ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 500 ಕೋಟಿ ಕಟ್ಟಡ ಠುಸ್: ಹಳೆ ಕಟ್ಟಡದಲ್ಲೇ ಜಯಾ ಸರಕಾರ (Jayalalithaa | Karunanidhi | Fort St George | TN Secretariat complex)
PTI
ಭರ್ಜರಿ ಜನಾದೇಶದೊಂದಿಗೆ ಡಿಎಂಕೆ-ಕಾಂಗ್ರೆಸ್ ಮೈತ್ರಿಕೂಟವನ್ನು ಧೂಳೀಪಟ ಮಾಡಿ ಮೂರನೇ ಬಾರಿ ತಮಿಳುನಾಡು ಮುಖ್ಯಮಂತ್ರಿ ಹುದ್ದೆಗೇರಲು ಸಿದ್ಧವಾಗಿರುವ ಎಐಎಡಿಎಂಕೆ ನಾಯಕಿ ಜೆ.ಜಯಲಲಿತಾ, ಭಾನುವಾರ ರಾಜ್ಯಪಾಲ ಸುರ್ಜಿತ್ ಸಿಂಗ್ ಬರ್ನಾಲ ಅವರನ್ನು ಭೇಟಿಯಾಗಿ ಸರಕಾರ ರಚನೆಗೆ ಹಕ್ಕು ಮಂಡಿಸಲಿದ್ದಾರೆ. ಇದೇ ವೇಳೆ, 500 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಹೊಸ ಅಸೆಂಬ್ಲಿ ಕಟ್ಟಡದ ಬದಲು, ಹಳೆಯ ಫೋರ್ಟ್ ಸೈಂಟ್ ಜಾರ್ಜ್ ಕಟ್ಟಡದಿಂದಲೇ ಸರಕಾರ ನಡೆಸಲು ಜಯಲಲಿತಾ ತೀರ್ಮಾನಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

63ರ ಹರೆಯದ ಜಯಲಲಿತಾ ಸುದ್ದಿಗಾರರಿಗೆ ಸ್ವತಃ ಶನಿವಾರ ಈ ವಿಷಯ ತಿಳಿಸಿದ್ದಾರೆ. 234 ಸದಸ್ಯಬಲದ ವಿಧಾನಸಭೆಯಲ್ಲಿ ಜಯಾ ಅವರ ಮೈತ್ರಿಕೂಟಕ್ಕೆ 203 ಸ್ಥಾನಗಳು ದೊರೆತಿದ್ದು, ಬಹುಮತಕ್ಕೆ ಬೇಕಾಗಿರುವುದು 118 ಮಾತ್ರ. ಆದರೆ ಜಯಾ ಅವರ ಪಕ್ಷಕ್ಕೇ 150 ಸ್ಥಾನಗಳು ಸಿಕ್ಕಿರುವುದರಿಂದ ಮಿತ್ರಪಕ್ಷಗಳಿಗೆ ಸರಕಾರದಲ್ಲಿ ಅವಕಾಶ ಕೊಡುವುದಿಲ್ಲ ಎಂದು ಈಗಾಗಲೇ ಹೇಳಿದ್ದಾರೆ ಅವರು.

ಡಿಎಂಕೆ ಮೈತ್ರಿಕೂಟಕ್ಕೆ ಕೇವಲ 31 ಸ್ಥಾನಗಳು ದೊರೆತಿದ್ದು, ಕಳೆದ ಬಾರಿ 34 ಗೆದ್ದಿದ್ದ ಕಾಂಗ್ರೆಸ್ ಪಕ್ಷ ಕೇವಲ 5ಕ್ಕೆ ಇಳಿದಿದೆ. ಜಯಾ ಮೈತ್ರಿಕೂಟದಲ್ಲಿ ಸ್ಪರ್ಧಿಸಿರುವ ನಟ, ರಾಜಕಾರಣಿ ವಿಜಯಕಾಂತ್ ನೇತೃತ್ವದ ಡಿಎಂಡಿಕೆ 28 ಸ್ಥಾನಗಳನ್ನು ಕಬಳಿಸಿ, ಎರಡನೇ ಅತಿದೊಡ್ಡ ಪಕ್ಷವಾಗಿ ಮೂಡಿಬಂದಿದೆ. ಅದು ಕಳೆದ ಚುನಾವಣೆಯಲ್ಲಿ ಕೇವಲ 1 ಸ್ಥಾನ ಗಳಿಸಿತ್ತು.

ರಾಜ್ಯಪಾಲರನ್ನು ಭೇಟಿ ಮಾಡಿದ ಬಳಿಕ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಕುರಿತು ವಿವರ ನೀಡಲಾಗುತ್ತದೆ ಎಂದು ಜಯಲಲಿತಾ ಹೇಳಿದ್ದಾರೆ.

