಡರಂಗ ಕೇವಲ 60-70 ಸ್ಥಾನಗಳಿಗೆ ಸೀಮಿತಗೊಂಡಿದೆ.

2006 ಚುನಾವಣೆಗಳಲ್ಲಿ 294ರಲ್ಲಿ ಸಿಪಿಎಂ ಮೈತ್ರಿಕೂಟವು 235 ಸ್ಥಾನಗಳನ್ನು ಕಬಳಿಸಿಕೊಂಡಿತ್ತು. ತೃಣಮೂಲ ಕಾಂಗ್ರೆಸ್ 30 ಹಾಗೂ ಕಾಂಗ್ರೆಸ್ ಪಕ್ಷವು 24 ಸ್ಥಾನಗಳಲ್ಲಿ ಗೆದ್ದಿತ್ತು. ಇತರರು 5 ಸ್ಥಾನಗಳಲ್ಲಿ ಗೆದ್ದಿದ್ದರು.

ಮತದಾರರಿಗೆ ಅಭಿನಂದನೆ: ಇದೇ ವೇಳೆ ಮಮತಾ ಬ್ಯಾನರ್ಜಿ ಅವರು ಮತದಾರರಿಗೆ ಅಭಿನಂದನೆ ಸಲ್ಲಿಸಿದ್ದು, ಇದು ಮಾ (ತಾಯಿ), ಮಾತಿ (ಭೂಮಿ) ಮತ್ತು ಮಾನುಷ್‌ಗೆ (ಜನರಿಗೆ) ದೊರೆತ ದಿಗ್ವಿಜಯ ಎಂದು ಬಣ್ಣಿಸಿದ್ದಾರೆ.

ಮೇ 18ರಂದು ತಮ್ಮ ನೇತೃತ್ವದ ಸರಕಾರವು ಪ್ರಮಾಣ ವಚನ ಸ್ವೀಕರಿಸಲಿರುವುದಾಗಿಯೂ ಅವರು ಪ್ರಕಟಿಸಿದ್ದಾರೆ.
ಇವನ್ನೂ ಓದಿ