ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ತನಾ ಕೈ ಬಲ 35ರಿಂದ 5ಕ್ಕೆ, ಠುಸ್ ಆದ ರಾಹುಲ್ ಪ್ರಭಾವ (Tamilnadu | Rahul Gandhi | Congress | Election Result 2011 | AIADMK)
PTI
ಕಾಂಗ್ರೆಸ್‌ನ 'ಯುವರಾಜ', ಭಾವೀ ಪ್ರಧಾನಿ ಎಂದೇ ಬಿಂಬಿಸಲ್ಪಡುತ್ತಿರುವ ರಾಹುಲ್ ಗಾಂಧಿ ಅವರು ಪಕ್ಷವನ್ನು ದೇಶದಲ್ಲಿ ಏಕಾಂಗಿಯಾಗಿ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಾ, ಚುನಾವಣೆಗಳು ನಡೆಯುತ್ತಿರುವ ರಾಜ್ಯಗಳಲ್ಲೆಲ್ಲಾ ಪ್ರವಾಸ ಮಾಡಿದ್ದಾರೆ. ಆದರೆ ಅವರು ತೆರಳಿದಲ್ಲೆಲ್ಲಾ ಕಾಂಗ್ರೆಸ್ ಇದುವರೆಗೆ ಬಹುತೇಕ ಸೋಲುಗಳನ್ನೇ ಕಂಡಿವೆ. ಇದೀಗ ಹೊಚ್ಚ ಹೊಸ ಸೇರ್ಪಡೆ ತಮಿಳುನಾಡು. ರಾಹುಲ್ ಗಾಂಧಿ ಸ್ವತಃ ಟಿಕೆಟ್ ಕೊಡಿಸಿದ್ದ ಎಲ್ಲ 10 ಮಂದಿ ಯುವ ಕಾಂಗ್ರೆಸ್ ಅಭ್ಯರ್ಥಿಗಳು ಸೋಲನ್ನಪ್ಪಿದ್ದಾರೆ.

ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ರಾಹುಲ್ ಗಾಂಧಿ ಮುಂದಾಳುತ್ವದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲು ಮಿತ್ರಪಕ್ಷವಾದ ಡಿಎಂಕೆಯಿಂದ 65 ಕ್ಷೇತ್ರಗಳನ್ನು ಕೇಳಿರುವುದು ಕೇಂದ್ರ ಸರಕಾರದ ಪತನದವರೆಗೂ ಹೋಗಿರುವ ಘಟನೆಯನ್ನು ಇಲ್ಲಿ ನೆನಪಿಸಿಕೊಳ್ಳಬೇಕು. ಡಿಎಂಕೆ ಕೊಡುವುದಿಲ್ಲ ಎನ್ನುತ್ತಾ ಯುಪಿಎಯಿಂದ ಹೊರಬರುವುದಕ್ಕೂ ಮುಂದಾಗಿತ್ತು. ಕೊನೆಗೆ ಒಪ್ಪಂದವಾಗಿ 65ರ ಬದಲು 63 ಸ್ಥಾನ ಕೊಡುವುದಾಗಿ ಡಿಎಂಕೆ ಹೇಳಿದ ಬಳಿಕ ವಿವಾದ ತಣ್ಣಗಾಗಿತ್ತು. ಇದೀಗ, ರಾಹುಲ್ ಗಾಂಧಿ ಅವರು ಸ್ವತಃ ಹೆಕ್ಕಿ ತೆಗೆದ ಯುವ ಕಾಂಗ್ರೆಸ್‌ನ ಅಭ್ಯರ್ಥಿಗಳೆಲ್ಲರೂ ತಮಿಳುನಾಡಿನಲ್ಲಿ ಜಯಲಲಿತಾ ಅಲೆಯಲ್ಲಿ ಕೊಚ್ಚಿ ಹೋಗಿದ್ದಾರೆ.

ಕಳೆದ ಬಾರಿ, 2006ರಲ್ಲಿ 45 ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ ಪಕ್ಷವು 34ರಲ್ಲಿ ಗೆದ್ದಿತ್ತು. ಆದರೆ ಈ ಬಾರಿ 2ಜಿ ಹಗರಣ ಕಳಂಕಿತ ಡಿಎಂಕೆ ಜೊತೆಗೂಡಿ 63ರಲ್ಲಿ ಸ್ಪರ್ಧಿಸಿಯೂ ಕೇವಲ 5 ಸ್ಥಾನದಲ್ಲಿ ಗೆಲುವು ಸಾಧಿಸಿದೆ.