ಹೊಸ ವಿಧಾನಸೌಧಕ್ಕೆ ಕಾಲಿಡಲ್ಲ ಜಯಾ...
ಇದೇ ವೇಳೆ, ಮುಖ್ಯಮಂತ್ರಿ ಕಚೇರಿಯೂ ಸೇರಿದಂತೆ ಸರಕಾರದ ಹಲವು ಇಲಾಖೆಗಳಿರುವ, 17ನೇ ಶತಮಾನದ ಫೋರ್ಟ್ ಸೈಂಟ್ ಜಾರ್ಜ್‌ ಇದೀಗ ಸುಣ್ಣ ಬಣ್ಣ ಪಡೆದುಕೊಳ್ಳಲಾರಂಭಿಸಿರುವುದು, ಜಯಲಲಿತಾ ಅವರು ಹೊಸ ವಿಧಾನಸೌಧ ಕಟ್ಟಡದಿಂದ ಆಡಳಿತ ನಡೆಸುವುದಿಲ್ಲ ಎಂಬುದರ ಮುನ್ಸೂಚನೆ ನೀಡಿದೆ.

ರಕ್ಷಣಾ ಇಲಾಖೆಗೆ ಸೇರಿದ ಈ ಕಟ್ಟಡವನ್ನು ರಾಜ್ಯ ಸರಕಾರ ಲೀಸ್ ಆಧಾರದಲ್ಲಿ ಪಡೆದುಕೊಂಡಿದೆ. ಬ್ರಿಟಿಷ್ ಕಾಲದಿಂದಲೂ ಅಧಿಕಾರದ ಕೇಂದ್ರವಾಗಿತ್ತು ಈ ಕಟ್ಟಡ. 2009ರಲ್ಲಿ ಡಿಎಂಕೆ ಸರಕಾರವು ಚೆನ್ನೈ ಹೃದಯಭಾಗದ ಅಣ್ಣಾ ಸಾಲೈ ಪಕ್ಕದಲ್ಲೇ ಹೊಸ ಕಟ್ಟಡವನ್ನು ನಿರ್ಮಿಸಿತ್ತು. ಇದು ನಿರ್ಗಮನ ಮುಖ್ಯಮಂತ್ರಿ ಕರುಣಾನಿಧಿಯವರ ಕನಸಿನ ಯೋಜನೆ. ಆದರೆ ರಾಜಕೀಯವಾಗಿ ಬದ್ಧವಿರೋಧಿಯಾಗಿರುವುದರಿಂದ ಕರುಣಾನಿಧಿಯ ಕಟ್ಟಡದಲ್ಲಿ ತಾನು ಆಡಳಿತ ನಡೆಸುವುದಿಲ್ಲ ಎಂಬ ತೀರ್ಮಾನ ಕೈಗೊಂಡಿದ್ದಾರೆಯೇ ಜಯಲಲಿತಾ ಎಂಬುದು ಉತ್ತರ ಸಿಗದ ಪ್ರಶ್ನೆ.

500 ಕೋಟಿ ರೂ. ವೆಚ್ಚದ ಈ ಕಟ್ಟಡ ಸಂಕೀರ್ಣವನ್ನು ಕಳೆದ ವರ್ಷ ಪ್ರಧಾನಿ ಮನಮೋಹನ್ ಸಿಂಗ್ ಅವರು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಉಪಸ್ಥಿತಿಯಲ್ಲಿ ಈ ಐಷಾರಾಮಿ ಕಟ್ಟಡವನ್ನು ಉದ್ಘಾಟಿಸಿದ್ದರು. ಈ ಕಟ್ಟಡದ ನಿರ್ಮಾಣ ಕಾರ್ಯವು ಇನ್ನಷ್ಟೇ ಪೂರ್ಣಗೊಳ್ಳಬೇಕಿದೆ. ಬಜೆಟ್ ಅಧಿವೇಶನವು ಇದೇ ಕಟ್ಟಡಲ್ಲಿ ಆಗಿದ್ದರೂ, ಸರಕಾರದ ಎಲ್ಲ ಇಲಾಖೆಗಳು ಇನ್ನೂ ಇಲ್ಲಿಗೆ ವರ್ಗಾವಣೆಯಾಗಿಲ್ಲ.

ಇದುವರೆಗೆ ಪ್ರತಿಪಕ್ಷ ನಾಯಕಿಯಾಗಿದ್ದ ಜಯಲಲಿತಾ, ಹೊಸ ಅಸೆಂಬ್ಲಿ ಕಟ್ಟಡದ ವಿನ್ಯಾಸ, ರೂಪುರೇಷೆಗಳು ಸರಿ ಇಲ್ಲ ಎಂದು ಆರೋಪಿಸಿ, ಇಲ್ಲಿ ಕಲಾಪಕ್ಕೆ ಹಾಜರಾಗಿರಲಿಲ್ಲ.

ವಾಸ್ತವವಾಗಿ ಬಜೆಟ್ ಅಧಿವೇಶನದ ಅಂತ್ಯದಲ್ಲಿ ಸದನದ ಎಐಎಡಿಎಂಕೆ ಉಪನಾಯಕ ಒ.ಪನೀರ್‌ಸೆಲ್ವಂ ಅವರು ಮಾತನಾಡಿ, ತಮ್ಮ ಪಕ್ಷವೇ ಮುಂದೆ ಅಧಿಕಾರಕ್ಕೆ ಬರಲಿದ್ದು, ಫೋರ್ಟ್ ಸೈಂಟ್ ಜಾರ್ಜ್‌ನಿಂದಲೇ ಅದು ಕಾರ್ಯನಿರ್ವಹಿಸಲಿದೆ ಎಂದು ಘೋಷಿಸಿದ್ದರು.
ಇವನ್ನೂ ಓದಿ