ರಾಹುಲ್ ಆರಿಸಿದ ಎಲ್ಲರೂ ಔಟ್...
2016ರಲ್ಲಿ ತಮಿಳುನಾಡಿಗೆ ಕಾಂಗ್ರೆಸ್ ಮುಖ್ಯಮಂತ್ರಿ ಎಂದು ಹೇಳುತ್ತಿದ್ದ ರಾಹುಲ್ ಗಾಂಧಿ ಅವರು, ಯುವ ಕಾಂಗ್ರೆಸ್ಸನ್ನು ಬಲಪಡಿಸಲೆಂದು ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ಭರ್ಜರಿ ಪ್ರವಾಸ ಕೈಗೊಂಡಿದ್ದರು. 14 ಲಕ್ಷ ಯುವ ಕಾಂಗ್ರೆಸ್ ಸದಸ್ಯರನ್ನೂ ಮಾಡಿದ್ದರು. ಆದರೆ ಫಲ ಮಾತ್ರ ಶೂನ್ಯ.

ತಮಿಳುನಾಡು ಯುವ ಕಾಂಗ್ರೆಸ್ ಮುಖ್ಯಸ್ಥ ಯುವರಾಜ್ (ಈರೋಡ್ ವೆಸ್ಟ್) ಮತ್ತು ಯುವ ಕಾಂಗ್ರೆಸ್ ರಾಷ್ಟ್ರೀಯ ಕಾರ್ಯದರ್ಶಿ ಜ್ಯೋತಿಮಣಿ (ಅರವಕುರಿಚ್ಚಿ ಕ್ಷೇತ್ರ)ದಲ್ಲಿ ಸೋಲನ್ನಪ್ಪಿದ್ದಾರೆ.

ಈರೋಡ್ ವೆಸ್ಟ್ ಕ್ಷೇತ್ರವು ಡಿಎಂಕೆ ಮತ್ತು ಕಾಂಗ್ರೆಸ್ ಮಧ್ಯೆ ದೊಡ್ಡ ಬಿಕ್ಕಟ್ಟಿಗೆ ಕಾರಣವಾಗಿದ್ದ ಕ್ಷೇತ್ರಗಳಲ್ಲಿ ಒಂದು. ಇಲ್ಲಿದ್ದ ಹಾಲಿ ಡಿಎಂಕೆ ಶಾಸಕ ಎನ್.ಕೆ.ಕೆ.ಪಿ. ರಾಜಾ ಅವರನ್ನು ಕೊನೆಗೂ ಬೇರೆ ಕ್ಷೇತ್ರಕ್ಕೆ ವರ್ಗಾಯಿಸಿ, ಅಲ್ಲಿ ಯುವರಾಜ್‌ಗೆ ಕಾಂಗ್ರೆಸ್ ಟಿಕೆಟ್ ನೀಡಲಾಗಿತ್ತು. ರಾಹುಲ್ ಯುವರಾಜ್ ಹಾಗೂ ಎನ್.ಕೆ.ಕೆ.ಪಿ.ರಾಜಾ ಇಬ್ಬರ ಪರವಾಗಿಯೂ ಪ್ರಚಾರ ಕಾರ್ಯದಲ್ಲಿ ಭಾಗಿಯಾದರು. ಇಬ್ಬರೂ ಸೋತರು.

ರಾಹುಲ್ ಗಾಂಧಿಯವರು ಯುವ ಕಾಂಗ್ರೆಸ್‌ನ 10 ಮಂದಿಗೆ ಕಾಂಗ್ರೆಸ್ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದರು. ಇದು ಹಿರಿಯ ಕಾಂಗ್ರೆಸಿಗರಲ್ಲಿ ಅಸಮಾಧಾನಕ್ಕೂ ಕಾರಣವಾಗಿತ್ತು. ಆದರೆ ಎಲ್ಲ 10 ಮಂದಿಯೂ ಸೋತಿದ್ದಾರೆ. ಯುವರಕಾಜ್ ಮತ್ತು ಜ್ಯೋತಿಮಣಿ ಅವರಲ್ಲದೆ, ಅಣ್ಣಾ ನಗರ ಕ್ಷೇತ್ರದಿಂದ ವಿ.ಕೆ.ಅರಿವಳಗನ್, ಆಂಬೂರು ಕ್ಷೇತ್ರದಲ್ಲಿ ಏಳಂಚೆರಿಯನ್, ಅತ್ತೂರಿನಲ್ಲಿ ಅರ್ಧನಾರಿ, ಪೆರವುರಣೈಯಲ್ಲಿ ಕೆ.ಮಹೇಂದ್ರನ್, ವೃದ್ಧಾಚಲಂನಲ್ಲಿ ನೀತಿ ರಾಜನ್, ತಿರುಪುರ್ ದಕ್ಷಿಣದಲ್ಲಿ ಸೆಂದಿಲ್ ಕುಮಾರ್, ಮದುರೈ ದಕ್ಷಿಣದಲ್ಲಿ ಎಸ್.ಪಿ.ವರದರಾಜನ್, ವಿರುಧ್‌ನಗರದಲ್ಲಿ ನವೀನ್ ಆರ್ಮ್‌ಸ್ಟ್ರಾಂಗ್ ಕೂಡ ಸೋತವರಲ್ಲಿ ಸೇರಿದ್ದಾರೆ.
ಇವನ್ನೂ ಓದಿ